ಉಪ್ಪಿನಂಗಡಿ: ಪುತ್ತೂರು ನಗರಸಭೆಗೆ ಪೂರೈಕೆಯಾಗುವ ಜಲಸಿರಿ ಯೋಜನೆಯ ಶುದ್ಧ ಕುಡಿಯುವ ನೀರನ್ನು ಇಡೀ ನೆಕ್ಕಿಲಾಡಿ ಗ್ರಾಮಕ್ಕೆ ಒದಗಿಸಬೇಕೆಂದು ಜಲಸಿರಿ ನೀರಿಗಾಗಿ ಹೋರಾಟ ನಡೆಸುತ್ತಿರುವವರು ಪುತ್ತೂರು ನಗರ ಸಭೆಯ ಪೌರಾಯುಕ್ತರಾದ ಮಧು ಎಸ್. ಮನೋಹರ್ ಅವರಿಗೆ ಮನವಿ ಮಾಡಿದರು.
34 ನೆಕ್ಕಿಲಾಡಿಯಲ್ಲಿ ಎರಡು ಕೊಳವೆ ಬಾವಿಗಳ ನೀರು ಕುಡಿಯಲು ಯೋಗ್ಯವಿಲ್ಲವೆಂದು ಪ್ರಯೋಗಾಲಯದಿಂದ ವರದಿ ಬಂದಿದೆ. 34 ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಆಶ್ರಯಿಸಿರುವ ಎಲ್ಲಾ ಕೊಳವೆ ಬಾವಿಗಳ ನೀರು ಕೂಡಾ ಕಲುಷಿತವಾಗಿರುವ ಸಾಧ್ಯತೆ ಇದೆ. ಆದ್ದರಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನವಾಗುವಲ್ಲಿಯವರೆಗಾದರೂ 34 ನೆಕ್ಕಿಲಾಡಿ ಗ್ರಾಮಕ್ಕೆ ಪುತ್ತೂರು ನಗರ ಸಭಾ ವ್ಯಾಪ್ತಿಗೆ ಪೂರೈಕೆಯಾಗುವ ಜಲಸಿರಿ ಯೋಜನೆಯ ಶುದ್ಧ ಕುಡಿಯುವ ನೀರು ನೀಡಬೇಕೆಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಮನವಿಗೆ ಸ್ಪಂದಿಸಿದ ಪೌರಾಯುಕ್ತರು, ಇದನ್ನು ನಗರ ಸಭೆಯ ಸಾಮಾನ್ಯ ಸಭೆಯಲ್ಲಿಟ್ಟು ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಮನವಿ ನೀಡಿದ ನಿಯೋಗದಲ್ಲಿ ಜಲಸಿರಿ ನೀರಿಗಾಗಿ ಹೋರಾಟ ನಡೆಸುತ್ತಿರುವ 34 ನೆಕ್ಕಿಲಾಡಿಯ ಮೊಹಮ್ಮದ್ ರಫೀಕ್, ಅಸ್ಕರ್ ಅಲಿ, ಯು. ಶಬೀರ್ ಅಹ್ಮದ್ ಹಾಗೂ 34 ನೆಕ್ಕಿಲಾಡಿ ಕಾಂಗ್ರೆಸ್ ವಲಯಾಧ್ಯಕ್ಷೆ ಅನಿ ಮಿನೇಜಸ್ ಉಪಸ್ಥಿತರಿದ್ದರು.