ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್ 2022 ರಲ್ಲಿ ಅಮೃತ ಗ್ರಾಮ ಯೋಜನೆಗೆ ಆಯ್ಕೆಯಾಗಿದ್ದು ಯೋಜನೆಯ ನಿಯಾನುಸಾರದಂತೆ ಗ್ರಾಮದಲ್ಲಿ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿದೆ. ಅಮೃತ ಗ್ರಾಮ ಯೋಜನೆಯಲ್ಲಿ 25 ಲಕ್ಷ ರೂಪಾಯಿಗಳ ಅನುದಾನವಿದ್ದು ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿರುವ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಿದ್ದರೂ ಯಾವುದೇ ಅನುದಾನ ಬರದೇ ಇರುವ ಬಗ್ಗೆ ಸರಕಾರಕ್ಕೆ ಮತ್ತೊಮ್ಮೆ ಬರೆದುಕೊಳ್ಳುವುದು ಎಂದು ಕೆದಂಬಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯು ಗ್ರಾಪಂ ಅಧ್ಯಕ್ಷೆ ಸುಜಾತ ಮುಳಿಗದ್ದೆಯವರ ಅಧ್ಯಕ್ಷತೆಯಲ್ಲಿ ದ.10ರಂದು ಗ್ರಾಪಂ ಸಭಾಂಗಣದಲ್ಲಿ ನಡೆಯಿತು. ರತನ್ ರೈ ಕುಂಬ್ರರವರು ವಿಷಯ ಪ್ರಸ್ತಾಪಿಸಿ, ನಮ್ಮ ಪಂಚಾಯತ್ 2022 ರಲ್ಲಿ ಅಮೃತ ಗ್ರಾಮದ ಯೋಜನೆಗೆ ಆಯ್ಕೆಯಾಗಿದ್ದು ಸರಕಾರದ ಸುತ್ತೋಲೆಯಂತೆ ಎಲ್ಲಾ ಅಭಿವೃದ್ದಿ ಕೆಲಸಗಳು ಮುಗಿದಿದ್ದರೂ ಇದುವರೆಗೆ ಅನುದಾನ ಮಾತ್ರ ಬಂದಿಲ್ಲ. 15 ನೇ ಹಣಕಾಸು ಯೋಜನೆಯ ಅನುದಾನವನ್ನು ಬಳಸಿಕೊಂಡು ಅಮೃತ ಗ್ರಾಮ ಯೋಜನೆಯ ಕಾಮಗಾರಿಗಳನ್ನು ಮಾಡಲಾಗಿದ್ದು ಅನುದಾನ ಬರದೇ ಸಮಸ್ಯೆಯಾಗಿದೆ. ಕಾಮಗಾರಿಗಳು ಪೂರ್ಣಗೊಂಡಿರುವ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಿದ್ದರೂ ಅನುದಾನ ಬಂದಿಲ್ಲ ಆದ್ದರಿಂದ ಮತ್ತೊಮ್ಮೆ ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಬೇಕು ಎಂದು ರತನ್ ರೈ ತಿಳಿಸಿದರು. ಇದಕ್ಕೆ ಎಲ್ಲಾ ಸದಸ್ಯರುಗಳು ಧ್ವನಿಗೂಡಿಸಿದರು. ಅದರಂತೆ ನಿರ್ಣಯ ಕೈಗೊಳ್ಳಲಾಯಿತು.
ನೀರಿನ ಶುಲ್ಕ ಪಾವತಿಸದಿದ್ದರೆ ಸಂಪರ್ಕ ಕಡಿತ
ಈಗಾಗಲೇ ಪಂಚಾಯತ್ ಸಲ್ಲತಕ್ಕ ಸುಮಾರು 3 ಲಕ್ಷ ರೂಪಾಯಿಯಷ್ಟು ಕುಡಿಯುವ ನೀರಿನ ಶುಲ್ಕ ಬಾಕಿಯಿದ್ದು ಈ ಬಗ್ಗೆ ಫಲಾನುಭವಿಗಳಿಗೆ ಹಲವು ಬಾರಿ ತಿಳಿಸಿದ್ದರೂ ಕುಡಿಯುವ ನೀರಿನ ಶುಲ್ಕ ಪಾವತಿ ಮಾಡದೇ ಇರುವುದರಿಂದ ಯಾರು ಶುಲ್ಕ ಪಾವತಿಸದೆ 3 ತಿಂಗಳಿನಿಂದ ಹೆಚ್ಚು ಬಾಕಿ ಇರಿಸಿಕೊಂಡಿದ್ದಾರೋ ಅವರಿಗೆ ಇರುವ ನೀರಿನ ಸಂಪರ್ಕವನ್ನು ಕಡಿತ ಮಾಡುವುದು ಎಂದು ನಿರ್ಣಯಿಸಲಾಯಿತು. ರತನ್ ರೈ ಕುಂಬ್ರರವರು ವಿಷಯ ಪ್ರಸ್ತಾಪಿಸಿ, ಈಗಾಗಲೇ ಪಂಚಾಯತ್‌ನಿಂದ ಪರಿಶಿಷ್ಟ ಜಾತಿ ಸಮುದಾಯದವರಿಗೆ ಒಂದು ವರ್ಷ ಕಾಲ ಉಚಿತ ನೀರನ್ನು ನೀಡಿದ್ದೆವು. ಆ ಬಳಿಕವೂ ಕೆಲವು ಮಂದಿ ನೀರಿನ ಬಿಲ್ ಪಾವತಿ ಮಾಡದೇ ಇರುವ ಬಗ್ಗೆ ಗಮನಕ್ಕೆ ಬಂದಿದೆ. ಆದ್ದರಿಂದ ನೀರಿನ ಬಿಲ್ ಪಾವತಿ ಮಾಡದೇ ಇರುವವರ ಸಂಪರ್ಕವನ್ನು ಕಡಿತ ಮಾಡುವುದೇ ಸೂಕ್ತ ಎಂದು ತಿಳಿಸಿದರು.
ಪಂಚಾಯತ್ ಕಟ್ಟಡಕ್ಕೆ ತಾಗಿಕೊಂಡೇ ಗೇಟ್ ನಿರ್ಮಾಣ
ಗ್ರಾಮ ಪಂಚಾಯತ್‌ನ ಕಟ್ಟಡದ ಹಿಂಬದಿಯಲ್ಲಿ ಅಂತರ ಬಿಡದೆ ಖಾಸಗಿ ಜಮೀನಿನವರು ಗೇಟ್ ನಿರ್ಮಾಣ ಮಾಡಿರುವ ಬಗ್ಗೆ ಪಂಚಾಯತ್ ಅಧ್ಯಕ್ಷೆ ಸುಜಾತರವರು ಸಭೆಯ ಗಮನಕ್ಕೆ ತಂದರು. ಈ ರೀತಿಯ ಗೇಟ್ ನಿರ್ಮಾಣದಿಂದ ಬಹಳಷ್ಟು ತೊಂದರೆಯಾಗಿದೆ ಎಂದು ತಿಳಿಸಿದರು. ಇದಕ್ಕೆ ಪ್ರವೀಣ್ ರೈ ತಿಂಗಳಾಡಿ ಧ್ವನಿಗೂಡಿಸಿದರು. ತಕ್ಷಣವೇ ಈ ಗೇಟ್ ಅನ್ನು ತೆರವು ಮಾಡುವಂತೆ ಸೂಚಿಸಲಾಯಿತು.ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಪಿಡಿಒ ಅಜಿತ್ ಜಿ.ಕೆ ಭರವಸೆ ನೀಡಿದರು.
ಶಾಲೆಗಳ ಅಭಿವೃದ್ದಿಗೆ ಶಿಕ್ಷಣ ಇಲಾಖೆಯಿಂದ ಹೆಚ್ಚುವರಿ ಅನುದಾನ ಬೇಕು
ತಿಂಗಳಾಡಿ ಶಾಲೆಯ ಬೋರ್‌ವೆಲ್‌ನ ಪಂಪು ಹಾಳಾಗಿದ್ದು ಇದನ್ನು ದುರಸ್ತಿ ಮಾಡಿಕೊಡುವ ಬಗ್ಗೆ ಬಂದ ಅರ್ಜಿಯ ಬಗ್ಗೆ ಚರ್ಚಿಸಲಾಗಿ ಶಾಲೆಗೆ ಪಂಚಾಯತ್‌ನಿಂದ ಉಚಿತ ಕುಡಿಯುವ ನೀರು ಕೊಡುವ ಬಗ್ಗೆ ನಿರ್ಣಯಿಸಲಾಯಿತು. ಪಂಪು ದುರಸ್ತಿಯ ಬಗ್ಗೆ ಶಿಕ್ಷಣ ಇಲಾಖೆಗೆ ಬರೆದುಕೊಳ್ಳುವಂತೆ ತಿಳಿಸಲಾಯಿತು. ಈಗಾಗಲೇ ಪಂಚಾಯತ್‌ನಿಂದ ಸಾಧ್ಯವಿರುವಷ್ಟು ಅನುದಾನವನ್ನು ಶಾಲೆಗಳಿಗೆ ನೀಡಲಾಗುತ್ತಿದ್ದು ಆದರೂ ಶಾಲೆಗಳ ನಿರ್ವಹಣೆ ಕೇವಲ ಪಂಚಾಯತ್‌ನಿಂದ ಅಸಾಧ್ಯವಾಗಿದೆ ಆದ್ದರಿಂದ ಶಾಲೆಗಳ ಅಭಿವೃದ್ಧಿಗೆ ಶಿಕ್ಷಣ ಇಲಾಖೆಯಿಂದ ಹೆಚ್ಚುವರಿ ಅನುದಾನ ಕೊಡಬೇಕು ಈ ಬಗ್ಗೆ ಶಿಕ್ಷಣ ಇಲಾಖೆಗೆ ಬರೆದುಕೊಳ್ಳುವ ಎಂದು ರತನ್ ರೈ ತಿಳಿಸಿದರು.
ನೂತನ ಸದಸ್ಯರಿಗೆ ಸ್ವಾಗತ
ಪಂಚಾಯತ್‌ನ 4ನೇ ವಾರ್ಡ್‌ನಿಂದ ಆರಿಸಿ ಬಂದಿರುವ ನೂತನ ಸದಸ್ಯ ಮೆಲ್ವಿನ್ ಮೊಂತೆರೋರವರನ್ನು ಸಭೆಗೆ ಸ್ವಾಗತಿಸಲಾಯಿತು. ಪಿಡಿಓ ಅಜಿತ್ ಜಿ.ಕೆಯವರು ಸ್ವಾಗತಿಸಿದರು. ಸಭೆಯಲ್ಲಿ ಸದಸ್ಯರುಗಳಾದ ಪ್ರವೀಣ್ ರೈ ತಿಂಗಳಾಡಿ, ವಿಠಲ ರೈ ಮಿತ್ತೋಡಿ, ಮೆಲ್ವಿನ್ ಮೊಂತೆರೋ, ಕೃಷ್ಣ ಕುಮಾರ್ ಇದ್ಯಪೆ, ರತನ್ ರೈ ಕುಂಬ್ರ, ರೇವತಿ ಬೋಳೋಡಿ, ಸುಜಾತ ರೈ, ಅಸ್ಮಾ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಸರಕಾರದ ಸುತ್ತೋಲೆಗಳನ್ನು ಓದಿದರು. ಗ್ರೇಡ್೧ ಕಾರ್ಯದರ್ಶಿ ಸುನಂದ ರೈ ಸ್ವಾಗತಿಸಿ, ನಿರ್ಣಯಗಳನ್ನು ದಾಖಲಿಸಿಕೊಂಡರು. ಸಿಬ್ಬಂದಿ ಜಯಂತ ಮೇರ್ಲ ಅರ್ಜಿಗಳನ್ನು ಓದಿದರು. ಸಿಬ್ಬಂದಿಗಳು ಸಹಕರಿಸಿದ್ದರು.