ಕಡಬ-ಪಂಜ ರಸ್ತೆ ಗುಂಡಿಗೆ ತೇಪೆ ಹಾಕುವ ಕೆಲಸ ಪ್ರಾರಂಭ-ಕಳಪೆ ಕಾಮಗಾರಿ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು

0

ಕಡಬ: ಕಡಬ ಪಂಜ ರಸ್ತೆಯಲ್ಲಿ ಕಡಬದಿಂದ ಕೋಡಿಂಬಾಳದವರೆಗೆ ರಸ್ತೆ ಹೊಂಡ ಗುಂಡಿಗಳಿಂದ ಕೂಡಿದ್ದು ಕಲ್ಲಂತ್ತಡ್ಕ ಎಂಬಲ್ಲಿ ಈ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಆರಂಭವಾಗಿದೆ. ಆದರೆ ಈ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಆ ಭಾಗದ ಸ್ಥಳಿಯರು ಕೆಲಸ ಮಾಡುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿ ಕಾಮಗಾರಿಯನ್ನು ನಿಲ್ಲಿಸಿದ ಘಟನೆ ಡಿ.11ರಂದು ನಡೆದಿದೆ.


ರಸ್ತೆ ತೀವ್ರ ಹದಗೆಟ್ಟು ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು ವಾಹನ ಸವಾರರು ನಿತ್ಯ ಪರದಾಟ ಮಾಡುತ್ತಿದ್ದರು. ವಾಹನಗಳು ರಸ್ತೆ ಗುಂಡಿಗೆ ಬಿದ್ದು ಅಪಘಾತಗಳೂ ಸಂಭವಿಸಿತ್ತು. ಇದೀಗ ರಸ್ತೆಯ ಗುಂಡಿಗಳಿಗೆ ಡಾಮಾರು ಹಾಕಿ ತೇಪೆ ಹಾಕುವ ಕಾರ್ಯಕ್ಕೆ ಮುಂದಾಗಿದ್ದು ಕಾರ್ಮಿಕರು ಅರೆ ಬರೆ ಕೆಲಸ ಮಾಡುತ್ತಿರುವುದಾಗಿ ಆರೋಪಿಸಿ ಆ ಭಾಗದ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಗುಂಡಿಗಳಿಗೆ ಡಾಮಾರು ಹಾಕಿ ಮುಚ್ಚುವ ನೆಪದಲ್ಲಿ ಕಳಪೆ ತೇಪೆ ಕಾರ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ ನಾಗರಿಕರು, ಸ್ಥಳಕ್ಕೆ ಗುತ್ತಿಗೆದಾರರು ಮತ್ತು ಇಂಜಿನಿಯರ್ ಬಂದ ಬಳಿಕವೇ ಸಮರ್ಪಕ ಕಾಮಗಾರಿ ನಡೆಸುವಂತೆ ಕಾರ್ಮಿಕರಿಗೆ ತಾಕೀತು ಮಾಡಿದರು. ವಾಹನ ಮಾಲೀಕರು ರಸ್ತೆ ತೆರಿಗೆ ಕಟ್ಟಿ ವಾಹನ ಓಡಿಸುತ್ತಿದ್ದರೂ ವಾಹನದಿಂದ ಬಿದ್ದು ಕೈ ಕಾಲು ಮುರಿದುಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತವಾಯಿತು. ರಸ್ತೆ ಗುಂಡಿಗೆ ಹಾಕಿರುವ ಜಲ್ಲಿಯನ್ನು ಕಾಲಿನಲ್ಲಿ ತುಳಿದು ನೋಡಿದಾಗ ಸರಿಯಾಗಿ ಡಾಮಾರು ಹಾಕದಿರುವುದನ್ನು ಗಮನಿಸಿದ ಆಕ್ರೋಶಿತರು ಅಧಿಕಾರಿಗಳು ಸ್ಥಳಕ್ಕೆ ಬಂದ ಬಳಿಕವೇ ಕಲಸ ನಿರ್ವಹಿಸಲು ಪಟ್ಟು ಹಿಡಿದರು. ಆರಂಭದಲ್ಲಿ ಜಲ್ಲಿ ಹಾಕಿ ರಸ್ತೆ ಗುಂಡಿಗಳನ್ನು ಮುಚ್ಚುವ ಯತ್ನ ಮಾಡಲಾಗಿತ್ತು. ಬಳಿಕ ಹಲವು ತಿಂಗಳಾದರೂ ಗುಂಡಿ ಮುಚ್ಚುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿರಲಿಲ್ಲ. ಕಡಬ ಆಸ್ಪತ್ರೆ ಬಳಿ, ಮೆಸ್ಕಾಂ ಕಛೇರಿ ಬಳಿ, ಪೆಟ್ರೋಲ್ ಪಂಪ್ ಬಳಿ ರಸ್ತೆಯಲ್ಲಿ ಭಾರೀ ಪ್ರಮಾಣದ ಹೊಂಡಗಳಿದ್ದರೂ ಕಲ್ಲಂತಡ್ಕ ಬಳಿ ಸಣ್ಣ ಗುಂಡಿಗಳನ್ನು ಕಾರ್ಮಿಕರು ಮುಚ್ಚುತ್ತಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಾಹನ ಸವಾರರು, ಸಾರ್ವಜನಿಕರು ಅಲ್ಲಿದ್ದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳದಲ್ಲಿ ವೆಂಕಟ್ರಮಣ ಕುತ್ಯಾಡಿ ಸೇರಿದಂತೆ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು.

ದೂರವಾಣಿ ಮೂಲಕ ಇಂಜಿನಿಯರ್ ಅವರ ಗಮನಕ್ಕೆ ತರಲಾಗಿದೆ. ಅರೆ ಬರೆ ಕೆಲಸ ಮಾಡಲು ನಾವು ಬಿಡುವುದಿಲ್ಲ.ಸಮರ್ಪಕವಾಗಿ ಬಾಳಿಕೆ ಬರುವ ರೀತಿಯಲ್ಲಿ ಗುಂಡಿಗಳನ್ನು ಮುಚ್ಚುವ ಜೊತೆಗೆ ಡಾಮರೀಕರಣವಾಗಬೇಕು. ಸಾರ್ವಜನಿಕರ ಬೇಡಿಕೆ ಈಡೇರಿಸಲು ಅಧಿಕಾರಿಗಳು ವಿಫಲರಾದರೆ ರಸ್ತೆ ತಡೆದು ಅಹೋರಾತ್ರಿ ಧರಣಿಗೂ ಸಿದ್ದ .
ಫಝಲ್ ಕೋಡಿಂಬಾಳ, ಮಾಜಿ ತಾ.ಪಂ. ಸದಸ್ಯ

LEAVE A REPLY

Please enter your comment!
Please enter your name here