ಆರೋಪಿಗಳಾದ ಮಂಜುನಾಥ್ ಯಾನೆ ಹರಿ, ಕೇಶವ ಪಡೀಲ್ ಜಾಮೀನು ಅರ್ಜಿ ಮೊದಲೇ ವಜಾಗೊಂಡಿತ್ತು
ಪುತ್ತೂರು:ಪುತ್ತೂರಿನ ಜನಪ್ರಿಯ ಹುಲಿವೇಷ ಕುಣಿತ ತಂಡ ‘ಟೀಮ್ ಕಲ್ಲೇಗ ಟೈಗರ‍್ಸ್’ನ ಮುಖ್ಯಸ್ಥರಾಗಿದ್ದ ಅಕ್ಷಯ್ ಕಲ್ಲೇಗ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಮತ್ತಿಬ್ಬರು ಆರೋಪಿಗಳು ಜಾಮೀನಿನಲ್ಲಿ ಬಿಡುಗಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನೂ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.
ಪ್ರಕರಣದ ಆರೋಪಿಗಳಾಗಿರುವ ಚೇತನ್ ಮತ್ತು ಮನೀಶ್ ಅವರು ಜಾಮೀನಿನ ಮೇಲೆ ಬಿಡುಗಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.ಪ್ರಕರಣದ ಇನ್ನಿಬ್ಬರು ಆರೋಪಿಗಳಾಗಿರುವ ಮಂಜುನಾಥ್ ಯಾನೆ ಹರಿ ಮತ್ತು ಕೇಶವ ಪಡೀಲ್ ಅವರ ಜಾಮೀನು ಅರ್ಜಿಯನ್ನು ಈ ಮೊದಲೇ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿತ್ತು.ಹೈಕೋರ್ಟ್‌ನಲ್ಲಿಯೂ ಇವರ ಜಾಮೀನು ಅರ್ಜಿ ವಜಾಗೊಂಡಿತ್ತು.
ಜನಪ್ರಿಯ ಹುಲಿವೇಷ ಕುಣಿತ ತಂಡವಾಗಿ ಗುರುತಿಸಿಕೊಂಡಿದ್ದ ಕಲ್ಲೇಗ ಟೈಗರ್ಸ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ(24ವ.)ಅವರು ಇಬ್ಬರು ಸ್ನೇಹಿತರು ಸೇರಿದಂತೆ ಪರಿಚಿತರಿಂದಲೇ ನೆಹರೂನಗರದಲ್ಲಿ ದಾರುಣವಾಗಿ ಕೊಲೆಯಾಗಿದ್ದರು.ಈ ಹಿಂದೆ ಪುತ್ತೂರುನಲ್ಲಿ ಸಿಪಿಸಿ ಪೆಟ್ರೋಲ್ ಪಂಪ್‌ನಲ್ಲಿ ಸಿಬ್ಬಂದಿಯಾಗಿದ್ದ ಕಬಕ ಗ್ರಾಮದ ಕಲ್ಲೇಗ ಶೇವಿರೆ ನಿವಾಸಿ, ಪ್ರಸ್ತುತ ಕಲ್ಲೇಗ ದೈವಸ್ಥಾನದ ಚಾಕ್ರಿಯವರಾಗಿರುವ ಚಂದ್ರಶೇಖರ್ ಗೌಡ ಅವರ ಪುತ್ರ ಅಕ್ಷಯ್ ಕಲ್ಲೇಗ ಅವರನ್ನು 2023ರ ನ.6ರ ರಾತ್ರಿ 11.35ರ ಸುಮಾರಿಗೆ ನೆಹರುನಗರ ಜಂಕ್ಷನ್‌ನಲ್ಲಿ ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಲಾಗಿತ್ತು.
ಪ್ರಕರಣದ ಆರೋಪಿಗಳಾಗಿ ಪಡೀಲು ನಿವಾಸಿ ಮನೀಶ್,ಕೃಷ್ಣನಗರ ನಿವಾಸಿ ಚೇತನ್, ಬನ್ನೂರು ನಿವಾಸಿ ಮಂಜುನಾಥ್ ಯಾನೆ ಹರಿ ಮತ್ತು ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷರಾಗಿದ್ದ ಕೇಶವ ಪಡೀಲ್ ಎಂಬವರನ್ನು ಪೊಲೀಸರು ಬಂಧಿಸಿದ್ದರು.ಅಕ್ಷಯ್ ಅವರ ಸ್ನೇಹಿತನಾಗಿರುವ ಚಿಕ್ಕಮೂಡ್ನೂರು ಗ್ರಾಮದ ನಿವಾಸಿ ವಿಖ್ಯಾತ್ ಬಿ.ಎಂಬವರ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನ.6ರಂದು ರಾತ್ರಿ ಅಕ್ಷಯ ಕಲ್ಲೇಗ ಹಾಗೂ ಪ್ರಕರಣದ ಆರೋಪಿಗಳಾದ ಮನೀಶ್, ಚೇತನ್ ಎಂಬವರೊಂದಿಗೆ ದೂರವಾಣಿ ಕರೆಯ ಮೂಲಕ ಮಾತಿನ ಚಕಮಕಿಯಾಗಿತ್ತು.ಅದು ಮುಂದುವರಿದಂತೆ, ಸ್ವಲ್ಪ ಸಮಯದ ಬಳಿಕ ನಾನು ಮತ್ತು ಗೆಳೆಯ ಅಕ್ಷಯ್ ಕಲ್ಲೇಗ ನೆಹರೂ ನಗರದ ಬಳಿಯಿರುವ ಎಟಿಎಂ ಪಕ್ಕದಲ್ಲಿ ನಿಂತುಕೊಂಡಿದ್ದಾಗ, ಕಾರಿನಲ್ಲಿ ಬಂದ ಆರೋಪಿಗಳಾದ ಚೇತನ್, ಮನೀಶ್, ಮಂಜ ಮತ್ತು ಕೇಶವ ಎಂಬವರು, ಅಕ್ಷಯ್ ಕಲ್ಲೇಗರೊಂದಿಗೆ ದೂರವಾಣಿ ಕರೆಯ ಮೂಲಕ ನಡೆದಿದ್ದ ಮಾತಿನ ಚಕಮಕಿಯ ವಿಚಾರದಲ್ಲಿ ತಕರಾರು ತೆಗೆದು, ಅವಾಚ್ಯವಾಗಿ ಬೈದು, ತಾವುಗಳು ತಂದಿದ್ದ ತಲವಾರಿನಿಂದ ಹಲ್ಲೆ ನಡೆಸಿದ್ದರು.ಈ ವೇಳೆ ನಾನು ಓಡಿ ತಪ್ಪಿಸಿಕೊಂಡಿದ್ದು,ಅಕ್ಷಯ ಕಲ್ಲೇಗ ಅವರನ್ನು ಆರೋಪಿಗಳಾದ ಚೇತನ್, ಮನೀಶ್, ಮಂಜ ಮತ್ತು ಕೇಶವ ಸೇರಿಕೊಂಡು ತಲವಾರಿನಿಂದ ಕಡಿದು ಕೊಲೆ ಮಾಡಿ ಹೋಗಿರುತ್ತಾರೆ ಎಂದು ವಿಖ್ಯಾತ್ ಅವರು ನೀಡಿದ್ದ ದೂರಿನಲ್ಲಿ ತಿಳಿಸಿದ್ದರು.
ಇಬ್ಬರಿಂದ ಜಾಮೀನು ಅರ್ಜಿ:
ಬಂಧಿತ ಆರೋಪಿಗಳ ಪೈಕಿ ಮಂಜುನಾಥ್ ಯಾನೆ ಹರಿ ಮತ್ತು ಕೇಶವ ಪಡೀಲ್ ಅವರು ಜಾಮೀನಿನ ಮೇಲೆ ಬಿಡುಗಡೆ ಕೋರಿ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಆರಂಭದಲ್ಲಿ ಅರ್ಜಿ ಸಲ್ಲಿಸಿದ್ದರು.ದೂರುದಾರ ವಿಖ್ಯಾತ್ ಪರ ಸರಕಾರಿ ಅಭಿಯೋಜಕರಾದ ಜಯಂತಿ ಸತೀಶ್ ಭಟ್ ಅವರು ವಾದಿಸಿ, ಆರೋಪಿಗಳಿಗೆ ಜಾಮೀನು ಮಂಜೂರು ಮಾಡದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.ಅವರ ವಾದವನ್ನು ಪುರಸ್ಕರಿಸಿದ ನ್ಯಾಯಾಧಿಶರು, ಆರೋಪಿಗಳಿಬ್ಬರ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಏ.27ರಂದು ಆದೇಶಿಸಿದ್ದರು.
ಹೈಕೋರ್ಟ್‌ನಲ್ಲೂ ವಜಾ:
ಪುತ್ತೂರು ಜಿಲ್ಲಾ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದನ್ನು ಪ್ರಶ್ನಿಸಿ ಆರೋಪಿಗಳಾದ ಮಂಜುನಾಥ್ ಯಾನೆ ಹರಿ ಮತ್ತು ಕೇಶವ ಪಡೀಲ್ ಅವರು ರಾಜ್ಯ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.ದೂರುದಾರ ವಿಖ್ಯಾತ್ ಪರವಾಗಿ ಹೈಕೋರ್ಟ್‌ನಲ್ಲಿ ವಾದ ಮಂಡನೆ ಮಾಡಿದ್ದ ವಕೀಲ ರಾಜಶೇಖರ್ ಇಳಿಯಾರ್ ಅವರು,ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿರುವುದರಿಂದ ಘಟನೆಯ ಪ್ರತ್ಯಕ್ಷ ಸಾಕ್ಷಿಗಳ ವಿಚಾರಣೆಗೆ ಮೊದಲೇ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡದಂತೆ ನ್ಯಾಯಪೀಠದ ಗಮನ ಸೆಳೆದಿದ್ದರು.ಅವರ ವಾದವನ್ನು ಪುರಸ್ಕರಿಸಿದ ಹೈಕೋರ್ಟ್ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಮೇ.28ರಂದು ಆದೇಶಿಸಿತ್ತು.
ಮತ್ತಿಬ್ಬರ ಜಾಮೀನು ಅರ್ಜಿಯೂ ವಜಾ:
ಪ್ರಕರಣದ ಆರೋಪಿಗಳಾಗಿರುವ ಮಂಜುನಾಥ್ ಯಾನೆ ಹರಿ ಮತ್ತು ಕೇಶವ ಪಡೀಲ್ ಅವರ ಜಾಮೀನು ಅರ್ಜಿ ವಜಾಗೊಂಡಿದ್ದ ಬಳಿಕ, ಒಂದು ಮತ್ತು ಎರಡನೇ ಆರೋಪಿಗಳಾಗಿರುವ ಚೇತನ್ ಮತ್ತು ಮನೀಷ್ ಅವರು ಜಾಮೀನಿನ ಮೇಲೆ ಬಿಡುಗಡೆ ಕೋರಿ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.ಇದಕ್ಕೆ ವಿಶೇಷ ಸರಕಾರಿ ಅಭಿಯೋಜಕ ಮಹೇಶ್ ಕಜೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.ಘಟನೆಗೆ ಸಂಬಂಧಿಸಿ ತನಿಖಾಧಿಕಾರಿಯವರು ಸುಮಾರು 55 ಸಾಕ್ಷ್ಯ ಸಂಗ್ರಹಿಸಿದ್ದಾರೆ.ಇದೊಂದು ಗಂಭೀರ ಪ್ರಕರಣವಾಗಿದ್ದು ಪ್ರಮುಖ ಸಾಕ್ಷಿಗಳ ವಿಚಾರಣೆಗೆ ಮೊದಲೇ ಆರೋಪಿಗಳನ್ನು ಬಿಡುಗಡೆ ಮಾಡಬಾರದು ಎಂದು ಎಸ್‌ಪಿಪಿ ಮಹೇಶ್ ಕಜೆಯವರು ನ್ಯಾಯಾಧಿಶರ ಗಮನ ಸೆಳೆದಿದ್ದರು.ಅವರ ವಾದವನ್ನು ಪುರಸ್ಕರಿಸಿದ ನ್ಯಾಯಾಽಶರು ಆರೋಪಿಗಳಾದ ಚೇತನ್ ಮತ್ತು ಮನೀಷ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.ಈ ಮೂಲಕ ನಾಲ್ವರು ಆರೋಪಿಗಳ ಜಾಮೀನು ಅರ್ಜಿಯೂ ನ್ಯಾಯಾಲಯದಲ್ಲಿ ವಜಾಗೊಂಡಿದೆ
ಎಸ್‌ಪಿಪಿಯಾಗಿ ಮಹೇಶ್ ಕಜೆ ನೇಮಕ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ
ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ವಾದಿಸಲು ಖ್ಯಾತ ನ್ಯಾಯವಾದಿ ಮಹೇಶ್ ಕಜೆ ಅವರನ್ನು ವಿಶೇಷ ಸರಕಾರಿ ಅಭಿಯೋಜಕರಾಗಿ ನೇಮಕಗೊಳಿಸಿರುವ ರಾಜ್ಯ ಸರಕಾರದ ಆದೇಶವನ್ನು ಪ್ರಶ್ನಿಸಿ ಆರೋಪಿಗಳು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಅಕ್ಷಯ್ ಕಲ್ಲೇಗ ಹತ್ಯೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ವಾದಿಸಲು ಬೊಳುವಾರು ಕಜೆ ಲಾ ಛೇಂಬರ‍್ಸ್‌ನ ಮುಖ್ಯಸ್ಥರಾಗಿರುವ ಮಹೇಶ್ ಕಜೆ ಅವರನ್ನು ವಿಶೇಷ ಸರಕಾರಿ ಅಭಿಯೋಜಕರಾಗಿ ರಾಜ್ಯ ಸರಕಾರ ನೇಮಕಗೊಳಿಸಿ ಆದೇಶಿಸಿತ್ತು.ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.ಇಳಂತಿಲ ಕೇದಾರ ನಿವಾಸಿಯಾಗಿರುವ ಮಹೇಶ್ ಕಜೆ ಅವರು ಜಾರಿ ನಿರ್ದೇಶನಾಲಯ(ಇ.ಡಿ.)ಪರ ವಿಶೇಷ ಸರಕಾರಿ ಅಭಿಯೋಜಕರೂ ಆಗಿದ್ದಾರೆ.