ವಿಟ್ಲ: ಪತಿ – ಪತ್ನಿ ನಡುವೆ ನಡೆದ ಜಗಳದಲ್ಲಿ ಗಂಭೀರ ಗಾಯಗೊಂಡಿದ್ದ ಪತ್ನಿ ಮೃತಪಟ್ಟ ಘಟನೆ ವಿಟ್ಲ ಸಮೀಪದ ಪುಣಚದಲ್ಲಿ ನಡೆದಿದೆ.
ಪುಣಚ ದೇವಿನಗರ ನಿವಾಸಿ ಲೀಲಾ (45 ವ.) ಮೃತ ಮಹಿಳೆ. ವಿಪರೀತ ಕುಡಿತದ ಚಟ ಹೊಂದಿದ್ದ ಸಂಜೀವರವರು ಪ್ರತೀ ದಿನ ಮನೆಯಲ್ಲಿ ಗಲಾಟೆ ಮಾಡುತ್ತಿದ್ದರೆನ್ನಲಾಗಿದೆ. ಮೊನ್ನೆಯೂ ಅದೇ ತೆರನಾದ ಗಲಾಟೆ ನಡೆದಿದ್ದು, ಈ ವೇಳೆ ಲೀಲಾರವರು ಗಂಭೀರ ಗಾಯಗೊಂಡಿದ್ದರೆನ್ನಲಾಗಿದೆ. ಮಹಿಳೆ ಗಾಯಗೊಂಡ ಬಗ್ಗೆ ಮಾಹಿತಿ ತಿಳಿದ ಸ್ಥಳೀಯರು ಕೂಡಲೇ ಮಹಿಳೆಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚೆಕಿತ್ಸೆಗೆ ಸ್ಪಂದಿಸದೆ ಲೀಲಾರವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಆರಂಭದಲ್ಲಿ ಇದೊಂದು ಅಸಹಜ ಸಾವು ಎನ್ನುವ ನಿಟ್ಟಿನಲ್ಲಿ ತನಿಖೆ ನಡೆದಿತ್ತಾದರೂ, ಆ ಬಳಿಕ ಸಾರ್ವಜನಿಕರು ನೀಡಿದ ಮಾಹಿತಿಯಾದಾರದಲ್ಲಿ ತನಿಖೆ ನಡೆಸಿದಾಗ ಇದು ಅವರಿಬ್ಬರ ನಡುವೆ ನಡೆದ ಗಲಾಟೆ ಮಧ್ಯೆ ಮಹಿಳೆ ಗಾಯಗೊಂಡಿದ್ದರು ಎನ್ನುವುದು ಬೆಳಕಿಗೆ ಬಂದಿತ್ತು. ಇದೀಗ ಸಂಜೀವ ರವರನ್ನು ವಿಟ್ಲ ಠಾಣಾ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿರುವುದಾಗಿ ಮಾಹಿತಿ ಲಭಿಸಿದೆ.