9/11 ವರ್ಗಾವಣೆಗೆ ಲಂಚ ಸ್ವೀಕಾರ ಆರೋಪ ಸಾಬೀತು-ಪಿಡಿಒ ಪ್ರೇಮ್‌ಸಿಂಗ್ ನಾಯ್ಕ್‌ಗೆ 3 ವರ್ಷ ಜೈಲು,ರೂ.50,000 ದಂಡ

0

ಪುತ್ತೂರು:2019ರಲ್ಲಿ ಜಮೀನು ದಾಖಲೆ ವರ್ಗಾವಣೆ ಮಾಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದವರಿಂದ ರೆಡ್‌ಹ್ಯಾಂಡ್ ಆಗಿ ಬಂಧಿಸಲ್ಪಟ್ಟ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಯೋರ್ವರಿಗೆ ನ್ಯಾಯಾಲಯ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ.ಕಡಬ ತಾಲೂಕಿನ ಐತ್ತೂರು ಗ್ರಾ.ಪಂ.ನಲ್ಲಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಪ್ರೇಮ್‌ಸಿಂಗ್ ನಾಯ್ಕ್ ಶಿಕ್ಷೆಗೊಳಗಾದವರು.
ಐತ್ತೂರು ಗ್ರಾಮದ ಶಾಹುಲ್ ಹಮೀದ್ ಎಂಬವರು ತನ್ನ ತಾಯಿಯ ಹೆಸರಿನಿಂದ ತನ್ನ ಹೆಸರಿಗೆ 9/11 ವರ್ಗಾಯಿಸಲೆಂದು ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿದ್ದರು.ಇದಕ್ಕ ಪಿಡಿಓ ಪ್ರೇಮ್‌ಸಿಂಗ್ ನಾಯ್ಕ್ ರೂ.10 ಸಾವಿರ ಲಂಚಕ್ಕೆ ಬೇಡಿಕೆ ಇರಿಸಿದ್ದರೆನ್ನಲಾಗಿದೆ.

ಅದರಂತೆ, 2019ರ ಮೇ 21ರಂದು ಶಾಹುಲ್ ಹಮೀದ್‌ರವರು 2 ಸಾವಿರ ರೂ.ಗಳನ್ನು ಕೈಯಲ್ಲಿ ಹಾಗೂ 8 ಸಾವಿರ ರೂ.ಗಳನ್ನು ಪಿಡಿಒ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು.ಪುನಃ 10 ಸಾವಿರ ರೂ.ಲಂಚಕ್ಕೆ ಪಿಡಿಓ ಬೇಡಿಕೆ ಇರಿಸಿದಾಗ ಶಾಹುಲ್ ಹಮೀದ್‌ರವರು ಅಂದಿನ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು.ಜೂ.3ರಂದು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು.ಶಾಹುಲ್ ಹಮೀದ್ ಅವರು ಒಂದು ಸಾವಿರ ರೂ.ಗಳನ್ನು ಪಿಡಿಒ ಪ್ರೇಮ್ ಸಿಂಗ್ ಅವರಿಗೆ ನೀಡಿದ್ದರು.

ಸಂಜೆ ವೇಳೆಗೆ ಗುರುವಾಯನಕೆರೆ ಜಂಕ್ಷನ್‌ನಲ್ಲಿ ಬಾಕಿ 9 ಸಾವಿರ ರೂ.ಗಳನ್ನು ಪಿಡಿಒ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ, ಆರೋಪಿ ಪಿಡಿಓ ಪ್ರೇಮ್ ಸಿಂಗ್ ನಾಯ್ಕ್ರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿ, ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ಮಂಗಳೂರು ಇಲ್ಲಿ ಮೊ.ಸಂ 05/2019 ಕಲಂ 7(ಎ) ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ-1988 (ತಿದ್ದುಪಡಿ ಕಾಯಿದೆ 2018) ರಂತೆ ಪ್ರಕರಣ ದಾಖಲಿಸಿಕೊಂಡಿದ್ದರು.

ಈ ಪ್ರಕರಣದಲ್ಲಿ ಪೊಲೀಸ್ ನಿರೀಕ್ಷಕ ಶ್ಯಾಮಸುಂದರ್ ಹೆಚ್.ಎಂ.ತನಿಖಾಧಿಕಾರಿಯಾಗಿದ್ದರು.ಆರೋಪಿಯ ವಿರುದ್ಧ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಡಿ.13ರಂದು ಆರೋಪಿ ಪ್ರೇಮ್‌ಸಿಂಗ್ ನಾಯ್ಕಗೆ 3 ವರ್ಷಗಳ ಸಾದಾ ಸಜೆ ಹಾಗೂ ರೂ 50,000 ದಂಡ ವಿಧಿಸಿದೆ.ದಂಡ ಕಟ್ಟಲು ವಿಫಲನಾದಲ್ಲಿ ಮತ್ತೆ 1 ತಿಂಗಳ ಕಾಲ ಸಾದಾ ಸಜೆ ಅನುಭವಿಸುವಂತೆ ನ್ಯಾಯಾಲಯ ಆದೇಶಿಸಿದೆ.ಸದರಿ ಪ್ರಕರಣದಲ್ಲಿ ಕರ್ನಾಟಕ ಲೋಕಾಯುಕ್ತದ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪಾಡಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

LEAVE A REPLY

Please enter your comment!
Please enter your name here