ಕಡಬ: ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ರಸ್ತೆಯ ಬಲ್ಯ ಬಳಿ ಖಾಸಗಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಡಿ.13 ರ ಸಂಜೆ ಸುಮಾರಿಗೆ ನಡೆದಿದೆ.
ಗಾಯಗೊಂಡ ಬೈಕ್ ಸವಾರನನ್ನು ನೂಜಿಬಾಳ್ತಿಲ ಗ್ರಾಮದ ಪೇರಡ್ಕ ನಿವಾಸಿ ಸಾಧಿಕ್ ಎಂದು ಗುರುತಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯದಿಂದ ಬೆಳಗಾವಿಗೆ ತೆರಳುತ್ತಿದ್ದ ಖಾಸಗಿ ಬಸ್ ಮತ್ತು ಉಪ್ಪಿನಂಗಡಿ ಕಡೆಯಿಂದ ಕಡಬದತ್ತ ಬರುತ್ತಿದ್ದ ಬೈಕ್ ನಡುವೆ ಬಲ್ಯ ಗ್ರಾಮದ ಪಡ್ನೂರ್ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಬೈಕ್ ಸವಾರನ ತಲೆ ಮತ್ತು ಕೈಗೆ ಗಂಭೀರ ಗಾಯವಾಗಿರುವುದಾಗಿ ತಿಳಿದು ಬಂದಿದ್ದು ಕಡಬ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸ್ಥಳದಲ್ಲಿದ್ದ ಉಮೇಶ್ ಬಂಗೇರ ಮತ್ತವರ ತಂಡ ಗಾಯಾಳುವನ್ನು ಉಪಚರಿಸಿ ಕೃಷ್ಣ ಶೆಟ್ಟಿ ಕಡಬರವರ ಕಾರಿನಲ್ಲಿ ಕಡಬ ಸಮುದಾಯ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.