ಪುತ್ತೂರು: ಕಡಬ ತಾಲೂಕಿನ ಆಲಂಕಾರು ಗ್ರಾಮ ಹಾಗೂ ಕುದ್ಮಾರು ಗ್ರಾಮವನ್ನು ಬೆಸೆಯುವ ಆಲಂಕಾರು-ಶಾಂತಿಮೊಗರು ಮುಖ್ಯ ರಸ್ತೆಯಲ್ಲಿನ ಅಪಾಯಕಾರಿ ಗುಂಡಿಗಳನ್ನು ಮುಚ್ಚು ಕಾರ್ಯವನ್ನು ಪ್ರಾರಂಭಿಸಲಾಗಿದೆ. ಆಲಂಕಾರು ಪೇಟೆಯ ಸಂತೆಕಟ್ಟೆಯ ಬಳಿಯ ಜಂಕ್ಷನ್, ಕೊಂಡಾಡಿ ಕೂಡೂರು ಫಾರ್ಮ್ ಬಳಿ ಹಾಗೂ ಕಲ್ಲೇರಿ ಬಳಿ ಗುಂಡಿಗಳು ಕಳೆದ ಮಳೆಗಾಲಕ್ಕೂ ಮುಂಚೆಯೆ ನಿರ್ಮಾಣವಾಗಿದ್ದು ಅದರ ದುರಸ್ತಿಕಾರ್ಯವನ್ನು ಲೋಕೋಪಯೋಗಿ ಇಲಾಖೆ ಪ್ರಾರಂಭಿಸಿದೆ.
ಕೊಂಡಾಡಿ ಬಳಿಯ ಕೂಡೂರು ಫಾರ್ಮ್ ಬಳಿ ತೇಪೆ ಕಾರ್ಯವನ್ನು ಮುಗಿಸಲಾಗಿದ್ದು, ಮಳೆಯ ಕಾರಣಕ್ಕಾಗಿ ಈಗ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಮುಂದೆ ಕಲ್ಲೇರಿ ಹಾಗೂ ಆಲಂಕಾರು ಸಂತೆಕಟ್ಟೆ ಬಳಿ ಕಾಮಗಾರಿ ನಡೆಯಲಿದೆ. ಈ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿ ವಾಹನ ಸವಾರರು ಪರದಾಡುವಂತಾಗಿತ್ತು. ಅನೇಕ ದ್ವಿಚಕ್ರವಾಹನ ಸವಾರರು ಗುಂಡಿಗೆ ಬಿದ್ದು ಗಾಯಮಾಡಿಕೊಂಡಿದ್ದರು.
ಕುಮಾರಧಾರ ನದಿಗೆ ಶಾಂತಿಮೊಗರುವಿನಲ್ಲಿ ಅಂದಿನ ಶಾಸಕ ಎಸ್.ಅಂಗಾರ ಅವರ ಶಿಫಾರಸ್ಸಿನಲ್ಲಿ ಸುಮಾರು 15.5ಕೋಟಿ ರೂ ವೆಚ್ಚದಲ್ಲಿ 2015 ರಿಂದ 2017ರವರೆಗೆ ಕಾಮಗಾರಿ ನಡೆದು ಹೊಸ ಸರ್ವಋತು ಸೇತುವೆ ನಿಮಾಣವಾದ ಬಳಿಕ ಈ ಸೇತುವೆಗೆ ಸಂಪರ್ಕ ರಸ್ತೆಯಾದ ಆಲಂಕಾರಿನಿಂದ ಶಾಂತಿಮೊಗರುವರೆಗೆ ಸುಮಾರು 3ಕಿಲೋ ಮೀಟರ್ ರಸ್ತೆಯನ್ನು ಮರುನಿರ್ಮಾಣ ಮಾಡಲಾಗಿತ್ತು. ಈ ರಸ್ತೆಯನ್ನು ಜಿಲ್ಲಾ ಮುಖ್ಯ ರಸ್ತೆಯಾಗಿ ಪರಿವರ್ತಿಸಿರುವ ಅಂಗಾರ ಅವರು 2016ರಲ್ಲಿ ಜಿಲ್ಲಾ ಮುಖ್ಯ ರಸ್ತೆ ಲೆಕ್ಕ ಶಿರ್ಷಿಕೆಯಡಿ ಮೂರು ಕೋಟಿ ರೂ ಮಂಜೂರುಗೊಳಿಸಿ ರಸ್ತೆ ನಿರ್ಮಾಣವಾಗಿತ್ತು. ಅದಾದ ಎಂಟು ವರ್ಷದಲ್ಲಿ ರಸ್ತೆ ಅಧ್ವಾನಗೊಂಡಿದೆ. ಕಳೆದ ಎರಡು ವರ್ಷಗಳಿಂದ ಈ ದುರವಸ್ತೆ ಇದ್ದರೂ ಇದಕ್ಕೆ ಶಾಶ್ವತ ಪರಿಹಾರ ದೊರಕಿರಲಿಲ್ಲ. ದಿನವಹಿ ನೂರಾರು ವಾಹನಗಳು ಸಂಚರಿಸುತ್ತಿರುವ ಈ ಜಿಲ್ಲಾ ಮುಖ್ಯ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಿ ದುರಸ್ತಿ ಮಾಡುವ ಕಾರ್ಯಕ್ಕೆ ಸಂಬಂಧಪಟ್ಟವರು ಮುಂದಾಗುತ್ತಿಲ್ಲ ಎನ್ನುವ ಅಕ್ರೋಶ ವ್ಯಕ್ತವಾಗಿತ್ತು. ಶೀಘ್ರದಲ್ಲಿ ಗುಂಡಿ ಮುಚ್ಚುವ ಕಾರ್ಯ ಮಾಡದಿದ್ದರೆ ಹೋರಾಟದ ಎಚ್ಚರಿಕೆಯನ್ನು ಸಾರ್ವಜನಿಕರು ನೀಡಿದ್ದರು. ಇದೀಗ ವಾಹನ ಸವಾರರು, ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.