ಭಾಗವತಿಕೆಯ ಧ್ವನಿ ನಿಲ್ಲಿಸಿ ಮಂಗಳ ಹಾಡಿ ಹೊರಟ ಲೀಲಾವತಿ ಬೈಪಡಿತ್ತಾಯ

0

ಕಡಬ:ತೆಂಕುತಿಟ್ಟು ಯಕ್ಷಗಾನ ರಂಗದ ಪ್ರಥಮ ವೃತ್ತಿಪರ ಭಾಗವತರಾಗಿದ್ದ ಲೀಲಾವತಿ ಬೈಪಡಿತ್ತಾಯ (78ವ.) ಅವರು ದ.14ರಂದು ಸಂಜೆ ಬಜ್ಪೆ ಕೊಳಂಬೆ ಸ್ವಗೃಹದಲ್ಲಿ ನಿಧನರಾದರು.


ಕಡಬದ ಹರಿನಾರಾಯಣ ಬೈಪಾಡಿತ್ತಾಯ ಅವರ ಪತ್ನಿ ಕೆ.ಲೀಲಾವತಿ ಬೈಪಾಡಿತ್ತಾಯ ಅವರು ಸುಮಾರು ನಾಲ್ಕು ದಶಕಗಳ ಕಾಲ ತಮ್ಮ ಕಂಠಸಿರಿಯಿಂದ ಮನೆಮಾತಾದವರು.ಇವರ ಕಲಾ ಪ್ರೌಢಿಮೆಯನ್ನು ರಾಜ್ಯ ಸರಕಾರ ಗುರುತಿಸಿ 2010ನೇ ಸಾಲಿನಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತು.2012ರಲ್ಲಿ ಕರ್ನಾಟಕ ಸರಕಾರ ಕೊಡಮಾಡಿದ ‘ಸಾಧಕ ಹಿರಿಯ ನಾಗರಿಕರು’ ಪ್ರಶಸ್ತಿಗೂ ಭಾಜನರಾಗಿರುವ ಇವರು ಮಂಗಳೂರು ವಿ.ವಿ. ಯಕ್ಷಮಂಗಳಾ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಸಾಧಕ ಪ್ರಶಸ್ತಿ, ಉಳ್ಳಾಲ ರಾಣಿ ಅಬ್ಬಕ್ಕ ಪ್ರಶಸ್ತಿ, ಕರಾವಳಿ ಲೇಖಕ, ವಾಚಕಿಯರ ಸಂಘ, ಅಗರಿ ಪ್ರಶಸ್ತಿ, ಉಡುಪಿಯ ಪೇಜಾವರ ಮಠದ ಪ್ರಶಸ್ತಿ ಅಲ್ಲದೆ ನೂರಾರು ಸನ್ಮಾನ ಪುರಸ್ಕಾರಗಳನ್ನು ಪಡೆದಿದ್ದಾರೆ. 2023ರಲ್ಲಿ ಕರ್ನಾಟಕ ಸರಕಾರ ಇವರಿಗೆ ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.


ಬಡತನದಿಂದಾಗಿ ಓದು ಬರಹ ಇರಲಿಲ್ಲ. ಶಾಲೆಗೆ ಹೋಗದೆಯೇ, ಅಣ್ಣನಿಂದ, ಅಕ್ಕ ಪಕ್ಕದವರಿಂದಲೋ ಅಕ್ಷರಾಭ್ಯಾಸ ಮಾಡಿಸಿಕೊಂಡವರು ಅವರು. ಹಿಂದಿ ಭಾಷೆಯನ್ನು ಅಭ್ಯಾಸ ಮಾಡಿಕೊಂಡಿದ್ದಾರೆ ಎಂಬುದು ಉಲ್ಲೇಖಾರ್ಹ. ಸಂಗೀತ ಕಲಿತಿದ್ದ ಅವರನ್ನು ತೆಂಕುತಿಟ್ಟಿನ ಅಗ್ರಮಾನ್ಯ ಹಿಮ್ಮೇಳ ಗುರುಗಳಾಗಿದ್ದ ಕಡಬದ ಹರಿನಾರಾಯಣ ಬೈಪಾಡಿತ್ತಾಯರು ಕೈಹಿಡಿದ ಬಳಿಕ, ಯಕ್ಷಗಾನ ಕಲಿಸಿದರು. ಕಡಬ ಪರಿಸರ ಅವರ ಯಕ್ಷಗಾನ ಕಲಿಕೆಗೆ ಪೂರಕವಾಗಿತ್ತು. ಮನೆ ಮನೆಯಲ್ಲೂ ವಿಶೇಷ ಕಾರ್ಯಕ್ರಮವಿದ್ದರೆ 2 ಅಲ್ಲೊಂದು ತಾಳಮದ್ದಳೆ ಕೂಟ ಇದ್ದೇ ಇರುತ್ತಿತ್ತು.ಹೀಗೆ ಕಲಿಯುತ್ತಲೇ, ಹೆಣ್ಣು ಮಕ್ಕಳಿಗೆ ಯಕ್ಷಗಾನ ನೋಡುವುದಕ್ಕೂ ಅವಕಾಶವಿಲ್ಲದ ಸಂಪ್ರದಾಯವಿದ್ದ ಆ ಕಾಲದಲ್ಲಿ ತೆಂಕು ತಿಟ್ಟಿನ ಆಗ್ರಮಾನ್ಯ ಭಾಗವತರಲ್ಲೊಬ್ಬರಾಗಿ ಅವರು ಬೆಳೆದದ್ದು ಇತಿಹಾಸ ಪರಿಣಾಮ ಏಕೈಕ ವೃತ್ತಿಪರ ಮಹಿಳಾ ಭಾಗವತರು ಎಂಬ ಪಟ್ಟ, ಪತಿಯೊಂದಿಗೆ ಅಂದಿನ ಸುಬ್ರಹ್ಮಣ್ಯ, ಪುತ್ತೂರು, ಕದ್ರಿ, ಕರ್ನಾಟಕ, ಆರುವ (ಅಳದಂಗಡಿ), ಕುಂಬಳೆ ಬಪ್ಪನಾಡು ಮೇಳ, ಕುಂಬಳೆ, ತಲಕಳ ಮುಂತಾದ ಡೇರೆ-ಬಯಲಾಟ ಮೇಳಗಳಲ್ಲಿ ನಿರಂತರ ಇಪ್ಪತ್ತು ವರ್ಷಗಳ ಕಾಲ ವೃತ್ತಿ ಕಲಾವಿದರಾಗಿಯೂ 17ಕ್ಕೂ ಹೆಚ್ಚು ವರ್ಷಗಳಿಂದ ಅತಿಥಿ ಕಲಾವಿದರಾಗಿಯೂ ಯಕ್ಷಗಾನಕ್ಕೆ ಸೇವೆಸಲ್ಲಿಸಿದ್ದಾರೆ.ಬೊಳುವಾರು ಆಂಜನೇಯ ಯಕ್ಷಗಾನ ಮಹಿಳಾ ಸಂಘದಲ್ಲಿ ಭಾಗವತರಾಗಿ ಇವರು ಹಲವು ವರ್ಷ ಸೇವೆ ಸಲ್ಲಿಸಿದ್ದರು.


ಯಕ್ಷಗಾನ ಲೋಕದಲ್ಲಿ ಬೆಳಗಿ ಕಲೆಯನ್ನೂ ಬೆಳೆಸಿದ ಕೀರ್ತಿವಂತರಾದ ಶೇಣಿ ಗೋಪಾಲಕೃಷ್ಣ ಭಟ್, ಬಣ್ಣದ ಮಾಲಿಂಗ, ಹೊಸಹಿತ್ಲು ಮಹಾಲಿಂಗ ಭಟ್, ಪಡ್ರೆ ಚಂದು, ಪುತ್ತೂರು ನಾರಾಯಣ ಹೆಗ್ಡೆ, ಅಳಿಕೆ ರಾಮಯ್ಯ ರೈ, ಕೆ.ಗೋವಿಂದ ಭಟ್, ಪುತ್ತೂರು ಕೃಷ್ಣ ಭಟ್, ಕೋಳೂರು ರಾಮಚಂದ್ರ ರಾವ್, ಎಂಪೆಕಟ್ಟೆ ರಾಮಯ್ಯ ರೈ, ಕುಂಬಳೆ ಸುಂದರ ರಾವ್, ಶಂಕರನಾರಾಯಣ ಸಾಮಗರು, ರಾಮದಾಸ ಸಾಮಗರು, ಎಂ.ಎಲ್.ಸಾಮಗರು, ತೆಕ್ಕಟ್ಟೆ ಆನಂದ ಮಾಸ್ತರ್, ಪ್ರಭಾಕರ ಜೋಷಿ ಮುಂತಾದ ಯಕ್ಷಲೋಕದ ಘಟಾನುಘಟಿ ದಿಗ್ಗಜರನ್ನು ತಾಳಮದ್ದಳೆಯಲ್ಲಿ ಯಕ್ಷಗಾನ ಪ್ರದರ್ಶನಗಳಲ್ಲಿ ಕುಣಿಸಿದ ಮಾತನಾಡಿಸಿದ ಅನುಭವ ಪಡೆದುಕೊಂಡ ಲೀಲಾವತಿ ಅವರಿಗೆ, ಪ್ರತಿಯೊಂದು ಹೆಜ್ಜೆಯಲ್ಲಿಯೂ ಮಾರ್ಗದರ್ಶನ ಮಾಡಿ ಪ್ರೋತ್ಸಾಹಿಸುತ್ತಲೇ ಬಂದವರು ಪತಿ ಹರಿನಾರಾಯಣರು. ಬಲಿಹ ನಾರಾಯಣ ಭಾಗವತರು, ದಾಮೋದರ ಮಂಡೆಚ್ಚರು, ಕಡತೋಕ ಭಾಗವತರು, ನೆಡ್ಲೆ ನರಸಿಂಹ ಭಟ್, ಬಲ್ಲಾಳರು, ವಿದಾಣ ಭೀಮ ಭಟ್, ಅಡೂರು ವೆಂಕಟ ಮದ್ರೆಗಾರರು ಮುಂತಾದ ಆಗ್ರಗಣ್ಯ ಹಿಮ್ಮೇಳ ಕಲಾವಿದರ ಸಲಹೆ, ಮಾರ್ಗದರ್ಶನಗಳು ಅವರನ್ನು ಪ್ರಬುದ್ಧ ಕಲಾವಿದೆಯಾಗಿ ರೂಪಿಸಿದವು.


ಗಂಡು ಮೆಟ್ಟಿನ ಕಲೆಯಲ್ಲಿ ಅದರಲ್ಲೂ ವೀರರಸ ಪ್ರಧಾನ ಸನ್ನಿವೇಶಗಳಲ್ಲಿ ಹೆಣ್ಣು ಕಂಠವನ್ನು ಮೆರೆಸಿ, ಯಕ್ಷಗಾನ ಕಲೆಯತ್ತ ಮಹಿಳೆಯರೂ ಆಕರ್ಷಿತರಾಗುವಂತೆ ಮೇಲ್ಪಂಕ್ತಿ ಹಾಕಿಕೊಟ್ಟವರು ಅವರು. ರಾತ್ರಿಯಿಡೀ ನಿದ್ದೆಗೆಟ್ಟು ಊರಿಂದೂರಿಗೆ ಮೇಳವು ಹೋದಲ್ಲೆಲ್ಲಾ ತಿರುಗಾಟ ಮಾಡಿದ್ದಷ್ಟೇ ಅಲ್ಲದೆ, ರಾತ್ರಿಯಿಡೀ ನಿದ್ದೆ ಬಿಟ್ಟು ಬೆಳಗ್ಗಿನವರೆಗಿನ ಇಡೀ ಪ್ರಸಂಗವನ್ನು ಆಡಿಸಿದ ಕೀರ್ತಿಯೂ ಇದೆ. ಶಾಲೆಗೆ ಹೋಗದೆಯೂ ಭಾಗವತಿಕೆಯಲ್ಲಿ ವ್ಯಕ್ತವಾಗುವ ಸಾಹಿತ್ಯ ಶುದ್ದಿ, ಭಾಷಾ ಶುದ್ದಿ ಇವರ ಹೆಗ್ಗಳಿಕೆ. ಬಡಗುತಿಟ್ಟಿನಲ್ಲಿ ತಮ್ಮ ಭಾವು ಬೀರಿ ನಂದಿದ ನಂದಾದೀಪ ಕಾಳಿಂಗ ನಾವಡರ ಜತೆಗೆ ಶೃಂಗೇರಿ ಹಾಗೂ ಮುಂಬಯಿಯಲ್ಲಿ ಹಾಡುತ್ತಾ, ಅವರ ಮೆಚ್ಚುಗೆಗೂ ಪಾತ್ರರಾದವರು ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರು.

ಯಾವುದೇ ಪ್ರಸಂಗ ಆಡಿಸುವ ಮೊದಲು, ಹಿರಿಯ ಮತ್ತು ಕಿರಿಯ ಕಲಾವಿದರೊಂದಿಗೆ ಚೌತಿಯಲ್ಲಿ ಮೊದಲೇ ಚರ್ಚಿಸಿ, ಪ್ರದರ್ಶನವೊಂದು ಎಲ್ಲೂ ಲೋಪವಾಗಬಾರದು, ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದ ರೀತಿ ಇಂದಿನ ಕಲಾವಿದರಿಗೆ ಸ್ಫೂರ್ತಿಯಾಗಿದೆ. ತಮ್ಮಂತೆ ಇತರ ಮಹಿಳೆಯರೂ ಯಕ್ಷಗಾನಕ್ಷೇತ್ರದಲ್ಲಿ ಮುಂದೆ ಬರಬೇಕೆಂದು ಪೋತ್ಸಾಹಿಸುತ್ತಾ, ಆಸಕ್ತಿಯಿಂದ ಬಂದವರಿಗೆ ಯಕ್ಷಗಾನದ ಪಾಠ, ಕರ್ನಾಟಕ ಶಾಸ್ತ್ರೀಯ ಸಂಗೀತದ ಪಾಠವನ್ನೂ ಮಾಡಿದ್ದರು. ಅಲ್ಲದೆ ಪತಿಯೊಂದಿಗೆ ಧರ್ಮಸ್ಥಳದ ಪ್ರಖ್ಯಾತ ಯಕ್ಷಗಾನ ತರಬೇತಿ ಕೇಂದ್ರದಲ್ಲಿ 10 ವರ್ಷ ಹಾಗೂ ಕಟೀಲು, ಮೂಡುಬಿದಿರೆ, ಬಜಪೆ ಮುಂತಾದೆಡೆ ಗುರುಗಳಾಗಿ ಸೇವೆ ಸಲ್ಲಿಸಿದ್ದರು.


ಪ್ರಸ್ತುತ ಮಂಗಳೂರಿನ ಬಜ್ಪೆ ಕೊಳಂಬೆಯಲ್ಲಿ ವಾಸವಿದ್ದ ಇವರು ಪತಿ ಹರಿನಾರಾಯಣ ಬೈಪಾಡಿತ್ತಾಯ, ಬೆಂಗಳೂರಿನಲ್ಲಿ ಪತ್ರಕರ್ತರಾಗಿರುವ ಪುತ್ರ ಅವಿನಾಶ್ ಬೈಪಾಡಿತ್ತಾಯ ಮತ್ತು ಬೆಂಗಳೂರುನಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಪುತ್ರ ಗುರುಪ್ರಸಾದ್ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here