ಪ್ರದೀಪ್ ರವರ ಹೆಸರನ್ನು ಶಾಶ್ವತವಾಗಿಸುವ ಜವಾಬ್ದಾರಿ ಎಲ್ಲರ ಮೇಲಿದೆ: ಪುರಂದರ ರೈ ಮಿತ್ರಂಪಾಡಿ
ಆಲಂಕಾರು: ಡಿ.5ರಂದು ಹೃದಯಾಘಾತದಿಂದ ನಿಧನರಾದ ಆಲಂಕಾರು ಜೆಸಿಐನ ಪೂರ್ವಾಧ್ಯಕ್ಷ, ಶಾಂತಿನಗರ ಸರಕಾರಿ ಹಿ.ಪ್ರಾ.ಶಾಲೆಯ ಪ್ರಭಾರ ಮುಖ್ಯಶಿಕ್ಷಕ, ಆಲಂಕಾರು ಗ್ರಾಮದ ಬಾಕಿಲ ನಿವಾಸಿ ಪ್ರದೀಪ್ (41ವ.)ಅವರಿಗೆ ಜೆಸಿಐ ಆಲಂಕಾರು ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಡಿ.14ರಂದು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ದೀನದಯಾಳ್ ರೈತ ಸಭಾಭವನದಲ್ಲಿ ನಡೆಯಿತು.
ನುಡಿನಮನ ಸಲ್ಲಿಸಿದ ಜೆಸಿಐ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಪುರಂದರ ರೈ ಮಿತ್ರಂಪಾಡಿ ಅವರು, ಪ್ರದೀಪ್ ಬಾಕಿಲ ಅವರು ಕೇವಲ ಒಂದು ಸಂಘಟನೆಯ ಸೊತ್ತು ಆಗಿರಲಿಲ್ಲ. ಅವರು ಊರಿನ ಸೊತ್ತು ಆಗಿದ್ದರು. ಅವರ ಹೆಸರನ್ನು ಶಾಶ್ವತವಾಗಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು. ಪ್ರದೀಪ್ ಅವರು ಜೆಸಿಐಯಲ್ಲಿ ತಾನು ಬೆಳೆಯುವುದರೊಂದಿಗೆ ಇತರರನ್ನೂ ಬೆಳೆಸಿ ಸಮಾಜದಲ್ಲಿ ಒಂದು ರೀತಿಯ ಸಂಚಲನ ಉಂಟು ಮಾಡಿದ್ದಾರೆ. ಅವರದ್ದು ಮಾದರಿ ವ್ಯಕ್ತಿತ್ವವಾಗಿದೆ. ಅವರಂತಹ ನಾಯಕರನ್ನು ಸೃಷ್ಟಿಸುವ ಜವಾಬ್ದಾರಿ ಆಲಂಕಾರು ಜೆಸಿಐ ಘಟಕದ್ದು ಆಗಿದೆ ಎಂದು ಹೇಳಿದರು.
ನಿವೃತ್ತ ಶಿಕ್ಷಕ ನಾಗಪ್ಪ ಗೌಡ ಮರುವಂತಿಲ ಅವರು ದಿವಂಗತ ಪ್ರದೀಪ್ ಬಾಕಿಲ ಅವರ ಭಾವಚಿತ್ರದ ಮುಂದೆ ದೀಪ ಪ್ರಜ್ವಲಿಸಿ ಮಾತನಾಡಿ, ಪೂರ್ವ ಜನ್ಮದ ಪುಣ್ಯದ ಫಲದಿಂದ ಪ್ರದೀಪ್ ಅವರು ಅತೀ ಸಣ್ಣ ವಯಸ್ಸಿನಲ್ಲಿಯೇ ಹೆಚ್ಚಿನ ಕೆಲಸ ಮಾಡಿದ್ದಾರೆ. ಅವರಲ್ಲಿನ ಪ್ರತಿಭೆ ಅವರನ್ನು ಎತ್ತರಕ್ಕೆ ಬೆಳೆಸಿದೆ. ಅವರು ಆಲಂಕಾರಿಗೆ ಆಸ್ತಿಯಾಗಿದ್ದರು. ಎಲ್ಲರಿಗೂ ಸಹಕಾರ ನೀಡುತ್ತಿದ್ದರು ಎಂದರು. ಜೆಸಿಐ ವಲಯ 15ರ ನಿಯೋಜಿತ ವಲಯಾಧ್ಯಕ್ಷ ಅಭಿಲಾಷ್ ಅವರು ಮಾತನಾಡಿ, ಪ್ರದೀಪ್ ಅವರು ಜೆಸಿಐ ಮೇಲೆ ಅಭಿಮಾನವಿಟ್ಟು ಹಲವಾರು ಜವಾಬ್ದಾರಿ ನಿರ್ವಹಿಸಿದ್ದಾರೆ. ಪ್ರದೀಪ್ ಹಾಗೂ ಅವರ ಪತ್ನಿಯೂ ಜೆಸಿಐಯಲ್ಲಿ ತೊಡಗಿಸಿಕೊಂಡು ತಮ್ಮ ಮನೆಯನ್ನೇ ಜೆಸಿಐಗೆ ಮೀಸಲಿಟ್ಟಿದ್ದರು. ಅವರು ಆಲಂಕಾರು ಘಟಕದಿಂದ ಮೊದಲ ವಲಯ ನಿರ್ದೇಶಕರಾಗಿ, ವಲಯ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಅವರು ಪ್ರೀತಿ, ಸ್ನೇಹದ ಸಾಕಾರಮೂರ್ತಿಯಾಗಿದ್ದು ನೋಡಿದ ತಕ್ಷಣ ಅವರೊಂದಿಗೆ ಆತ್ಮೀಯತೆ ಬೆಳೆಯುತ್ತಿತ್ತು ಎಂದು ಬಣ್ಣಿಸಿದರು.
ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ, ಆಲಂಕಾರು ಶ್ರೀ ದುರ್ಗಾಂಬಾ ವಿದ್ಯಾವರ್ಧಕ ಸಭಾದ ಅಧ್ಯಕ್ಷ ದಯಾನಂದ ರೈ ಮನವಳಿಕೆ, ವಿಶ್ರಾಂತ ಪ್ರಾಂಶುಪಾಲ ವಿಠಲ ರೈ ಆಲಂಕಾರು, ಆಲಂಕಾರು ವಲಯ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಶಿವಣ್ಣ ಗೌಡ ಕಕ್ವೆ, ಆಲಂಕಾರು ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ ರೈ ಮನವಳಿಕೆ, ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೈಯ್ಯಲ್ಗ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಉಪ್ಪಿನಂಗಡಿ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಡಾ.ರಾಜಾರಾಮ್ ಕೆ.ಬಿ.,ನೆಲ್ಯಾಡಿ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆ ಸಹ ಶಿಕ್ಷಕ ವಿಮಲ್ಕುಮಾರ್ ನೆಲ್ಯಾಡಿ, ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕ ಸತೀಶ್ ಭಟ್ ಬಿಳಿನೆಲೆ, ಆಲಂಕಾರು ಜೆಸಿಐ ಪೂರ್ವಾಧ್ಯಕ್ಷ ಪ್ರವೀಣ್ ಆಳ್ವ, ಪುತ್ತೂರು ಲ್ಯಾಂಪ್ ಸೊಸೈಟಿ ಅಧ್ಯಕ್ಷ ಪೂವಪ್ಪ ನಾಯ್ಕ್, ಸಾಮಾಜಿಕ ಮುಖಂಡ ಪೀರ್ ಮಹಮ್ಮದ್ ಆಲಂಕಾರು, ದ.ಕ.ಜಿಲ್ಲಾ ಫೋಟೋ ಗ್ರಾಫರ್ಸ್ ಅಸೋಸಿಯೇಶನ್ ಅಧ್ಯಕ್ಷ ರಘು ಶೆಟ್ಟಿ, ಕಡಬ ತಾಲೂಕು ಪ್ರಾಥಮಿಕ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್, ಪತಂಜಲಿ ಯೋಗ ಶಿಕ್ಷಕ ಆನಂದ ಕುಂಟಿನಿ, ಜೆಸಿಐ ವಲಯ 15ರ ಪೂರ್ವ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ ಅವರು ದಿವಂಗತ ಪ್ರದೀಪ್ ಬಾಕಿಲ ಅವರ ಗುಣಗಾನ ಮಾಡಿ ನುಡಿನಮನ ಸಲ್ಲಿಸಿದರು. ದಿವಂಗತ ಪ್ರದೀಪ್ ಬಾಕಿಲ ಅವರ ಸಹೋದರ ಪ್ರಕಾಶ್ ಬಾಕಿಲ ಅವರು ಮಾತನಾಡಿದರು.
ನೆಲ್ಯಾಡಿ ಸಂತಜಾರ್ಜ್ ಪ.ಪೂ.ಕಾಲೇಜು ಉಪನ್ಯಾಸಕ ಚೇತನ್ ಆನೆಗುಂಡಿ ಸ್ವಾಗತಿಸಿ, ನಿರೂಪಿಸಿದರು. ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಉಪನ್ಯಾಸಕ ಚೇತನ್ ಮೊಗ್ರಾಲ್ ಶಾಂತಿಮಂತ್ರ ಪಠಿಸಿದರು. 1 ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ ದಿವಂಗತ ಪ್ರದೀಪ್ ಬಾಕಿಲ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಆಲಂಕಾರು ಜೆಸಿಐನ ಸದಸ್ಯರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಸದಸ್ಯರು, ಶಿಕ್ಷಕರು ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.