ಪಿಯುಸಿ, ಪದವಿ ಪೂರೈಸಿದವರಿಗೆ ವಿದ್ಯಾರ್ಥಿ ವೇತನ – ಗುಣಪಾಲ್ ಜೈನ್
ಪುತ್ತೂರು: ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಏಳ್ಗೆಗಾಗಿ ಮತ್ತು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿದ್ಯಾರ್ಥಿವೇತನ ವಿತರಣೆಯನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಹೊಂದಿರುವ ದ.ಕ.ಜಿಲ್ಲಾ ಜೈನ ವಿದ್ಯಾವರ್ಧಕ ಸಂಘದ ವತಿಯಿಂದ ನೀಡಲಾಗುತ್ತಿದೆ ಎಂದು ದ.ಕ.ಜೈನ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಣಪಾಲ್ ಜೈನ್ ಅವರು ಹೇಳಿದರು.
ಡಿ.15ರಂದು ಪುತ್ತೂರು ಜೈನ ಭವನದಲ್ಲಿ ನಡೆದ ದ.ಕ.ಜೈನ ವಿದ್ಯಾವರ್ಧಕ ಸಂಘ ಪುತ್ತೂರು ಇದರ ವರ್ಷಾವಧಿ ಮಹಾಸಭೆಯ ಬಳಿಕ ನಡೆದ ವಿದ್ಯಾರ್ಥಿವೇತನ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಮಾಡಲಾಗುತ್ತಿದೆ. ಮುಂದಿನ ದಿನ ಇನ್ನಷ್ಟು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುವಂತೆ ವಿನಂತಿಸಿದರು.
ಶೈಕ್ಷಣಿಕ ವಿಚಾರಕ್ಕೆ ಆದ್ಯತೆ:
ದ.ಕ.ಜೈನ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ರಾಜಶೇಖರ್ ಜೈನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ 1916ರಲ್ಲಿ ದ.ಕ.ಜೈನ ವಿದ್ಯಾವರ್ಧಕ ಸಂಘದ ಸ್ಥಾಪನೆಯಾಗಿದೆ. ಒಟ್ಟು ಧಾರ್ಮಿಕ ಮತ್ತು ಶೈಕ್ಷಣಿಕ ವಿಚಾರವನ್ನು ಮುಂದಿಟ್ಟುಕೊಂಡು ಸಂಘ ಉತ್ತಮ ಕೆಲಸ ಮಾಡುತ್ತಿದೆ. ಇದೀಗ ಐದಾರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುವಂತೆ ವಿನಂತಿಸಿದರು. ವಿದ್ಯಾವರ್ಧಕ ಸಂಘದ ಪೂರ್ವ ಅಧ್ಯಕ್ಷ ಪುತ್ತಿಲ ಜಯರಾಜ್ ಹೆಗ್ಗಡೆ, ಹಿರಿಯರಾದ ಅಜಿತ್ ಕುಮಾರ್ ಕಲ್ಲೇಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರ್ದೇಶಕರಾದ ಸತೀಶ್ ಪಡಿವಾಳ್, ಅಜಿತ್ ಕುಮಾರ್ ರೈ, ಯಶೋಧರ್, ಯುವರಾಜ್, ಮಿತ್ರಸೇನ ಜೈನ್, ಜೀವಂದರ್ ಜೈನ, ಮಹೇಂದ್ರವರ್ಮ ಸಹಿತ ಹಲವಾರು ಮಂದಿ ಸಭೆಯಲ್ಲಿ ಉಪಸ್ಥಿತರಿದ್ದರು.
150ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಸುಮಾರು 150ಕ್ಕೂ ಮಿಕ್ಕಿ ಪಿಯುಸಿ ಮತ್ತ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಸಭೆಯಲ್ಲಿ ವಿದ್ಯಾರ್ಥಿವೇತನ ವಿತರಣೆ ನಡೆಯಿತು.