ಪುತ್ತೂರು: ಕೆಲವು ದಿನಗಳಿಂದ ಅರಿಯಡ್ಕ ಗ್ರಾಮ ಪಂಚಾಯತ್ ಮಾಡ್ನೂರು ಗ್ರಾಮದ ಚಾಕೋಟೆ, ಪುವಂದೂರು ವಿವಿಧ ಸ್ಥಳಗಳಲ್ಲಿ ಕಾಡಾನೆಗಳು ಕೃಷಿಗೆ ಹಾನಿ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದು. ಘಟನಾ ಪ್ರದೇಶಗಳಿಗೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದರು.
ಪುವಂದೂರಿನ ಸ್ವಾತಿ ಭಟ್, ಮತ್ತು ನಿರ್ಮಲ ರಾವ್ ರವರ ಕೃಷಿ ತೋಟಕ್ಕೆ ಕಳೆದ ಒಂದು ವಾರದಿಂದ ಕಾಡಾನೆಗಳು ಹಾನಿ ಮಾಡುತ್ತಲಿದ್ದು, ಕೃಷಿಕರು ಕಷ್ಟಪಟ್ಟು ಬೆಳೆದ ಕೃಷಿಗೆ ಹಾಗೂ ಹನಿ ನೀರಾವರಿಗೆ ಹಾಕಿರುವ ಪೈಪ್ ಲೈನ್ ಗಳಿಗೆ ಆನೆಗಳು ಹಾನಿಯನ್ನುಂಟು ಮಾಡಿವೆ.
ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆನೆಯನ್ನು ನಾಡಿನಿಂದ ಕಾಡಿನತ್ತ ಓಡಿಸುವ ಜೊತೆಗೆ ಸರಕಾರ ಕೃಷಿಕರಿಗೆ ಸೂಕ್ತ ಪರಿಹಾರವನ್ನು ನೀಡಬೇಕು. ಮುಂದಿನ ದಿನಗಳಲ್ಲಿ ಆನೆಗಳು ಗ್ರಾಮೀಣ ಭಾಗಕ್ಕೆ ಬಾರದ ರೀತಿಯಲ್ಲಿ ಸೂಕ್ತವಾದ ಕ್ರಮವನ್ನು ಕೈಗೊಳ್ಳಬೇಕೆಂದು ಅರಣ್ಯ ಇಲಾಖೆಗೆ ಹಾಗೂ ಸರಕಾರವನ್ನು ಒತ್ತಾಯಿಸಿದರು.