ಅಂಗನವಾಡಿ ಸಂಘಟನೆ ಮಧ್ಯೆ ಕಟ್ಟಡಕ್ಕಾಗಿ ಫೈಟ್-ಗೊಂದಲದ ಗೂಡಾದ ಮೈಂದಡ್ಕ ಅಂಗನವಾಡಿ

0

ಉಪ್ಪಿನಂಗಡಿ: ಪುತ್ತೂರು ತಾಲೂಕಿನ 34 ನೆಕ್ಕಿಲಾಡಿ ಗ್ರಾಮದ ಮೈಂದಡ್ಕ ಎಂಬಲ್ಲಿರುವ ಸರ್ವೇ ನಂಬರ್ 88/1ರಲ್ಲಿ ಅಂಗನವಾಡಿಗೆ ಮಂಜೂರುಗೊಂಡ ಜಾಗದಲ್ಲಿರುವ ಕಟ್ಟಡವೊಂದಕ್ಕೆ ಸಂಬಂಧಿಸಿ ಅಂಗನವಾಡಿ ಮತ್ತು ಸಂಘಟನೆಯೊಂದರ ಮಧ್ಯೆ ಸಮರ ಆರಂಭವಾಗಿದ್ದು, ಅಂಗನವಾಡಿಗೆ ರಜೆ ಇದ್ದ ಭಾನುವಾರದಂದು ಅಂಗನವಾಡಿ ಕಟ್ಟಡದೊಳಗೆ ನುಗ್ಗಿದ ಕೆಲವರು ಅಲ್ಲಿದ್ದ ಕಪಾಟು, ಮೇಜು, ಗೋಡೆಗೆ ಸಂಘಟನೆಯ ಹೆಸರಿರುವ ಸ್ಟಿಕ್ಕರ್ ಅಂಟಿಸಿರುವ ಘಟನೆ ನಡೆದಿದೆ.

ಮೈಂದಡ್ಕದಲ್ಲಿ ಅಂಗನವಾಡಿ ಮಂಜೂರುಗೊಳಿಸಬೇಕೆಂಬ ಬೇಡಿಕೆ 34 ನೆಕ್ಕಿಲಾಡಿ ಗ್ರಾಮ ಸಭೆಯಲ್ಲಿ ಹಲವು ಬಾರಿ ಪ್ರಸ್ತಾಪವಾಗಿತ್ತು. ಕೊನೆಗೂ ಅಂಗನವಾಡಿ ಇಲ್ಲಿಗೆ ಮಂಜೂರುಗೊಂಡಿತ್ತು. ಆದರೆ ಕಟ್ಟಡವಿಲ್ಲದ್ದರಿಂದ ಅಲ್ಲೇ ಸಮೀಪದಲ್ಲಿ ಖಾಸಗಿ ವ್ಯಕ್ತಿಯೋರ್ವರಿಗೆ ಸೇರಿದ ಕಟ್ಟಡದಲ್ಲಿ ಅಂಗನವಾಡಿ ಕಾರ್ಯಾಚರಿಸುತ್ತಿತ್ತು. ಈ ನಡುವೆ ಮೈಂದಡ್ಕದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ನಿವೇಶನಕೋರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ಕಂದಾಯ ಇಲಾಖೆಗೆ ಪತ್ರ ಬರೆದಿದ್ದರು. ಇನ್ನೊಂದೆಡೆ ‘ನಮ್ಮೂರು- ನಮ್ಮವರು ಸಂಘ’ ಹಾಗೂ ಸಾರ್ವಜನಿಕರ ನೆರವಿನಲ್ಲಿ ಸರ್ವೇ ನಂ. 88/1ರಲ್ಲಿರುವ ಸರಕಾರಿ ಜಾಗದಲ್ಲಿ ಕಟ್ಟಡವೊಂದನ್ನು ನಿರ್ಮಿಸಿತ್ತು. ಅಂಗನವಾಡಿಗೆ ಮೈಂದಡ್ಕದಲ್ಲಿ ಕಟ್ಟಡವಿಲ್ಲದ್ದರಿಂದ ಅದೇ ಕಟ್ಟಡವನ್ನು ಅಂಗನವಾಡಿಗೆ ನೀಡಿತ್ತು. ಬಳಿಕ ಅಂಗನವಾಡಿ ಅದರಲ್ಲಿ ಕಾರ್ಯನಿರ್ವಹಣೆ ಆರಂಭಿಸಿತ್ತು. ಈ ಮಧ್ಯೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ನೀಡಿದ ನಿವೇಶನದ ಶಿಫಾರಸ್ಸನ್ನು ಪುರಸ್ಕರಿಸಿದ ಕಂದಾಯ ಇಲಾಖೆಯು ಸರ್ವೆ ನಂ.88/1ರಲ್ಲಿ ಅಂಗನವಾಡಿಗೆಂದು 5 ಸೆಂಟ್ಸ್ ಜಾಗವನ್ನು ಮಂಜೂರುಗೊಳಿಸಿತು. ಇತ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮೈಂದಡ್ಕ ಅಂಗನವಾಡಿಗೆ ಕಾರ್ಯಕರ್ತೆಯನ್ನು ನಿಯೋಜನೆ ಮಾಡಿತ್ತು.


ಸಮರ ಆರಂಭ:
ಈಗ ಅಂಗನವಾಡಿ ಕಾರ್ಯಾಚರಿಸುತ್ತಿರುವ ಕಟ್ಟಡಕ್ಕೆ ತಮ್ಮ ಸಂಘದ ಹೆಸರಿನಲ್ಲಿ ವಿದ್ಯುತ್ ಸಂಪರ್ಕ ಕೋರಿ ‘ನಮ್ಮೂರು- ನಮ್ಮವರು’ ಸಂಘವು ಮೆಸ್ಕಾಂಗೆ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಆಕ್ಷೇಪ ಸಲ್ಲಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರು, ಈ ಜಾಗವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಂಜೂರುಗೊಂಡಿರುವುದರಿಂದ ಇಲ್ಲಿ ಬೇರೆ ಯಾವುದೇ ಕಾಮಗಾರಿ ನಡೆಯದಂತೆ ಕಾರ್ಯಪ್ರವೃತ್ತರಾಗಬೇಕು ಎಂದು ಪತ್ರದಲ್ಲಿ ತಿಳಿಸಿದ್ದರು. ಅಲ್ಲಿಂದ ಅಂಗನವಾಡಿಗೆ ಮತ್ತು ಸಂಘಟನೆಯ ಮಧ್ಯೆ ಸಮರ ಆರಂಭಗೊಂಡಿದೆ. ಇದರ ನಡುವೆ ಅಂಗನವಾಡಿ ರಜಾದಿನವಾದ ಡಿ.15ರ ಆದಿತ್ಯವಾರ, ಅಂಗನವಾಡಿ ಕಾರ್ಯಾಚರಿಸುತ್ತಿದ್ದ ಕಟ್ಟಡದೊಳಗೆ ಬಾಗಿಲಿನ ಕೀ ತೆಗೆದು ಕೆಲವರು ಅಂಗನವಾಡಿಯ ಒಳಗಿರುವ ಕಪಾಟು, ಟೇಬಲ್ ಹಾಗೂ ಅಂಗನವಾಡಿಯ ಗೋಡೆಯ ಮೇಲೆ ‘ನಮ್ಮೂರು ನಮ್ಮವರು’ ಸಂಘಟನೆಯ ಸ್ಟಿಕ್ಕರ್ ಅನ್ನು ಅಂಟಿಸಿಬಿಟ್ಟಿದ್ದಾರಲ್ಲದೆ, ಕಟ್ಟಡದೊಳಗೆ ಕ್ರಿಕೆಟ್ ಬ್ಯಾಟ್‌ಗಳನ್ನು ಇಟ್ಟು ತೆರಳಿದ್ದಾರೆ. ಇವರಿಗೆ ಅಂಗನವಾಡಿಯ ಬಾಗಿಲು ತೆರೆಯಲು ಕೀ ಸಿಕ್ಕಿದ್ದಾದರೂ ಹೇಗೆ ಎನ್ನುವುದು ಅನುಮಾನಕ್ಕೆ ಕಾರಣವಾಗಿದೆ.
ಒಟ್ಟಿನಲ್ಲಿ ಮೈಂದಡ್ಕ ಅಂಗನವಾಡಿ ಕಟ್ಟಡವು ಈಗ ಗೊಂದಲದ ಗೂಡಾಗಿದ್ದು, ಅಧಿಕಾರಿ ವರ್ಗ ಮಧ್ಯ ಪ್ರವೇಶಿಸಿ ಇಲ್ಲಿನ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ಚರ್ಚೆಗೆ ಗ್ರಾಸವಾದ ಪಿಡಿಒ ನಡೆ!
ಕಟ್ಟಡವೊಂದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಾದರೆ ಮೆಸ್ಕಾಂಗೆ ಗ್ರಾ.ಪಂ.ನ ನಿರಾಕ್ಷೇಪಣಾ ಪತ್ರ ಬೇಕಾಗುತ್ತದೆ. ಗ್ರಾ.ಪಂ. ನಿರಾಕ್ಷೇಪಣಾ ಪತ್ರ ನೀಡಬೇಕಾದರೆ ಕಟ್ಟಡಕ್ಕೆ ತೆರಿಗೆ ಕಟ್ಟಿದ ರಶೀದಿ ಬೇಕು. ತೆರಿಗೆ ಕಟ್ಟಬೇಕಾದರೆ ಕಟ್ಟಡಕ್ಕೆ ಡೋರ್ ನಂಬರ್ ಆಗಬೇಕು. ಆದರೆ ಇಲ್ಲಿರುವ ಈ ಕಟ್ಟಡಕ್ಕೆ ಡೋರ್ ನಂಬರ್ ಇಲ್ಲ. ಕಟ್ಟಡಕ್ಕೆ ಯಾವುದೇ ದಾಖಲೆಗಳೇ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಗ್ರಾ.ಪಂ. ಪಿಡಿಒ ಅವರು ಹೇಗೆ ಮೆಸ್ಕಾಂಗೆ ನಿರಾಕ್ಷೇಪಣಾ ಪತ್ರ ನೀಡಿದ್ದಾರೆ ಎಂಬುದು ಸಾರ್ವಜನಿಕರ ಚರ್ಚೆ ಹಾಗೂ ಸಂಶಯಕ್ಕೆ ಕಾರಣವಾಗಿದೆ.

ಮೈಂದಡ್ಕದಲ್ಲಿರುವ ಕಟ್ಟಡದಲ್ಲಿ ಈಗ ಅಂಗನವಾಡಿ ನಡೆಯುತ್ತಿರುವ ಸ್ಥಳವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಂಜೂರುಗೊಳಿಸಲಾಗಿದೆ. ಇದರಲ್ಲಿ ಈ ಕಟ್ಟಡವೂ ಸೇರುತ್ತದೆ. ನಮ್ಮೂರು- ನಮ್ಮವರು ಸಂಘದವರು ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈವರೆಗೆ ಅವರಿಗೆ ನಿವೇಶನ ಮಂಜೂರುಗೊಳಿಸಿಲ್ಲ.
ಚಂದ್ರ ನಾಯ್ಕ
ಕಂದಾಯ ನಿರೀಕ್ಷಕರು, ಉಪ್ಪಿನಂಗಡಿ ಹೋಬಳಿ

ಅಲ್ಲಿ ನಡೆದಿರುವ ಘಟನೆ ಬಗ್ಗೆ ಮಾಹಿತಿ ಬಂದಿದೆ. ನಾನು ಮಂಗಳೂರುನಲ್ಲಿ ತರಬೇತಿಯಲ್ಲಿ ಇದ್ದೇನೆ. ಘಟನೆ ಸಲುವಾಗಿ ಪೊಲೀಸ್ ದೂರು ನೀಡಲು ಮೇಲ್ವಿಚಾರಕರಿಗೆ ಸೂಚನೆ ನೀಡಿರುತ್ತೇನೆ.
-ಮಂಗಳ ಕೆ. ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಪುತ್ತೂರು

ಈ ಜಾಗ ನಮ್ಮ ಸಂಘಟನೆಯದ್ದು, ಈ ಕಟ್ಡಡವೂ ನಮ್ಮದು, ತಾತ್ಕಾಲಿಕವಾಗಿ ಅಂಗನವಾಡಿಗೆ ಕೊಟ್ಟಿರುತ್ತೇವೆ
-ಪುರುಷೋತ್ತಮ, ಅಧ್ಯಕ್ಷರು, ನಮ್ಮೂರು-ನಮ್ಮವರು, ನೆಕ್ಕಿಲಾಡಿ

LEAVE A REPLY

Please enter your comment!
Please enter your name here