ಪುತ್ತೂರು: ವಿದ್ಯಾರ್ಥಿಗಳು ಜ್ಞಾನದ ನಿಧಿಯಾಗಬೇಕು.ಪ್ರತಿಯೊಬ್ಬರ ಅಂತರಂಗದಲ್ಲಿ ಅಗಾಧ ಶಕ್ತಿಯಿದೆ.ಅದರ ಬಗ್ಗೆ ಯಾರಿಗೂ ಅರಿವಿಲ್ಲ.ಅಂತರಂಗದ ಶಕ್ತಿಯನ್ನು ಪರಿಪೂರ್ಣವಾಗಿ ಬಳಸಿಕೊಳ್ಳುವವರು ಜೀವನದಲ್ಲಿ ಯಶಸ್ಸು ಪಡೆಯುತ್ತಾರೆ. ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಸತೀಶ್ಕುಮಾರ್ ರೈ ಅವರು ಹೇಳಿದರು.
ಪುತ್ತೂರಿನ ತೆಂಕಿಲದಲ್ಲಿರುವ ನರೇಂದ್ರ ಪ.ಪೂ.ಕಾಲೇಜಿನಲ್ಲಿ ದ.15ರಂದು ನಡೆದ ಶೈಕ್ಷಣಿಕ, ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಆಶಾ ಬೆಳ್ಳಾರೆ ಮಾತನಾಡಿ ಸ್ಪರ್ಧೆ ಯೋಜನೆಯೊಂದಿಗೆ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಬಹುದು.ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಜ್ಞಾನ ಸಂಪಾದನೆ ಮಾಡಿಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಬೇಕು.ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗುವಂತೆ ಅನೇಕ ಸವಲತ್ತುಗಳಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ದೇಶದ ಆಸ್ತಿಯಾಗಬೇಕು.ಯುವ ಶಕ್ತಿ ಈ ದೇಶದ ಅವಿಭಾಜ್ಯ ಅಂಗ, ಈ ದೇಶಕ್ಕಾಗಿ, ಮಣ್ಣಿಗಾಗಿ, ಮಾತೃಭೂಮಿಯ ರಕ್ಷಣೆಗೆ ನಾವು ಸದಾ ಸಿದ್ಧರಾಗಿರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಉಮೇಶ್ ನಾಯಕ್ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿ ಜೀವನವು ಅಧಿಕ ಸವಾಲಿನಿಂದ ಕೂಡಿದ್ದು,ಅದನ್ನು ಸಮರ್ಪಕವಾಗಿ ಎದುರಿಸಲು ಸಕಾರಾತ್ಮಕ ಧೋರಣೆ ಬೆಳೆಸಿಕೊಳ್ಳಬೇಕು.ವಿದ್ಯಾರ್ಥಿಗಳು ಸಾಧನೆಯ ಹಾದಿಗೆ ಆತ್ಮವಿಶ್ವಾಸವನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಜೀವನದಲ್ಲಿ ಗೆಲುವು ಸಾಧಿಸಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ನರೇಂದ್ರ ಪ.ಪೂ.ಕಾಲೇಜಿನ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಸಂತೋಷ ಬಿ., ಸದಸ್ಯೆ ಮೋಹಿನಿ ದಿವಾಕರ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ದೀಪಾ ನಾಯಕ್ , ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್, ವಿದ್ಯಾರ್ಥಿ ಸಂಘದ ನಾಯಕ ದ್ವಿತೀಯ ವಾಣಿಜ್ಯ ವಿಭಾಗದ ಸೃಜನ್ ಕೆ.ಪಿ. ,ಕಾರ್ಯದರ್ಶಿ ದ್ವಿತೀಯ ವಿಜ್ಞಾನ ವಿಭಾಗದ ಆಶಿಕಾ ರಾವ್ ,ಪ್ರಥಮ ವಾಣಿಜ್ಯ ವಿಭಾಗದ ಹರ್ಷಿತಾ ಉಪಸ್ಥಿತರಿದ್ದರು.
2024-25 ನೇ ಸಾಲಿನಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕ್ರೀಡೆಯಲ್ಲಿ ಕರಾಟೆ, ಅಥ್ಲೆಟಿಕ್ಸ್, ಖೋ-ಖೋ, ವೈಟ್ಲಿಫ್ಟಿಂಗ್ ನಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಉಪನ್ಯಾಸಕರಾದ ಸಾಯಿ ಗೀತ, ಸೌಮ್ಯ ಸಹಕರಿಸಿದರು.
ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಕಾರ್ತಿಕ್ ಕುಮಾರ್ ಎನ್. ರವರು ಸ್ವಾಗತಿಸಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ತೀರ್ಥರಾಜ್ ವಂದಿಸಿದರು.ಕಾರ್ಯಕ್ರಮವನ್ನು ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ರುಚಿತಾ ಕೃಷ್ಣ ನಿರೂಪಿಸಿದರು.