




ಉಪ್ಪಿನಂಗಡಿ: ಪುತ್ತೂರು ತಾಲೂಕಿನಲ್ಲಿ 94ಸಿ ಮತ್ತು ಅಕ್ರಮ- ಸಕ್ರಮ ಫೈಲಿಗೆ ಲಂಚದ ಬೇಡಿಕೆಯಿಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಶಾಸಕ ಅಶೋಕ್ ಕುಮಾರ್ ರೈಯವರ ಸೂಚನೆಯ ಮೇರೆಗೆ ಅವರು ನಿರ್ವಹಿಸುತ್ತಿದ್ದ ಕರ್ತವ್ಯದಿಂದ ಬೇರೆ ಕರ್ತವ್ಯಕ್ಕೆ ನಿಯೋಜನೆಗೊಳಿಸಲಾಗಿದೆ.




ಉಪ್ಪಿನಂಗಡಿ ಗ್ರಾಮ ಆಡಳಿತಾಧಿಕಾರಿ ಜಯಚಂದ್ರ ಅವರನ್ನು ಕುಡಿಪ್ಪಾಡಿ ಗ್ರಾಮಕ್ಕೆ ನಿಯೋಜಿಸಲಾಗಿದ್ದು, ಕುಡಿಪ್ಪಾಡಿ ಗ್ರಾಮ, 34 ನೆಕ್ಕಿಲಾಡಿ ಗ್ರಾಮ ಹಾಗೂ ಕಬಕ ಗ್ರಾಮದಲ್ಲಿ ಗ್ರಾಮ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಂಗಪ್ಪ ಅವರನ್ನು ಉಪ್ಪಿನಂಗಡಿ ಗ್ರಾಮ ಆಡಳಿತಾಧಿಕಾರಿಯಾಗಿ ನಿಯೋಜಿಸಲಾಗಿದೆ. ಉಪ್ಪಿನಂಗಡಿ ಹೋಬಳಿಯ ಅಕ್ರಮ- ಸಕ್ರಮದ (ಎನ್ಸಿಆರ್- ಎಸ್ಆರ್) ಕೇಸ್ ವರ್ಕರ್ ಆಗಿದ್ದ ಶಿವಾನಂದ ನಾಟೇಕರ್ ಅವರನ್ನು ಚುನಾವಣಾ ಶಾಖೆಗೆ ನಿಯೋಜಿಸಲಾಗಿದ್ದು, ಉಪ್ಪಿನಂಗಡಿ ಹೋಬಳಿಯ ಅಕ್ರಮ- ಸಕ್ರಮದ (ಎನ್ಸಿಆರ್- ಎಸ್ಆರ್) ಕೇಸ್ ವರ್ಕರ್ ಆಗಿ ಕೆಂಪರಾಜು ಎಂ.ಎಲ್. ಅವರನ್ನು ನಿಯೋಜಿಸಲಾಗಿದೆ.





ಸುದ್ದಿ ಬಿಡುಗಡೆ ವರದಿಯ ಫಲಶ್ರುತಿ
ಲಂಚ, ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ ಹೋರಾಟ ನಡೆಸುತ್ತಿರುವ ಸುದ್ದಿ ಬಿಡುಗಡೆ ಪತ್ರಿಕೆಯು ಕೆಲ ದಿನಗಳ ಹಿಂದೆ ಉಪ್ಪಿನಂಗಡಿ ಗ್ರಾಮ ಆಡಳಿತಾಧಿಕಾರಿ ಹಾಗೂ ಉಪ್ಪಿನಂಗಡಿಯ ಕಂದಾಯ ಹೋಬಳಿಯ ಅಕ್ರಮ- ಸಕ್ರಮದ (ಎನ್ಸಿಆರ್- ಎಸ್ಆರ್) ಕೇಸ್ ವರ್ಕರ್ ಅವರು ಜೊತೆಗೂಡಿಕೊಂಡು ಅಕ್ರಮ- ಸಕ್ರಮ ಫೈಲ್ ಹಾಗೂ 94ಸಿ ಕಡತಗಳಿಗೆ ಲಂಚದ ಬೇಡಿಕೆಯಿಡುತ್ತಿರುವ ಬಗ್ಗೆ ಸಾರ್ವಜನಿಕರ ಆರೋಪವನ್ನು ಉಲ್ಲೇಖಿಸಿ ವಿಸ್ತೃತ ವರದಿ ಮಾಡಿತ್ತು. ಲಂಚ, ಭ್ರಷ್ಟಾಚಾರದ ವಿರುದ್ಧ ಸಿಡಿದು ನಿಲ್ಲುವ ವ್ಯಕ್ತಿತ್ವದ ವಿರುದ್ಧ ಸಿಡಿದು ನಿಲ್ಲುವ ವ್ಯಕ್ತಿತ್ವದ ಶಾಸಕರಾದ ಅಶೋಕ್ ಕುಮಾರ್ ರೈಯವರು ಕೂಡಾ ಇದನ್ನು ಗಂಭೀರವಾಗಿ ಪರಿಗಣಿಸಿದ್ದರಲ್ಲದೆ, ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಖಡಕ್ ಸೂಚನೆ ನೀಡಿದ್ದರು. ಇದರ ಫಲವಾಗಿ ಒಬ್ಬರನ್ನು ಬೇರೆ ಗ್ರಾಮಕ್ಕೆ ನಿಯೋಜಿಸಿದ್ದರೆ, ಇನ್ನೊಬ್ಬ ಅಧಿಕಾರಿಯನ್ನು ಬೇರೆ ಕರ್ತವ್ಯಕ್ಕೆ ನಿಯೋಜಿಸಿ ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಡೆಯವರು ಆದೇಶ ನೀಡಿದ್ದಾರೆ.








