ಪುತ್ತೂರು: ಶತಮಾನೋತ್ಸವದ ಹೊಸ್ತಿಲಿನಲ್ಲಿರುವ ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ‘ಚಿನ್ನರ ಚಿಲುಮೆ’ ಡಿ.20ಹಾಗೂ 21ರಂದು ವಿನೂತನ ಕಾರ್ಯಕ್ರಮಗಳೊಂದಿಗೆ ಸಂಭ್ರಮಿಸಲಿದೆ.
ಶಾಲಾ ವಾರ್ಷಿಕೋತ್ಸವವನ್ನು ವಿನೂತನವಾಗಿ ನಡೆಸುವ ನಿಟ್ಟಿನಲ್ಲಿ ಸಕಲ ಸಿದ್ದತೆಗಳು ನಡೆದಿದೆ. ವಿಶಾಲವಾದ ವೇದಿಕೆ, ವೇದಿಕೆಯಲ್ಲಿ 36 ಅಡಿ ಉದ್ದದ ಎಲ್‌ಇಡಿ ಪರದೆ, ಸುಮಾರು 2000 ಮಂದಿ ಕುಳಿತುಹೊಳ್ಳುವ ವಿಶಾಲ ಸಭಾಂಗಣ, 4೦೦೦ ಮಂದಿ ಕುಳಿತುಕೊಳ್ಳಬಹುದಾದ ಫೆವಿಲಿಯನ್ ಸಿದ್ದಗೊಂಡಿದೆ. ಶಾಲೆಯು 800 ವಿದ್ಯಾರ್ಥಿಗಳಿಂದ 11 ವಿವಿಧ ರೀತಿಯ ನೃತ್ಯಗಳು ಪ್ರೇಕ್ಷಕರ ಗಮನ ಸೆಳೆಯಲಿದೆ.
ಡಿ.20ರಂದು ಧ್ವಜಾರೋಹಣ ಹಾಗೂ ಬಹುಮಾನ ವಿತರಣೆ ನಡೆಯಲಿದ್ದು ಶಾಲಾ ಸಂಚಾಲಕಿ ಭಗಿನಿ ಪ್ರಶಾಂತಿ ಬಿ.ಎಸ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಹುಮಾನ ವಿತರಣಾ ಸಮಾರಂಭದಲ್ಲಿ ಮಂಗಳೂರು ಬೆಥನಿ ಶಿಕ್ಷಣ ಮಂಡಳಿಯ ಉಪ ಕಾರ್ಯದರ್ಶಿ ಭಗಿನಿ ಸಿಸಿಲಿಯಾ ಮೆಂಡೋನ್ಸಾ ಅಧ್ಯಕ್ಷತೆ ವಹಿಸಲಿದ್ದಾರೆ. ನಗರ ಸಭಾ ಪೌರಾಯುಕ್ತ ಮಧು ಎಸ್. ಮನೋಹರ್ ಹಾಗೂ ನಗರ ಠಾಣಾ ಪೊಲೀಸ್ ನಿರೀಕ್ಷಕ ಜಾನ್ಸನ್ ಡಿ’ಸೋಜ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಡಿ.21ರಂದು ಸಂಜೆ ನಡೆಯುವ ಶಾಲಾ ವಾರ್ಷಿಕೋತ್ಸವದಲ್ಲಿ ಮಂಗಳೂರು ಪ್ರಾಂತ್ಯದ ಬೆಥನಿ ಶಿಕ್ಷಣ ಮಂಡಳಿಯ ಕಾರ್ಪೋರೇಟ್ ಮ್ಯಾನೇಜರ್ ಡಾ|ಲಿಲ್ಲಿ ಪಿರೇರಾ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಹಿರಿಯ ವಿದ್ಯಾರ್ಥಿಯಾಗಿರುವ ಉದ್ಯಮಿ ನಿತಿನ್ ಪಕ್ಕಳ, ದರ್ಬೆ ಪಾಂಗಳಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲಾ ಸುರಕ್ಷಾ ಸಮಿತಿ ಅಧ್ಯಕ್ಷೆ ಸುನಿತಾ ಪಿರೇರಾ, ಪುತ್ತೂರು ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ಶಶಿಕಲಾ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಮೇಲ್ವಿಚಾರಕ ಶ್ರೀಕಾಂತ್ ಬಿರಾವು ಅತಿಥಿಗಳಾಗಿ ಆಗಮಿಸಲಿದ್ದಾರೆ.
ಕಿರಿಯ ಪುಷ್ಪ ಪ್ರಶಸ್ತಿ:
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶಾಲೆಯ ಹಿರಿಯ ವಿದ್ಯಾರ್ಥಿಗಳಿಗೆ ನೀಡುವ ಕಿರಿಯ ಪುಷ್ಪ ಪ್ರಶಸ್ತಿಯನ್ನು ಸಂತೋಷ್ ದಲ್ಮೆದಾ, ಸತ್ಯಶಂಕರ್ ಭಟ್, ಯೂಸುಫ್ ಡ್ರೀಮ್ಸ್, ಡಾ.ಮೌಲ್ಯ ಮಾಲಾಡಿ, ರಶ್ಮೀ ಬಲ್ನಾಡು ಇವರಿಗೆ ಈ ಸಾಲಿನ ಕಿರಿಯ ಪುಷ್ಪ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 14ರ ವಯೋಮಾನ ಬಾಲಕಿಯ ಕಬಡ್ಡಿ ಪಂದ್ಯಾಟದಲ್ಲಿ ರಾಷ್ಟ್ರ ಮಟ್ಟದಲ್ಲಿ 5ನೇ ಸ್ಥಾನ ಪಡೆದ ಶಾಲಾ ತಂಡದ ಆಟಗಾರರು, ರಾಷ್ಟ್ರ ಮಟ್ಟದ ಕಬಡ್ಡಿ ತರಬೇತುದಾರರಾಗಿ ನೇಮಕಗೊಂಡ ಶಾಲಾ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್, ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಸಹಕರಿಸಿದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಮೇಲ್ವಿಚಾರಕ ಶ್ರೀಕಾಂತ್ ಬಿರಾವು, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಹಾಗೂ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ರಾಮಚಂದ್ರ ಭಟ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ಶಾಲಾ ಮುಖ್ಯಗುರು ವೆನಿಶಾ ಬಿ.ಎಸ್ ತಿಳಿಸಿದ್ದಾರೆ.
ಸುದ್ದಿಯಲ್ಲಿ ನೇರಪ್ರಸಾರ:
ಡಿ.21ರಂದು ನಡೆಯುವ ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮಗಳು ಸುದ್ದಿ ಯೂ ಟ್ಯೂಬ್ ಚಾನೆಲ್ ಹಾಗೂ ಫೇಸ್‌ಬುಕ್ ಪೇಜ್‌ನಲ್ಲಿ ನೇರಪ್ರಸಾರಗೊಳ್ಳಲಿದೆ.