ಪುತ್ತೂರು: ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ರಾಜ್ ಇಲಾಖೆಯ ವತಿಯಿಂದ ಘನ ತ್ಯಾಜ್ಯ ನಿರ್ವಹಣೆಯ ಕುರಿತಾಗಿ ಎಕ್ಸಿಸ್ ಬೆಂಗಳೂರು ಇವರಿಂದ ಡಾಕ್ಯುಮೆಂಟರಿ ಚಿತ್ರೀಕರಣ ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯಿತು.
ಒಳಮೊಗ್ರು ಗ್ರಾಮ ಪಂಚಾಯತ್ನ ಘನ ತ್ಯಾಜ್ಯ ಘಟಕ, ಪೊರ್ಲುದ ಕುಂಬ್ರ ಸೆಲ್ಫೀ ಪಾಯಿಂಟ್ ಸೇರಿದಂತೆ ವಿವಿಧ ಕಡೆಗಳಲ್ಲಿ ಚಿತ್ರೀಕರಣ ನಡೆಯಿತು. ಮುಖ್ಯವಾಗಿ ಮನೆ ಹಾಗೂ ವ್ಯಾಪಾರ ಕೇಂದ್ರಗಳಲ್ಲಿ ಉತ್ಪತ್ತಿಯಾಗುವ ಕಸ, ತ್ಯಾಜ್ಯಗಳು ಗ್ರಾಮ ಪಂಚಾಯತ್ ಸ್ವಚ್ಛವಾಹಿನಿ ವಾಹನದ ಸ್ವಚ್ಚತಾ ಸೇನಾನಿಗಳ ಮೂಲಕ ಘನ ತ್ಯಾಜ್ಯ ಘಟಕಕ್ಕೆ ಹೋಗಿ ಅಲ್ಲಿಂದ ತಾಲೂಕಿನ ಕೆದಂಬಾಡಿಯಲ್ಲಿರುವ ಮುಖ್ಯ ಘನ ತ್ಯಾಜ್ಯ ಘಟಕ(ಎಂಆರ್ಎಫ್)ಕ್ಕೆ ಹೋಗುವ ತನಕದ ಚಿತ್ರಣಗಳನ್ನು ಸೆರೆ ಹಿಡಿಯಲಾಯಿತು.
ಡಾಕ್ಯುಮೆಂಟರಿಯನ್ನು ಮುಂದಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಸಲ್ಲಿಸಲಾಗುತ್ತದೆ. ಒಳಮೊಗ್ರು ಗ್ರಾಮ ಪಂಚಾಯತ್ ಈಗಾಗಲೇ ಸ್ವಚ್ಛತೆಗೆ ತನ್ನದೇ ಆದ ಹೆಸರನ್ನು ಪಡೆದುಕೊಂಡಿದ್ದು ಸ್ವಚ್ಚ ಗ್ರಾಮ, ಸ್ವಚ್ಚ ಪೇಟೆ ಎಂಬ ಧ್ಯೇಯದೊಂದಿಗೆ ಪಂಚಾಯತ್ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಒಳಮೊಗ್ರು ಗ್ರಾಮ ಪಂಚಾಯತ್ ಸ್ವಚ್ಚತೆಯ ಬಗ್ಗೆ ಹಮ್ಮಿಕೊಂಡು ಬಂದಿರುವ ಕಾರ್ಯಕ್ರಮಗಳು ಹಾಗೇ ಸ್ವಚ್ಛತೆಗೆ ದೊರೆತ ಪುರಸ್ಕಾರಗಳ ಬಗ್ಗೆ ಮತ್ತು ಗ್ರಾಮದಿಂದ ಕಸ,ತ್ಯಾಜ್ಯಗಳ ವಿಲೇವಾರಿ ಯಾವ ರೀತಿಯಲ್ಲಿ ನಡೆಯುತ್ತಿದೆ ಎಂಬುದರ ಬಗ್ಗೆ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಪಂಚಾಯತ್ ಅಭಿವೃದ್ದಿ ಅಧಿಕಾರಿ ಮನ್ಮಥ ಅಜಿರಂಗಳ, ಪಂಚಾಯತ್ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯ ವಿನೋದ್ ಶೆಟ್ಟಿ ಮುಡಾಲ, ಎಕ್ಸಿಸ್ ತಂಡದ ಡಿಸೈನ್ ವಿಡಿಯೋಗ್ರಾಫರ್ ವಿನೋದ್ ಕುಮಾರ್, ಸಿನಿಮಾ ನಿರ್ದೇಶಕ ಸಾಯಿಶ್ರೀನಿಧಿ, ಛಾಯಾಗ್ರಾಹಕ ಮನೀಷ್, ಪ್ರೋಡ್ಯೂಸರ್ ತೇಜಸ್, ಡಿಸೈನರ್ ಮರಿಯನ್, ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಮಾಲೋಚಕರುಗಳಾದ ಪವನ್ ಕುಮಾರ್ ಮತ್ತು ನವೀನ್ ಕುಮಾರ್ ಉಪಸ್ಥಿತರಿದ್ದರು.