ಪುತ್ತೂರು: ತಮ್ಮ ವಾರ್ಡ್‌ನ ರಸ್ತೆಯ ಬದಿಯಲ್ಲಿ ತುಂಬಿರುವ ತ್ಯಾಜ್ಯಗಳನ್ನು ಸ್ವತಃ ವಾರ್ಡ್‌ನ ಸದಸ್ಯರುಗಳು ಒಟ್ಟು ಸೇರಿಕೊಂಡು ತ್ಯಾಜ್ಯಗಳನ್ನು ತೆರವುಗೊಳಿಸಿ, ಸ್ವಚ್ಚಗೊಳಿಸುವ ಮೂಲಕ ಕಬಕ ಗ್ರಾ.ಪಂ 3ನೇ ವಾರ್ಡ್‌ನ ಸದಸ್ಯರು ಮಾದರಿ ಕಾರ್ಯ ಮಾಡಿದ್ದಾರೆ.
ಕಬಕ ಗ್ರಾಮ ಪಂಚಾಯತ್ 3ನೇ ವಾರ್ಡ್‌ನಲ್ಲಿರುವ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್, ಪೇಪರ್, ಪ್ಲಾಸ್ಟಿಕ್ ಬಾಟಳಿಗಳಿಂದ ತುಂಬಿಕೊಂಡಿದ್ದವು. ಸದಸ್ಯರಾಗಿರುವ ತಮ್ಮ ಜವಾಬ್ದಾರಿ ಹಾಗೂ ಸಾಮಾಜಿಕ ಕಾಳಜಿಯಿಂದ 3ನೇ ವಾರ್ಡ್‌ನ ಸದಸ್ಯರಾದ ವಿನಯ ಕುಮಾರ್ ಕಲ್ಲೇಗ, ರಾಜೇಶ್ ಗೌಡ ಪೋಳ್ಯ, ಶಂಕರಿ ಜಿ.ಭಟ್ ಬನಾರಿ ಹಾಗೂ ಪುಷ್ಪಾ ಕುಲಾಲ್ ಶೇವಿರೆ ಸೇರಿಕೊಂಡು ತ್ಯಾಜ್ಯಗಳನ್ನು ತೆರವುಗೊಳಿಸಿ ಸ್ವಚ್ಚಗೊಳಿಸಿದರು.
ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭಿಸಿ, 10 ಗಂಟೆಯ ತನಕ 3ನೇ ವಾರ್ಡ್‌ನ ಪೋಳ್ಯದಿಂದ ಮುರ ತನಕದ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿದ್ದ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಚಗೊಳಿಸಿದರು. ರೈಲ್ವೇ ಹಳಿ ಬಳಿಯಲ್ಲಿ ಬಾಕಿ ಉಳಿದಿರುವ ಕಡೆ ಮುಂದಿನ ದಿನಗಳಲ್ಲಿ ಸ್ವಚ್ಚಗೊಳಿಸಲಾಗುವುದು ಎಂದು ಸದಸ್ಯ ವಿನಯ ಕುಮಾರ್ ತಿಳಿಸಿದ್ದಾರೆ. ಸದಸ್ಯರ ಈ ಸೇವಾ ಕಾರ್ಯ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.