ರಾಮಕುಂಜ: ಗಂಡಿಬಾಗಿಲು ಹಾಗೂ ಆತೂರು ಬೈಲು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆದವರನ್ನು ಪತ್ತೆ ಹಚ್ಚಿರುವ ಕೊಯಿಲ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ತ್ಯಾಜ್ಯ ಎಸೆದವರಿಗೆ ದಂಡ ವಿಧಿಸಿರುವ ಘಟನೆ ನಡೆದಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಡಿಬಾಗಿಲು ಹಾಗೂ ಆತೂರು ಬೈಲು ಎಂಬಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆದಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಸುಭಾಸ್ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಸಂದೇಶ್, ಕಾರ್ಯದರ್ಶಿ ಪಮ್ಮು ಹಾಗೂ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಕಂಡುಬಂದ ಕಸದ ರಾಶಿಯಲ್ಲಿ ಏನಾದರೂ ಕುರುಹು ಸಿಗುತ್ತದೋ ಎಂದು ತ್ಯಾಜ್ಯದಲ್ಲಿ ಹುಡುಕಾಡಿದಾಗ ಕೆಮ್ಮಾರದ ಒಬ್ಬರ ಮನೆಗೆ ಇಂಟರ್‌ಲಾಕ್ ತಂದ ಬಿಲ್ ಹಾಗೂ ಫೋನ್ ನಂಬರ್ ಪತ್ತೆಯಾಯಿತು. ಅಂತೆಯೇ ಆತೂರು ಬೈಲಿನಲ್ಲಿ ತ್ಯಾಜ್ಯದಲ್ಲಿ ವ್ಯಕ್ತಿಯೊಬ್ಬರಿಗೆ ಮಸೀದಿಯಿಂದ ಬಂದ ನೊಟೀಸು ಪತ್ತೆಯಾಗಿತ್ತು. ಈ ಬಗ್ಗೆ ಅವರಲ್ಲಿ ವಿಚಾರಿಸಿದಾಗ ಪಕ್ಕದ ಮನೆಯವರು ಕಾರ್ಯಕ್ರಮವೊಂದನ್ನು ನಡೆಸಿ ಅಲ್ಲಿ ಊಟೋಪಚಾರಕ್ಕೆ ಬಳಸಿದ ತ್ಯಾಜ್ಯ ಎಸೆದಿರುವುದು ಬೆಳಕಿಗೆ ಬಂದಿದೆ.
ತ್ಯಾಜ್ಯ ಎಸೆದವರು ಆರಂಭದಲ್ಲಿ ನಿರಾಕರಿಸಿದರೂ ಬಳಿಕ ತ್ಯಾಜ್ಯ ಎಸೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಪಂಚಾಯಿತಿಗೆ ಬಂದು ದಂಡ ಕಟ್ಟಬೇಕು ಎಂದು ಸೂಚಿಸಿದರೂ ಕ್ಯಾರೇ ಅನ್ನಲಿಲ್ಲ. ದಂಡ ಕಟ್ಟದಿದ್ದರೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ಕೊಟ್ಟು ನೊಟೀಸು ನೀಡಿದ ಬಳಿಕ ಡಿ.18ರಂದು ಗ್ರಾಮ ಪಂಚಾಯಿತಿ ಕಚೇರಿಗೆ ಬಂದು ಇಬ್ಬರೂ ತಲಾ ರೂ.5,000 ದಂಡ ದಂಡ ಕಟ್ಟಿದ್ದಾರೆ ಎಂದು ವರದಿಯಾಗಿದೆ.