ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ- ಧಾರ್ಮಿಕ ಸಭೆ

0

ಧರ್ಮ ಮತ್ತು ನಮಗಿರುವ ಸಂಬಂಧ ಎಲೆ ಮತ್ತು ಮರದಂತೆ- ಶ್ರೀ ವಿದ್ಯಾಪ್ರಸನ್ನ

ಉಪ್ಪಿನಂಗಡಿ: ಧರ್ಮ ಮತ್ತು ನಮಗಿರುವ ಸಂಬಂಧ ಎಲೆ ಮತ್ತು ಮರದಂತೆ. ಧರ್ಮ, ಸಂಸ್ಕಾರ, ಪುರಾತನ ಆಚರಣೆಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಂಸ್ಕಾರಯುತ ಬದುಕು ನಮ್ಮದಾಗಲು ಸಾಧ್ಯ. ನಾವು ಧರ್ಮವನ್ನು ಕಾದಾಗ ಧರ್ಮವು ನಮ್ಮನ್ನು ಕಾಯುತ್ತದೆ ಎಂದು ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದರು ತಿಳಿಸಿದರು.


ಇಲ್ಲಿನ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಎರಡನೇ ದಿನವಾದ ಡಿ.19ರಂದು ರಾತ್ರಿ ಮಯೂರ ಕಲಾ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.


ದೈವ ಸಂಕಲ್ಪವಿದ್ದಾಗ ಮಾತ್ರ ಎಲ್ಲವೂ ನಡೆಯಲು ಸಾಧ್ಯ. ನಮ್ಮ ಸನಾತನ ಹಿಂದೂ ಧರ್ಮದ ಭಾರತೀಯ ಸಂಸ್ಕೃತಿಯು ಶುದ್ಧ ನೀರಿನಂತಿದ್ದು, ಇದರಿಂದ ನಮಗೆ ಶಾಂತಿ- ನೆಮ್ಮದಿಯ ಬದುಕು ಸಾಧ್ಯ. ಆದರೆ ವಿದೇಶಿ ಸಂಸ್ಕೃತಿಯು ಹಾಲಿನಂತೆ. ಹಾಲಿನಲ್ಲಿ ಮೀನನ್ನು ಹಾಕಿದರೆ ಹೇಗೆ ಅದು ಬದುಕುಳಿಯಲು ಸಾಧ್ಯವಿಲ್ಲವೋ ಹಾಗೆಯೇ ವಿದೇಶಿ ಸಂಸ್ಕೃತಿಯಲ್ಲಿ ಕ್ಷಣಿಕ ಖುಷಿ ಕೊಟ್ಟರೂ ನೆಮ್ಮದಿಯ ಜೀವನ ಅದರಲ್ಲಿ ದೊರೆಯಲು ಸಾಧ್ಯವಿಲ್ಲ. ಮನೆಯ ಮಕ್ಕಳಿಗೆ ಧರ್ಮ ಸಂಸ್ಕೃತಿಯನ್ನು ಕೊಟ್ಟಾಗ ಮಾತ್ರ ನಮ್ಮ ವೃದ್ಧಾಪ್ಯದ ಕಾಲದಲ್ಲಿ ಅದು ಮಕ್ಕಳ ಮೂಲಕ ನಮ್ಮನ್ನು ಕಾಪಾಡಲು ಸಾಧ್ಯ. ಆದ್ದರಿಂದ ಧರ್ಮ ಸಂಸ್ಕಾರವನ್ನು ಉಳಿಸುವ ಕಾರ್ಯವಾಗಬೇಕು. ದೈವ- ದೇವರಲ್ಲಿ ಭಕ್ತಿ ಉಳಿದಾಗ ಮಾತ್ರ ಧರ್ಮ ಉಳಿದು, ಶೃದ್ಧಾ ಕೇಂದ್ರಗಳ ಸಾನಿಧ್ಯ ಗಟ್ಟಿಗೊಳ್ಳಲು ಸಾಧ್ಯ. ನಮ್ಮಲ್ಲಿ ಶೃದ್ಧೆ ಗಟ್ಟಿ ಉಳಿಯಬೇಕಾದರೆ ಶೃದ್ಧಾ ಕೇಂದ್ರಗಳು ಗಟ್ಟಿ ಉಳಿಯಬೇಕು ಎಂದರು.


ಧಾರ್ಮಿಕ ಉಪನ್ಯಾಸ ನೀಡಿದ ಬ್ರಹ್ಮಶ್ರೀ ಕಾರ್ತಿಕ ತಂತ್ರಿಗಳು ಮಾತನಾಡಿ, ಪ್ರತಿಯೊಂದು ಜೀವಿಯ ಹೃದಯದಲ್ಲಿ ಭಗವಂತ ನೆಲೆಸಿದ್ದರೂ, ಭಗವಂತನನ್ನು ನಮಗೆ ಕಾಣಲು ಸಾಧ್ಯವಿಲ್ಲ. ನಮ್ಮ ರೂಪವನ್ನು ನೋಡಲು ನಮಗೆ ಹೇಗೆ ದರ್ಪಣದ ಅವಶ್ಯಕತೆ ಇದೆಯೋ ಅದೇ ರೀತಿ ಭಗವಂತನನ್ನು ಬಿಂಬ ಮೂಲಕ ಉಪಾಸನೆ ಮಾಡಿ, ಧ್ಯಾನ, ಪೂಜೆ, ತಪಸ್ಸು, ಭಜನೆಯ ಮೂಲಕ ಆರಾಧನೆ ಮಾಡಬೇಕಾಗುತ್ತದೆ. ಜೀವನದಲ್ಲಿ ಹಣವೊಂದಿದ್ದರೆ ಮಾತ್ರ ಶಾಂತಿ- ನೆಮ್ಮದಿ ದೊರೆಯಲು ಸಾಧ್ಯವಿಲ್ಲ. ಭಗವಂತ ಆರಾಧನೆಯ ಮೂಲಕ ಮಾತ್ರ ಇದನ್ನು ಪಡೆಯಲು ಸಾಧ್ಯ. ಭಗವಂತ ಒಬ್ಬನೇ ಆದರೂ ಆಯಾ ಸಂದರ್ಭಕ್ಕೆ ದೇವರು ಬೇರೆ ಬೇರೆ ಅವತಾರ ತಾಳುತ್ತಾನೆ. ಗಾಂಗೇಯ, ಕಾರ್ತೀಕೇಯ, ಷಡಾನನ, ದೇವಸೇನಾನಿ ಎಂದು ಕರೆಸಿಕೊಳ್ಳುವ ಸುಬ್ರಹ್ಮಣ್ಯನ ಆರಾಧನೆಗೆ ಮತ್ತು ಪರಶುರಾಮ ಸೃಷ್ಟಿಯ ತುಳುನಾಡಿನಲ್ಲಿ ನಾಗಾರಾಧನೆಗೆ ಅವಿನಾಭವ ಸಂಬಂಧ ಇದೆ. ದೃಢ ವಿಶ್ವಾಸದಿಂದ ದೇವರ ನಾಮ ಸಂಕೀರ್ತನೆ ಮಾಡಿದಾಗ ಮಾತ್ರ ಭಗವಂತನ ಪರಿಪೂರ್ಣ ಆರಾಧನೆಯಾಗಲು ಸಾಧ್ಯ. ಆಗ ಮಾತ್ರ ಭಗವಂತನ ಅನುಗ್ರಹ ಪ್ರಾಪ್ತಿಯಾಗಲು ಸಾಧ್ಯ ಎಂದರು.


ಅಧ್ಯಕ್ಷತೆ ವಹಿಸಿದ್ದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಧರ್ಮದ ಆಚರಣೆ ಶೇ.100 ಅನುಷ್ಟಾನವಾದಾಗ ಮಾತ್ರ ದೇಶ, ಸನಾತನ ಧರ್ಮದ ಸಂಸ್ಕೃತಿ ಉಳಿಯಲು ಸಾಧ್ಯ. ಸ್ವಾಮೀಜಿಗಳ ತೇಜೋವಧೆ, ಭಜಕರ ನಿಂದನೆ, ಧರ್ಮದ ಮೇಲೆ ಆಕ್ರಮಣವಾಗುತ್ತಿರುವ ಈ ಕಾಲಘಟ್ಟದಲ್ಲಿ ಧರ್ಮ, ಕೇಸರಿ, ಧಾರ್ಮಿಕ ಕೇಂದ್ರಗಳನ್ನು ಉಳಿಸುವ ಕೆಲಸ ನಮ್ಮದಾಗಬೇಕು. ಧಾರ್ಮಿಕ ಕೇಂದ್ರಗಳ ನಡುವೆ ನಿರಂತರ ಸಂಪರ್ಕ ಹೊಂದಿದಾಗ ಮಾತ್ರ ನಮ್ಮ ಬದುಕು ಕೃತಾರ್ಥತೆ ಪಡೆಯಲು ಸಾಧ್ಯ ಎಂದರು.


ಶ್ರೀ ದೇವರ ಪಲ್ಲಕಿಗೆ ಮರಗಳನ್ನು ನೀಡಿ ಸಹಕರಿಸಿದ ಧರ್ನಪ್ಪ ಗೌಡ ನೆಡ್ಚಿಲು, ಪ್ರತಾಪ್ ಪೆರಿಯಡ್ಕ, ವಸಂತ ಕುಕ್ಕೆಶ್ರೀ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಅವಿರತವಾಗಿ ಶ್ರಮಿಸಿದ ವಿಜಯ ಶಿಲ್ಪಿ ಕುಕ್ಕುಜೆ, ನವೀನ್ ಕುಮಾರ್ ಕಲ್ಯಾಟೆ ಅವರನ್ನು ಗೌರವಿಸಲಾಯಿತು.


ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಜಗದೀಶ ರಾವ್ ಮಣಿಕ್ಕಳ ಉಪಸ್ಥಿತರಿದ್ದರು. ಆಡಳಿತ ಸಮಿತಿಯ ಉಪಾಧ್ಯಕ್ಷರಾದ ಸುರೇಶ ಅತ್ರೆಮಜಲು, ಕಾರ್ಯದರ್ಶಿ ಕೇಶವ ರಂಗಾಜೆ, ಜೊತೆ ಕಾರ್ಯದರ್ಶಿ ರಾಮಣ್ಣ ಶೆಟ್ಟಿ ಬೊಳ್ಳಾವು, ಸದಸ್ಯರಾದ ಶಾಂಭವಿ ರೈ ಪುಳಿತ್ತಡಿ, ಹರೀಶ್ಚಂದ್ರ ಮೊಗ್ರಾಲ್ ಕುವೆಚ್ಚಾರು, ಬಿ. ಶಂಕರನಾರಾಯಣ ಭಟ್ ಬೊಳ್ಳಾವು, ಸದಾನಂದ ಶೆಟ್ಟಿ ಕಿಂಡೋವು, ಲೊಕೇಶ ಪೂಜಾರಿ ಬೆತ್ತೋಡಿ, ವಿಜಯಶಿಲ್ಪಿ ಕುಕ್ಕುಜೆ, ಜತ್ತಪ್ಪ ನಾಯ್ಕ ಬೊಳ್ಳಾವು, ನವೀನ್ ಕುಮಾರ್ ಕಲ್ಯಾಟೆ, ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ಡಾ. ರಾಜಾರಾಮ ಕೆ.ಬಿ. ಶ್ರೀಮತಿ ಉಷಾಚಂದ್ರ ಮುಳಿಯ, ಪ್ರಧಾನ ಕಾರ್ಯದರ್ಶಿ ಜಯಗೋವಿಂದ ಶರ್ಮಾ ಪದಾಳ, ಜೊತೆ ಕಾರ್ಯದರ್ಶಿಗಳಾದ ಲಕ್ಷ್ಮಣ ಗೌಡ ನೆಡ್ಚಿಲು, ಸುರೇಶ ಗೌಂಡತ್ತಿಗೆ, ಕೋಶಾಧಿಕಾರಿ ರಾಮಚಂದ್ರ ಮಣಿಯಾಣಿ ನೆಡ್ಚಿಲು, ಸ್ವಾಗತ ಸಮಿತಿಯ ಸಂಚಾಲಕರಾದ ಸುನೀಲ್ ಕುಮಾರ್ ದಡ್ಡು, ಆರ್ಥಿಕ ಸಮಿತಿಯ ಸಂಚಾಲಕರಾದ ಧರ್ನಪ್ಪ ನಾಯ್ಕ, ಪ್ರಸಾದ ಸಮಿತಿಯ ಸಂಚಾಲಕರಾದ ಹರೀಶ್ವರ ಮೊಗ್ರಲ್ ಕುವೆಚ್ಚಾರು, ವೈದಿಕ ಸಮಿತಿಯ ಸಂಚಾಲಕರಾದ ಶಂಕರನಾರಾಯಣ ಭಟ್, ಅನ್ನಸಂತರ್ಪಣ ಸಮಿತಿಯ ಸಂಚಾಲಕರಾದ ಪ್ರಶಾಂತ್ ಪೆರಿಯಡ್ಕ, ಕಾರ್ಯಾಲಯ ಸಮಿತಿಯ ಸಂಚಾಲಕರಾದ ಲೊಕೇಶ್ ಬೆತ್ತೋಡಿ, ಕಲಶ ಸಮಿತಿಯ ಸಂಚಾಲಕರಾದ ಬಿ. ರಾಧಾಕೃಷ್ಣ ಭಟ್, ಅಲಂಕಾರ ಸಮಿತಿಯ ಸಂಚಾಲಕರಾದ ಪ್ರಸನ್ನ ಪೆರಿಯಡ್ಕ, ಮಹಿಳಾ ಸಮಿತಿಯ ಸಂಚಾಲಕರಾದ ಪುಷ್ಪವಲ್ಲಿ, ಸ್ವಯಂ ಸೇವಕ ಸಮಿತಿಯ ಸಂಚಾಲಕರಾದ ಚಿದಾನಂದ ಪಂಚೇರು, ವಾಹನ ಸಮಿತಿಯ ಸಂಚಾಲಕರಾದ ನೋಣಯ್ಯ ಗೌಡ, ವಿವಿಧ ಸಮಿತಿಗಳ ಶಿವಪ್ಪ ಷಣ್ಮುಖ ಪ್ರಸನ್ನ, ವಸಂತ ನಾಯ್ಕ ಬೊಳ್ಳಾವು, ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ವಿದ್ಯಾಧರ ಜೈನ್, ಚಿನ್ಮಯ ಪದಾಳ, ಗಿರೀಶ್ ಆರ್ತಿಲ, ಲೊಕೇಶ ನೆಕ್ಕರೆ, ರಾಜೇಶ್ ಕೊಡಂಗೆ, ವಿಶ್ವನಾಥ ಶೆಟ್ಟಿ ಅಮ್ಟೂರುಬಾರಿಕೆ ಗುತ್ತು, ಉದಯ ಅತ್ರೆಮಜಲು ಮತ್ತಿತರರು ಉಪಸ್ಥಿತರಿದ್ದರು.


ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷರಾದ ಉದಯಶಂಕರ ಭಟ್ಟ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ಡಿ. ಚಂದಪ್ಪ ಮೂಲ್ಯ ವಂದಿಸಿದರು. ಆಡಳಿತ ಸಮಿತಿಯ ಸದಸ್ಯರಾದ ಲೊಕೇಶ ಬೆತ್ತೋಡಿ, ಅವನೀಶ್ ಹಾಗೂ ಆಮಂತ್ರಣ ಸಮಿತಿಯ ಮಹಾಲಿಂಗೇಶ್ವರ ಭಟ್ ಮಧುವನ ಕಾರ್ಯಕ್ರಮ ನಿರೂಪಿಸಿದರು.

ಪದಾಳ ಕ್ಷೇತ್ರದಲ್ಲಿ ಇಂದು
ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳ ಮೂರನೇ ದಿನವಾದ ಡಿ.20ರಂದು ಬೆಳಗ್ಗೆ 5ರಿಂದ ವೈದಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಮಧ್ಯಾಹ್ನ 12ಕ್ಕೆ ಹೋಮಗಳ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಲಿದೆ.


ಸಂಜೆ5:30ರಿಂದ ವೈದಿಕ ಕಾರ್ಯಕ್ರಮಗಳ ಆರಂಭಗೊಳ್ಳಲಿದ್ದು, ರಾತ್ರಿ ದುರ್ಗಾಪೂಜೆ, ಮಹಾಪೂಜೆಯಾಗಿ ಪ್ರಸಾದ ವಿತರಣೆ ನಡೆಯಲಿದೆ. ಬಳಿಕ ಅನ್ನಸಂತರ್ಪಣೆ ನಡೆಯಲಿದೆ.


ಭಜನಾ ಸೇವೆ:
ದಿ. ನಡುಸಾರು ಜಯರಾಮ ಭಟ್ಟ ವೇದಿಕೆಯಲ್ಲಿ ಪೂರ್ವಾಹ್ನ 7ರಿಂದ ಸಂಜೆ 5ರವರೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ: ಮಯೂರ ಕಲಾ ವೇದಿಕೆಯಲ್ಲಿ ಮಧ್ಯಾಹ್ನ 1ರಿಂದ 3ರವರೆಗೆ ‘ಭಕ್ತಿ – ಭಾವ- ಸಂಗಮ’, ಸಂಜೆ 5ರಿಂದ 6ರವರೆಗೆ ಭರತನಾಟ್ಯ, ಮೋಹಿನಿಯಾಟ್ಟಂ, ಕೂಚುಪುಡಿ, ಕೇರಳ ನಟನಂ ನಡೆಯಲಿದೆ. ರಾತ್ರಿ 7ರಿಂದ ಧಾರ್ಮಿಕ ಸಭೆ ನಡೆಯಲಿದ್ದು, ಮಾಜಿ ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದಾರೆ. ದೈವ ನರ್ತಕ, ಉಪನ್ಯಾಸಕರಾದ ಡಾ. ರವೀಶ ಪಡುಮಲೆ ಧಾರ್ಮಿಕ ಭಾಷಣ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಂಗಳೂರು ಕೆಎಂಎಫ್ ಅಧ್ಯಕ್ಷರಾದ ಸುಚರಿತ ಶೆಟ್ಟಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಭಾಗವಹಿಸಲಿದ್ದಾರೆ. ರಾತ್ರಿ 8.30ರಿಂದ ಜಗದೀಶ ಆಚಾರ್ಯ ಮತ್ತು ಬಳಗದವರಿಂದ ‘ಭಕ್ತಿ ರಸಮಂಜರಿ’ ನಡೆಯಲಿದೆ

LEAVE A REPLY

Please enter your comment!
Please enter your name here