ರಜಾ ಅವಧಿಯಲ್ಲಿ ವಿಕಲಚೇತನ ಶಿಕ್ಷಕರಿಗೆ ಪಾವತಿಸಿದ ಸಂಚಾರಿ ಭತ್ಯೆ-ಹೆಚ್ಚುವರಿ ಭತ್ಯೆ ಮರುಪಾವತಿಗೆ ಶಿಕ್ಷಣ ಇಲಾಖೆಯಿಂದ ನೋಟಿಸ್

0

ಪುತ್ತೂರು: ಸಾಂದರ್ಭಿಕ ರಜೆ ಹೊರತುಪಡಿಸಿ ಉಳಿದ ರಜಾ ಅವಧಿಯಲ್ಲಿ ಪಾವತಿಯಾಗಿರುವ ವಿಕಲಚೇತನರ ಪ್ರಯಾಣ(6%) ಭತ್ಯೆಯನ್ನು ಸರ್ಕಾರದ ಖಜಾನೆಗೆ ಮರು ಪಾವತಿಸುವಂತೆ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಲೆಕ್ಕಪರಿಶೋಧನೆ ವಿಭಾಗದವರು ತಪಾಸಣೆ ಮಾಡಿ, ಬೆಂಗಳೂರು, ಮೈಸೂರು ವಿಭಾಗದ ಕ್ಷೇತ್ರ ಶಿಕ್ಷಣಾಧಿಕಾರಿ ಮೂಲಕ ಎಲ್ಲಾ ವಿಕಲಚೇತನ ಶಿಕ್ಷಕರಿಗೆ ಖಡಕ್ ನೋಟಿಸ್ ಜಾರಿ ಮಾಡಿದ್ದಾರೆ.

ವಿಕಲಚೇತನ ಪ್ರಯಾಣ ಭತ್ಯೆ ಪಡೆಯುತ್ತಿರುವ ಶಿಕ್ಷಕರಿಗೆ 2019-20ರಿಂದ 2021-22ನೇ ಸಾಲಿನಲ್ಲಿ ಬೇಸಿಗೆ ಹಾಗೂ ಧೀರ್ಘಾವಧಿ ರಜಾ ಅವಧಿಯಲ್ಲಿ ವಿಕಲಚೇತನ ಪ್ರಯಾಣ ಭತ್ಯೆ ಪಾವತಿಸಲಾಗಿದೆ. ಆದರೆ, ಇಂತಹ ಪಾವತಿಗೆ ಅವಕಾಶ ಇರುವುದಿಲ್ಲ. ಹೀಗಾಗಿ, ಕಣ್ತಪ್ಪಿನಿಂದ ನೌಕರರಿಗೆ ಆರ್ಥಿಕ ಸೌಲಭ್ಯ ಮಂಜೂರು ಮಾಡಲಾಗಿದ್ದು, ಅದನ್ನು ಮರು ಪಾವತಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆರ್ಥಿಕ ಸಲಗೆಗಾರರು ಹಾಗೂ ಲೆಕ್ಕಪರಿಶೋಧಕರು ಬೆಂಗಳೂರು ಹಾಗೂ ಮೈಸೂರು ವಿಭಾಗದ ಬಿ.ಇ.ಓ ಗಳಿಗೆ ಪತ್ರ ಬರೆದಿದ್ದಾರೆ. ಅದರಂತೆ ರಜಾ ಅವಧಿಯಲ್ಲಿ ನೀಡಿರುವ ಭತ್ಯೆಯನ್ನು ಮರು ಪಾವತಿ ಮಾಡಬೇಕು ಎಂದು ವಿಕಲಚೇತನ ಶಿಕ್ಷಕರಿಗೆ ಜಾರಿ ಮಾಡಿರುವ ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಬೆಂಗಳೂರು ಮತ್ತು ಮೈಸೂರು ವಿಭಾಗಗಳಲ್ಲಿ ಈಗಾಗಲೇ ಶಿಕ್ಷಕರಿಗೆ ನೋಟಿಸ್ ಜಾರಿಗೊಳಿಸಿ, ಬಲವಂತದಿಂದ ಹಣ ಮರುಪಾವತಿ ಮಾಡಿಸಿಕೊಳ್ಳಲಾಗುತ್ತಿದೆ. ಚಿತ್ರದುರ್ಗ, ತುಮಕೂರು, ಕೆ.ಆರ್. ನಗರ, ಕೋಲಾರ, ಜಿಲ್ಲೆಗಳಲ್ಲಿ ಈಗಾಗಲೇ ಕೆಲವು ಶಿಕ್ಷಕರು ಹಣ ಮರು ಪಾವತಿ ಮಾಡಿದ್ದಾರೆ. ಶಿಕ್ಷಕರು ತಾವು ಪಡೆದಿರುವ ಭತ್ಯೆ ಆಧರಿಸಿ, 10 ಸಾವಿರದಿಂದ 25ಸಾವಿರದವರೆಗೆ ಹಣ ಮರುಪಾವತಿಸಬೇಕಾಗಿದೆ. ಒಂದೇ ಬಾರಿಗೆ ಎಲ್ಲಾ ಮೊತ್ತ ಪಾವತಿಸುವುದು ಶಿಕ್ಷಕರಿಗೆ ಕಷ್ಟಕರವಾಗಿದೆ. ಸರ್ಕಾರವೇ ಮುಂದಾಗಿ ನೀಡಿರುವ ಸೌಲಭ್ಯವನ್ನು ಪುನಃ ಪಡೆದುಕೊಳ್ಳುವುದು ಎಷ್ಟು ಸರಿ? ಸಮಸ್ಯೆ ಸೃಷ್ಟಿ ಮಾಡಿರುವ ಅಧಿಕಾರಿಗಳೇ ಪರಿಹಾರದ ಬಗ್ಗೆ ಯೋಚಿಸಬೇಕು? ಎಂದು ವಿಕಲಚೇತನ ಶಿಕ್ಷಕರೊಬ್ಬರು ಆಗ್ರಹಿಸಿದ್ದಾರೆ.


ಪ್ರಕರಣವೇನಿದು?
ವಿಶೇಷ ಶಾಸನ ಬದ್ದವಾದ ವಿಕಲಚೇತನ ನೌಕರರು ಸಾಮಾನ್ಯ ನಾಗರಿಕರಂತೆ ಸಂಚಾರ ಮಾಡಲು ಕಷ್ಟಸಾಧ್ಯವೆಂಬ ಹಿನ್ನಲೆಯಲ್ಲಿ ಸರಕಾರ ಅವರಿಗೆ ವೇತನದಲ್ಲಿ ಶೇ 6% ರಷ್ಟು ಮೂಲವೇತನಕ್ಕೆ ಪ್ರಯಾಣ ಭತ್ಯೆ ಸರಕಾರ ಮಂಜೂರು ಮಾಡಿದೆ. ಆದರೆ ಇಲಾಖೆ ನೀಡಿರುವ ನೋಟಿಸ್ ನಲ್ಲಿ ಉಲ್ಲೇಖಿಸಿದ ಸರಕಾರದ ಆದೇಶ ಪರಿಶೀಲನೆ ಮಾಡಿದರೆ ಎಲ್ಲಿಯೂ ರಜಾ ಅವಧಿಯಲ್ಲಿ ಪ್ರಯಾಣ ಭತ್ಯೆ ಮಂಜೂರು ಮಾಡಬಾರದೆಂದು ಉಲ್ಲೇಖಿಸಿಲ್ಲ, ಇಲಾಖೆಯ ಲೆಕ್ಕಪರಿಶೋಧನೆ ವಿಭಾಗದ ತಪಾಸಣಾಕಾರರು ಸರಕಾರದ ಆದೇಶದ ಪ್ರಕಾರ ರಜಾ ಅವಧಿಯಲ್ಲಿ ಪ್ರಯಾಣ ಭತ್ಯೆ ಪಡೆಯಲು ಅವಕಾಶವಿಲ್ಲವೆಂದು ವರದಿ ಇಲಾಖೆಯ ಆಯುಕ್ತರಿಗೆ ನೀಡಿದ್ದಾರೆ. ಅದರಂತೆ ಇಲಾಖೆಯ ಬಿ.ಇ.ಓ ಗಳು ವಿಕಲಚೇತನ ಶಿಕ್ಷಕರಿಗೆ ನೋಟಿಸ್ ಜಾರಿ ಮಾಡಿ ಪಾವತಿಸಿದ ಮೊತ್ತದ ಚಲನ್ ಪ್ರತಿಯೊಂದಿಗೆ ಕಚೇರಿಗೆ ತುರ್ತು ನೀಡಬೇಕು ಎಂದು ತಿಳಿಸಿರುತ್ತಾರೆ.


ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ 2016 ಸೆಕ್ಷನ್ 20 ಮತ್ತು 21 ರ ಪ್ರಕಾರ ಅಂಗವಿಕಲ ನೌಕರರನ್ನು ಭೇದಭಾವವಿಲ್ಲದೇ, ಸಮಾನ ಅವಕಾಶಗಳನ್ನು ಕಲ್ಪಿಸಲಾಗುತ್ತದೆ. ನಿವೃತ್ತಿ ಅಂಚಿನಲ್ಲಿರುವ ಅಥವಾ ನಿವೃತ್ತಿಯಾಗಿರುವ ನೌಕರರಿಗೆ ದೀರ್ಘಕಾಲಾವಧಿ ನಂತರ ಕೊಟ್ಟಿರುವ ಭತ್ಯೆ ವಾಪಸ್ ಪಡೆಯುವುದು ಅಪರಾಧ ಎಂದು ಸುಪ್ರೀಂ ಕೋರ್ಟ್, ಶಿಕ್ಷಣ ಇಲಾಖೆ, ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ. ವಿಕಲಚೇತನರಿಗೂ, ನಿವೃತ್ತ ನಂತರ ಹಾಗೂ ನಿವೃತಿ ಅಂಚಿನಲ್ಲಿರುವ ನೌಕರರಿಗೆ ಹೆಚ್ಚುವರಿ, ಇತರೆ ಭತ್ಯೆಗಳು ಸರಕಾರವೇ ಮನ್ನಾ ಮಾಡಿರುತ್ತದೆ. ಅದೇ ರೀತಿ ಸಮಾನ ಅವಕಾಶ ಕೊಡಬೇಕು ಎಂದು ಅಂಗವಿಕಲರ ಹಕ್ಕುಗಳ ಅಧಿನಿಯಮದ ಕಾನೂನು ಹೇಳುತ್ತದೆ. ಹೀಗಾಗಿ, ರಜಾ ಅವಧಿಯಲ್ಲಿ ನೀಡಿರುವ ಭತ್ಯೆಯನ್ನು ಮರು ಪಾವತಿ ಮಾಡಿಸಿಕೊಳ್ಳುವ ಬದಲಾಗಿ, ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಪೂರ್ಣ ಪ್ರಮಾಣ ಮನ್ನಾ ಮಾಡಬೇಕು. ಇದರಿಂದ ರಾಜ್ಯದಾದ್ಯಂತ ಇರುವ ವಿಕಲಚೇತನ ಶಿಕ್ಷಕರಿಗೆ ಅನುಕೂಲವಾಗುತ್ತದೆ ಎಂದು ಪುತ್ತೂರಿನ ವಿಕಲಚೇತನ ಶಿಕ್ಷಕ ಶಿವಪ್ಪ ರಾಥೋಡ್ ಸರಕಾರಕ್ಕೆ ಮನವಿ ಮಾಡಿದ್ದಾರೆ.


ಇಲಾಖೆಯ ಮಾನವ ಸಂಪನ್ಮೂಲ ನಿರ್ವಹಣೆ ಘಟಕದ ಅಧಿಕಾರಿಗಳು ರಜಾ ಅವಧಿಯಲ್ಲಿ ವಿಕಲಚೇತನ ಶಿಕ್ಷಕರಿಗೆ ಪ್ರಯಾಣ ಭತ್ಯೆ ಮಂಜೂರು ಮಾಡಬಾರದು ಎಂಬ ಅಂಶವು ಎಚ್‌ಆರ್‌ಎಮ್‌ಎಸ್ ನಲ್ಲಿ ಸೂಚನೆ ಸಂಬಂಧಪಟ್ಟ ವೇತನ ಬಟವಾಡೆ ಅಧಿಕಾರಿಗಳಿಗೆ ನೀಡಬೇಕಿತ್ತು. ಆದರೆ ಅಧಿಕಾರಿಗಳ ತಪ್ಪಿನಿಂದ ವಿಕಲಚೇತನ ಶಿಕ್ಷಕರು ಸಮಸ್ಯೆ ಎದುರಿಸಬೇಕಾಗದ ಪ್ರಸಂಗ ಒದಗಿ ಬಂದಿದೆ. ಹೀಗಾಗಿ ಕಾನೂನಾತ್ಮಕವಾದ ಹೋರಾಟ ಅನಿರ್ವಾಯವಾಗಿದೆ.
ಶಿವಪ್ಪ ರಾಥೋಡ್, ವಿಕಲಚೇತನ ಶಿಕ್ಷಕರು ಕುಂಬ್ರ

LEAVE A REPLY

Please enter your comment!
Please enter your name here