ಪುತ್ತೂರು: ಹೈದರಾಬಾದ್‌ನ ಅಕ್ಕಿನೆನಿ ಫಿಲ್ಮ್ & ಮೀಡಿಯಾ ಎಜ್ಯುಕೇಶನ್ ಸೊಸೈಟಿಯ ಕಾರ್ಯನಿರ್ವಾಹಕ ಸಂಯೋಜಕರಾಗಿ ಪುತ್ತೂರಿನ ಸಾಲ್ಮರ ಶ್ರೀರಾಮ ನಗರದ ಪ್ರವೀಣ್ ಕೇಶವ್ ಕಾರ್ಯನಿರ್ವಹಿಸುತ್ತಿದ್ದಾರೆ.
ಸಾಲ್ಮರ ಶ್ರೀರಾಮ ನಗರ ದಿ. ಕೆ ಕೇಶವ ನಾಯ್ಕ ಮತ್ತು ಶಾರದಾ ಕೇಶವ ದಂಪತಿ ಪುತ್ರನಾಗಿರುವ ಪ್ರವೀಣ್ ಕೇಶವ ಸುಮಾರು ಒಂಬತ್ತು ವರ್ಷಗಳ ತನಕ ನಮ್ಮ ಟಿವಿ ಚಾನೆಲ್‌ನಲ್ಲಿ ಪ್ರೊಡಕ್ಷನ್ ಮ್ಯಾನೇಜರ್, ಸ್ಟುಡಿಯೋ ಮುಖ್ಯಸ್ಥರಾಗಿ, ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು. ಈ ಸಂದರ್ಭದಲ್ಲಿ ಪಿಲಿ ನಲಿಕೆ ಸೀಸನ್ 1 ರಿಂದ 5, ಬಲೇ ತೆಲಿಪಾಲೆ ಸೀಸನ್ 1 ರಿಂದ 6 ಹಾಗೂ ಡ್ಯಾನ್ಸ್ ಮಮ್ಮಿ ಡ್ಯಾನ್ಸ್ ಸೀಸನ್ 1 ರಿಂದ 3 ರ ಪ್ರೊಡಕ್ಷನ್ ಮ್ಯಾನೇಜರ್, ಡ್ಯಾನ್ಸ್ ವಾರಿಯರ್ಸ್ ಸೀಸನ್ 1 ಮತ್ತು ಡ್ಯಾನ್ಸ್ 2 ಡ್ಯಾನ್ಸ್‌ನ ಕಾರ್ಯಕ್ರಮದ ಉಸ್ತುವಾರಿಯಾಗಿದ್ದರು. ಈವೆಂಟ್ ಉಸ್ತುವಾರಿಯಾಗಿದ್ದ ಪ್ರವೀಣ್ ಮಂಗಳೂರಿನಲ್ಲಿ 3 ವರ್ಷಗಳ ಕಾಲ ಹೊಸ ವರ್ಷದ ಕಾರ್ಯಕ್ರಮ, 3 ವರ್ಷ ಕೆಮ್ಮಿಂಜೆ ಕಾಮಿಡಿ ನೈಟ್ಸ್ , ಪಡೀಲ್ ಪುತ್ತೂರಿನಲ್ಲಿ ಪುತ್ತೂರ್ದ ಪರ್ಬ ಹಾಗೂ ಪುತ್ತೂರಿನ ದರ್ಬೆಯಲ್ಲಿ ಪುತ್ತೂರ ಕಲೋತ್ಸವದ ಈವೆಂಟ್‌ಗಳನ್ನು ಯಶಸ್ವಿಯಾಗಿ ನಡೆಸಿರುತ್ತಾರೆ.
ಅಕ್ಕಿನೇನಿ ನಾಗಾರ್ಜುನ ಮತ್ತು ಅಮಲಾ ಅಕ್ಕಿನೇನಿಯವರ ನೇತೃತ್ವದಲ್ಲಿರುವ ‘ಅಕ್ಕಿನೇನಿ ಫಿಲ್ಮ್ ಅಂಡ್ ಮೀಡಿಯಾ ಎಜುಕೇಶನ್ ಸೊಸೈಟಿ’ಯ ಅಧೀನದಲ್ಲಿರುವ ಅನ್ನಪೂರ್ಣ ಕಾಲೇಜ್ ಆಫ್ ಫಿಲ್ಮ್ ಅಂಡ್ ಮೀಡಿಯಾದಲ್ಲಿ ಕಾರ್ಯನಿರ್ವಾಹಕ ಸಂಯೋಕರಾಗಿ ಕಳೆದ 4.5 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಹೈದರಾಬಾದ್‌ನ ಅಕ್ಕಿನೇನಿ ಫಿಲ್ಮ್ ಅಂಡ್ ಮೀಡಿಯಾ ಎಜುಕೇಶನ್ ಸೊಸೈಟಿಯಲ್ಲಿ ಕಾರ್ಯಕಾರಿ ನಾಯಕತ್ವ ತಂಡದ ಸದಸ್ಯನಾಗಿ, ಮಾಧ್ಯಮ ಮತ್ತು ಉತ್ಪಾದನಾ ಇಲಾಖೆಯಲ್ಲಿ ಹಿರಿಯ ವ್ಯವಸ್ಥಾಪಕ, ವಿದ್ಯಾರ್ಥಿ ಸೇವೆಗಳ ಉಸ್ತುವಾರಿ, ಸಾಮಾಜಿಕ ಮಾಧ್ಯಮ ವಿಷಯ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ನೆಹರುನಗರದ ಸುದಾನ ಶಾಲೆ, ವಿವೇಕಾನಂದ ಪದವಿ ಪೂರ್ವ ಕಾಲೇಜು ಹಾಗೂ ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದಾರೆ.