ಪುತ್ತೂರು: ಪುತ್ತೂರಿನ ಬಪ್ಪಳಿಗೆ ಸಿಟಿ ಫ್ರೆಂಡ್ಸ್ ಆರ್ಟ್ಸ್ ಆಂಡ್ ಸ್ಪೋಟ್ಸ್ ಕ್ಲಬ್ ಆಶ್ರಯದಲ್ಲಿ ಸೌದಿ ಅರೇಬಿಯಾ ಮತ್ತು ದುಬೈ ಘಟಕಗಳ ಸಹಯೋಗದೊಂದಿಗೆ 14ನೇ ವರ್ಷದ ‘ಅಮರ್ ಅಕ್ಚರ್ ಆಂತೋನಿ’ ಸೌಹಾರ್ದ ರೋಲಿಂಗ್ ಟ್ರೋಫಿ ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಡಿ.24ರಿಂದ 29ರ ತನಕ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಬಪ್ಪಳಿಗೆ ಸಿಟಿ ಫ್ರೆಂಡ್ಸ್ ಆಟ್ಸ್ ಆಂಡ್ ಸ್ಪೋಟ್ಸ್ ಕ್ಲಬ್ನ ಸಂಘಟಕ ಅಬ್ದುಲ್ ರಝಾಕ್ ಬಪ್ಪಳಿಗೆ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
14ನೇ ವರ್ಷದ ಅಮರ್ ಅಕ್ಬರ್ ಅಂತೋನಿ ರೋಲಿಂಗ್ ಟ್ರೋಫಿ ಕ್ರಿಕೆಟ್ ಪಂದ್ಯಾಟಕ್ಕೆ ಈಗಾಗಲೇ 130 ತಂಡಗಳು ಹೆಸರು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 80 ತಂಡಗಳನ್ನು ಆಯ್ಕೆ ಮಾಡಿ ಅವಕಾಶ ನೀಡಲಾಗುವುದು. ಇದರ ಜತೆಗೆ ವಿವಿಧ ಇಲಾಖೆ ಮತ್ತು ಸಂಘ ಸಂಸ್ಥೆಗಳ 12 ತಂಡಗಳಿಗೆ ಪ್ರತ್ಯೇಕವಾಗಿ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಅಮರ್ ಅಕ್ಬರ್ ಅಂತೋನಿ ರೋಲಿಂಗ್ ಟ್ರೋಫಿ ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತವಾದ ತಂಡಗಳಿಗೆ ಪ್ರಥಮ ರೂ.33,333, ದ್ವಿತೀಯ ರೂ.22,222, ತೃತೀಯ ರೂ.20,222, ಚತುರ್ಥ ರೂ.10,222, 5ನೇ ಬಹುಮಾನ ರೂ.10,001, 6ನೇ ಬಹುಮಾನ ರೂ.5001 ನೀಡಲಾಗುವುದು. ಪ್ರಥಮ ಸ್ಥಾನ ಪಡೆದ ತಂಡಕ್ಕೆ ರೋಲಿಂಗ್ ಟ್ರೋಫಿ ನೀಡಲಾಗುವುದು ಎಂದರು. ಡಿ.24ರಂದು ಬೆಳಿಗ್ಗೆ 9 ಗಂಟೆಗೆ ಪಂದ್ಯಾಟ ಆರಂಭಗೊಂಡು ನಿರಂತರವಾಗಿ ಡಿ.29ರ ತನಕ ಹಗಲು ಮತ್ತು ರಾತ್ರಿ ವೇಳೆ ನಡೆಯುವುದು. ಮಧ್ಯಾಹ್ನ 1 ಗಂಟೆಗೆ ಪಂದ್ಯಾಟದ ಉದ್ಘಾಟನಾ ಸಮಾರಂಭ ನಡೆಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಅವರು ಪಂದ್ಯಾಟದ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಿ.29ರಂದು ಸಂಜೆ ಸಮಾರೋಪ-ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ 26 ಮಂದಿ ಸಾಮಾಜಿಕ ಕಾರ್ಯಕರ್ತರಿಗೆ ಸೇವಾರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ರಾತ್ರಿ ರೋಟರಿ ಕ್ಲಬ್ ವತಿಯಿಂದ ವಿಶೇಷ ಚೇತನರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಪ್ಪಳಿಗೆ ಸಿಟಿ ಫ್ರೆಂಡ್ಸ್ ಆರ್ಟ್ಸ್ ಆಂಡ್ ಸ್ಪೋಟ್ಸ್ ಕ್ಲಬ್ನ ಪ್ರಧಾನ ಕಾರ್ಯದರ್ಶಿ ಅರುಣ್ ಬಪ್ಪಳಿಗೆ, ಸಹ ಸಂಘಟಕರಾದ ಮೋನು ಬಪ್ಪಳಿಗೆ, ಶಾಫಿ ಮೊಹಾದ್ ಬಪ್ಪಳಿಗೆ, ಅಮರ್ ಅಕ್ಬರ್ ಆಂತೋನಿ ಬೆಂಗಳೂರು ಘಟಕದ ಸಾಹಿದ್ ಬರೆಪ್ಪಾಡಿ ಉಪಸ್ಥಿತರಿದ್ದರು.