ಸುದಾನ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ

0

ವಿದ್ಯಾರ್ಥಿಗಳು ಉಜ್ವಲ ಭವಿಷ್ಯದ ಕನಸನ್ನು ಕಾಣಿರಿ-ಡಾ.ವಾಸ್ತವಿ ಶೆಟ್ಟಿ
ಕಷ್ಟಪಟ್ಟು ಓದಬೇಡಿ, ಇಷ್ಟಪಟ್ಟು ಓದಿದಾಗ ಯಶಸ್ಸು ಸಾಧ್ಯ-ಮಾ|ಆರ್ಮಾನ್

ಪುತ್ತೂರು: ಪಯಣ ಎಂಬುದು ಅಂತ್ಯವಿಲ್ಲದ ಸಾಧ್ಯತೆಗಳಿದ್ದಾಗೆ. ನಮ್ಮ ಜೀವನದಲ್ಲಿ ನಿಸ್ವಾರ್ಥ ಪ್ರಯತ್ನ, ಬದ್ಧತೆ, ಗುರಿ ಮುಟ್ಟುವ ಎದೆಗಾರಿಕೆಯಿದ್ದಾಗ ನಾವು ಕಂಡ ಕನಸು ನನಸಾಗಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೋರ್ವ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉಜ್ವಲವಾಗಿಸುವತ್ತ ಕನಸನ್ನು ಕಾಣುವಂತಾಗಬೇಕು ಮತ್ತು ಕಂಡಂತಹ ಕನಸನ್ನು ನನಸು ಮಾಡುವ ತನಕ ವಿಶ್ರಮಿಸಬಾರದು ಎಂದು ಶಾಲೆಯ ಹಿರಿಯ ವಿದ್ಯಾರ್ಥಿನಿ ಡಾ.ವಾಸ್ತವಿ ಎಚ್.ಶೆಟ್ಟಿರವರು ಹೇಳಿದರು.


“ಭವ್ಯ ಭಾರತ ಅಂದು, ಇಂದು, ಮುಂದು” ಎಂಬ ಧ್ಯೇಯ ದೃಷ್ಟಿಯೊಂದಿಗೆ ನೆಹರುನಗರದ ಸುದಾನ ವಸತಿಯುತ ಶಾಲೆಯಲ್ಲಿ ಮೂರು ದಿನಗಳ ವಾರ್ಷಿಕೋತ್ಸವದ ಸಂಭ್ರಮ ನಡೆಯುತ್ತಿದ್ದು, ಡಿ.20 ರಂದು ಎರಡನೇ ದಿನ ನಡೆದ ಶಾಲೆಯ ಪ್ರಾಥಮಿಕ ವಿಭಾಗದ ವಾರ್ಷಿಕೋತ್ಸವದಲ್ಲಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರಿಸರ ಸ್ನೇಹಿ ಎನಿಸಿಕೊಂಡ ಸುದಾನ ಶಾಲೆಯು ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಸಮಾಜದ ಉತ್ತಮ ಸತ್ಪ್ರಜೆ ನಾಗರಿಕನನ್ನಾಗಿ ರೂಪಿಸುತ್ತಿದೆ. ಶಾಲೆಯು ದೂರದೃಷ್ಟಿತ್ವದ ಯೋಜನೆಯೊಂದಿಗೆ ಕಾರ್ಯಾಚರಿಸುತ್ತಿದ್ದು ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯತ್ತ ಬಹಳಷ್ಟು ಶ್ರಮಿಸುತ್ತಿದೆ ಎಂದರು.


ಕಷ್ಟಪಟ್ಟು ಓದಬೇಡಿ, ಇಷ್ಟಪಟ್ಟು ಓದಿದಾಗ ಯಶಸ್ಸು ಸಾಧ್ಯ-ಮಾ|ಆರ್ಮಾನ್:
ಮುಖ್ಯ ಅತಿಥಿ, ಗುರುವಾಯನಕೆರೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಮಾಸ್ಟರ್ ಅರ್ಮಾನ್ ರಿಯಾಜ್ ಮಾತನಾಡಿ, ಸಾಧನೆ ಮಾಡಲು ಯಾವುದೂ ಅಡ್ಡಿಯಾಗೋದಿಲ್ಲ. ಸಾಧನೆಗೆ ಮನಸ್ಸು ಮಾತ್ರ ಬೇಕಾಗಿದೆ. ವಿದ್ಯಾರ್ಥಿ ಜೀವನದಲ್ಲಿ ನಾವು ಕಟ್ಟಪಟ್ಟು ಓದುವುದನ್ನು ಬಿಟ್ಟು ಇಷ್ಟಪಟ್ಟು ಓದಿದಾಗ ಸಾಧನೆ ಮಾಡಲು ಸಾಧ್ಯವಾಗುವುದು. ನಮ್ಮಲ್ಲಿ ಗುರಿಯನ್ನು ಸಾಧಿಸುತ್ತೇನೆ ಎಂಬ ಹಂಬಲದೊಂದಿಗೆ ಛಲವನ್ನು ಮೈಗೂಡಿಸಿಕೊಳ್ಳಬೇಕು. ನನಗೆ ಸಂಗೀತ ಹಾಡುವುದು, ತಬಲ ನುಡಿಸುವುದು ಹೀಗೆ ಸಂಗೀತದ ವಿವಿಧ ಆಯಾಮಗಳಲ್ಲಿ ಕರಗತ ಮಾಡಿಕೊಳ್ಳಲು ತನ್ನ ಹೆತ್ತವರ ಪ್ರೋತ್ಸಾಹವನ್ನು ಖಂಡಿತಾ ಮರೆಯುವುದಿಲ್ಲ ಎಂದು ಹೇಳಿ ‘ಸಂದೇಶೆ ಆತೆ ಹೈಂ’ ಎಂಬ ದೇಶಭಕ್ತಿಯನ್ನು ಸುಶ್ರಾವ್ಯವಾಗಿ ಹಾಡಿ ನೆರೆದ ಸಭಿಕರನ್ನು ರಂಜಿಸಿದರು.


ಶಾಲಾ ನಾಯಕ ಅನಿಶ್ ರೈ ಸ್ವಾಗತಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರೆ|ವಿಜಯ ಹಾರ್ವಿನ್‌ರವರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ವಿದ್ಯಾರ್ಥಿಗಳಾದ ಧನ್ವಿಕಾ, ಜೆಸಿತ್, ಅಲ್ವಿನ್ ಶಾನ್ ಗೊನ್ಸಾಲ್ವಿಸ್, ಅನೀಷಾ ಜಿ., ರೀಮಾ ಮಾರ್ಟಿಸ್‌ರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಶಿಕ್ಷಕಿ ಪ್ರತಿಮಾ ಎನ್.ಜಿರವರು ಸಾಧಕರ ಹೆಸರನ್ನು ಓದಿದರು. ವಿರೋಧ ಪಕ್ಷದ ನಾಯಕಿ ಅವನಿ ರೈ ವಂದಿಸಿದರು. ಶಾಲಾ ಉಪನಾಯಕಿ ಖತಿಜತ್ ಶಮ್ನ, ವಿದ್ಯಾರ್ಥಿ ಕಾರ್ಯದರ್ಶಿ ಅದ್ವಿಜ್ ಸಜೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಕೋಶಾಧಿಕಾರಿ ಆಸ್ಕರ್ ಆನಂದ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮನೋಹರ್ ಕೆ, ಸುರಕ್ಷಾ ಸಮಿತಿ ಅಧ್ಯಕ್ಷ ಮಾಮಚ್ಚನ್ ಎಂ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ನಾಗಾರಾಜ್, ಸುದಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಪ್ರೀತ್ ಕೆ.ಸಿ, ಮುಖ್ಯ ಅತಿಥಿ ಡಾ.ವಾಸ್ತವಿ ಎಚ್.ಶೆಟ್ಟಿಯವರ ತಂದೆ ಪುತ್ತೂರು ಬಂಟರ ಸಂಘದ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಅನಿತಾ ಹೇಮನಾಥ ಶೆಟ್ಟಿ, ಸಹೋದರಿ ರಂಜಿತಾ ಎಚ್.ಶೆಟ್ಟಿ, ಮತ್ತೋರ್ವ ಅತಿಥಿ ಮಾ|ಅರ್ಮಾನ್‌ರವರ ತಂದೆ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹಮದ್ ರಿಯಾಝ್, ತಾಯಿ ವಗ್ಗ ಪ್ರೌಢಶಾಲೆಯ ಶಿಕ್ಷಕಿ ಲೈಲಾ ಫರ್ವಿನ್‌ರವರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಹಾಗೂ ವಿನಯಾ ರೈ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಸಾಧಕರಿಗೆ ಅಭಿನಂದನೆ..
ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಸಾಧನೆಗೈಯ್ದ ಸಾಧಕರಾದ 4ನೇ ತರಗತಿಯ ಬಿ.ಆರ್ ರಿಶನ್(ಅಬಾಕಸ್), 5ನೇ ತರಗತಿಯ ದಿಯಾ ಎಚ್.ಸಿ(ಕರಾಟೆ), ಸಮ್ಸೃತಾ ಡಿ.ಜಿ(ಚೆಸ್), ನೀಲ್ ಎಸ್.ಕೆ(ಕರಾಟೆ), 6ನೇ ತರಗತಿಯ ಫಾತಿಮ ಎಝಾ ಝುಬೈದಾ, ಧನ್ವಿತ್ ಬಿ(ಕರಾಟೆ), ರಾಷ್ಟ್ರಮಟ್ಟದ ಸಾಧಕರಾದ 2ನೇ ತರಗತಿಯ ಅಮೋಘ್ ಕೆ, 3ನೇ ತರಗತಿಯ ಅಧಿಶ್ ಎಂ.ಎಚ್(ಕರಾಟೆ), 4ನೇ ತರಗತಿಯ ಅದ್ವಿಕಾ ಶೆಟ್ಟಿ(ಅಬಾಕಸ್), 5ನೇ ತರಗತಿಯ ಮುಹಮದ್ ಮೈಜ್ ಎಂ.ಜಿ(ಸ್ಪೆಲ್ ಬಿ), ಮೊಹಮದ್ ರಾಯಿಫ್ ಖಾನ್(ಕರಾಟೆ), ಸಾನ್ವಿ ಪಿ.ಕೆ(ಯೋಗಾಸನ), ನೇಹ ಅಶ್ರಫ್, ಪ್ರಣಿತ್(ಕರಾಟೆ), 6ನೇ ತರಗತಿಯ ಅನಿಶ್ ಎಂ.ಎಚ್, ಪ್ರಧಾನ್ ಪಿ, ಮಾನ್ಸಿ ಅಧಿಕ್ರವೊ ಕದಮ್(ಕರಾಟೆ)ರವರುಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಅಂಚೆ ಸಂಚಾರ ರವಾನೆ ರೂಪಕ..
ಹಿಂದಿನ ಕೂಡು ಕುಟುಂಬದ ಪದ್ಧತಿ ಇದ್ದಂತಹ ಸಂದರ್ಭದಲ್ಲಿ ಮನೆಯ ಓರ್ವ ಸದಸ್ಯ ಹೊರ ದೇಶದಲ್ಲಿ ಅಥವಾ ಹೊರ ರಾಜ್ಯದಲ್ಲಿ ಇದ್ದಾಗ ಆತ ಕಳುಹಿಸುವ ಸಂದೇಶವನ್ನು ಪೋಸ್ಟ್‌ಮ್ಯಾನ್ ತನ್ನ ಸೈಕಲಿನಲ್ಲಿ ಮನೆಗೆ ತಲುಪಿಸುತ್ತಿದ್ದನು. ಪೋಸ್ಟ್ ಮ್ಯಾನ್ ತಲುಪಿಸಿದ ಆ ಸಂದೇಶದ ಪತ್ರವನ್ನು ಮನೆಯಲ್ಲಿದ್ದ ಎಲ್ಲರೂ ಒಗ್ಗೂಡಿ ಅದನ್ನು ಓದುತ್ತಿದ್ದರು. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ಎಲ್ಲವೂ ಬದಲಾಗಿದ್ದು ಕೂಡು ಕುಟುಂಬವು ಸಣ್ಣ ಕುಟುಂಬವಾಗಿ ಬದಲಾಗಿದೆ. ಕುಟುಂಬಲ್ಲಿನ ಹಿರಿಯರಿಂದ ಹಿಡಿದು ಕಿರಿಯ ಸದಸ್ಯರೂ ಮೊಬೈಲ್, ಕಂಪ್ಯೂಟರ್ ಎಂಬ ಪೆಡಂಭೂತವನ್ನು ಮೈಗಟ್ಟಿಸಿಕೊಂಡು ತನ್ನ ಕುಟುಂಬವನ್ನೇ ಮರೆತು ಬಿಟ್ಟಿದ್ದಾರೆ. ಅಂದು ಹಾಗೂ ಇಂದಿನ ಅಂಚೆ ಮತ್ತು ಸಂಚಾರ ರವಾನೆ ಕುರಿತಾದ ರೂಪಕವನ್ನು ಶಾಲಾ ವಿದ್ಯಾರ್ಥಿಗಳು ಶಿವಗಿರಿ ಕಲ್ಲಡ್ಕರವರ ನಿರ್ದೇಶನದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದರು.

ಇಂದು ಶಾಲೆಯಲ್ಲಿ..
ಡಿ.21 ರಂದು ಮೂರನೇ ದಿನ ಪ್ರೌಢಶಾಲಾ ವಿದ್ಯಾರ್ಥಿಗಳ ವಾರ್ಷಿಕೋತ್ಸವ ಮತ್ತು ಹಿರಿಯ ವಿದ್ಯಾರ್ಥಿಗಳ ಸಮ್ಮಿಲನವು ನಡೆಯಲಿದ್ದು, ಸುದಾನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುಪ್ರೀತ್ ಕೆ.ಸಿ ಮುಖ್ಯ ಅಭ್ಯಾಗತರಾಗಿ ಹಾಲ್ಗೊಳ್ಳಲಿದ್ದಾರೆ. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುಶಾಂತ್ ಹಾರ್ವಿನ್, ಉಪಾಧ್ಯಕ್ಷರಾದ ಡಾ|ವಿಖ್ಯಾತ್ ನಾರಾಯಣ, ಕಾರ್ಯದರ್ಶಿ ಸತ್ಯಾತ್ಮ, ಕೋಶಾಧಿಕಾರಿ ಹರ್ಷಿತ್ ಎಂ.ಬಿ ಪಾಲ್ಗೊಳ್ಳಲಿದ್ದಾರೆ.

LEAVE A REPLY

Please enter your comment!
Please enter your name here