ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ವಿದ್ಯಾರ್ಥಿಗಳಿಂದ ನ್ಯಾಯಾಲಯ ಭೇಟಿ

0

ಜೀವನಾನುಭವ ಹಾಗೂ ಲೋಕಾನುಭವ ಗಳಿಸುವತ್ತ ಹೆಜ್ಜೆ ಇಟ್ಟ ವಿದ್ಯಾರ್ಥಿಗಳು

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಶುಕ್ರವಾರ ಪುತ್ತೂರಿನ ನ್ಯಾಯಾಲಯ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕೇವಲ ತರಗತಿಯೊಳಗಿನ ಪಠ್ಯ ಕ್ರಮಗಳಲ್ಲದೆ ಹೊರಜಗತ್ತಿನ ಆಗು ಹೋಗುಗಳ ಬಗೆಗೆ ಹಾಗೂ ಜೀವನಾನುಭವ ದೊರಕಿಸಿಕೊಡುವ ಹಿನ್ನೆಲೆಯಲ್ಲಿ ಈ ಭೇಟಿಯನ್ನು ಆಯೋಜಿಸಲಾಯಿತು.


ಒಟ್ಟು ಮೂವತ್ತು ಮಂದಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನ್ಯಾಯಾಲಯದ 5 ಅದಾಲತಿನಲ್ಲಿ ನಡೆಯುತ್ತಿದ್ದಂತಹ ವಿವಿಧ ಪ್ರಕರಣಗಳ ವಿಚಾರಣೆ ಕುರಿತಾದ ವಾದ ವಿವಾದವನ್ನು ಆಲಿಸಿದರು. ಪ್ರತಿಯೊಂದು ಪ್ರಕರಣದ ವಿಚಾರಣೆಯಲ್ಲಿಯೂ ವಾದಿ ಹಾಗೂ ಪ್ರತಿವಾದಿಗಳಿಬ್ಬರಿಗೂ ಯಾಕಾಗಿ ತಮ್ಮ ವಾದ ಮಂಡಿಸಲು ಅವಕಾಶ ಕೊಡಬೇಕು ಎನ್ನುವ ವಿಚಾರವನ್ನು ಪ್ರತ್ಯಕ್ಷವಾಗಿ ನೋಡಿ ವಿದ್ಯಾರ್ಥಿಗಳು ತಿಳಿದುಕೊಂಡರು.


ಆಪಾದಿತ ವ್ಯಕ್ತಿ ನೈಜ ತಪ್ಪಿತಸ್ಥ ಆಗಿರದೇ ಇರುವಂತಹ ಒಂದು ಘಟನೆಯನ್ನು ಸಾಕ್ಷಿ ಸಮೇತ ವಿದ್ಯಾರ್ಥಿಗಳು ಗಮನಿಸಿದರು ಮಾತ್ರವಲ್ಲದೆ ಮುಖ್ಯ ನ್ಯಾಯಾಧೀಶರು ಒಂದು ವಿಚಾರಣೆಯನ್ನು ಪೂರ್ತಿಗೊಳಿಸಿ ತೀರ್ಪನ್ನು ನೀಡುವುದನ್ನೂ ವಿದ್ಯಾರ್ಥಿಗಳು ನೋಡಿ ತಿಳಿದುಕೊಂಡರು.


ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯು ಪಠ್ಯದಷ್ಟೇ ಆದ್ಯತೆಯ ಮೇರೆಗೆ ಜೀವನ ಕೌಶಲ, ಕ್ರೀಡೆ, ಸಾಂಸ್ಕೃತಿಕ ವೈವಿಧ್ಯ, ಸಂಸ್ಕೃತಿ, ಸಂಸ್ಕಾರಗಳ ಕುರಿತಾಗಿಯೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುತ್ತಾ ಬರುತ್ತಿದೆ. ವಿದ್ಯಾರ್ಥಿಗಳಿಗೆ ಹೊರಜಗತ್ತಿನ ಅನುಭವ ದೊರಕದೆ ಕೇವಲ ಪಾಠ ಮಾಡುವುದರಿಂದ ವ್ಯಕ್ತಿತ್ವ ನಿರ್ಮಾಣವಾಗುವುದಿಲ್ಲ ಎಂಬ ಸ್ಪಷ್ಟ ಯೋಚನೆಯೊಂದಿಗೆ ಅನೇಕ ಕ್ಷೇತ್ರಭೇಟಿಗಳನ್ನೂ ಆಯೋಜನೆ ಮಾಡುತ್ತಿದೆ. ಇದರ ಭಾಗವಾಗಿ ನ್ಯಾಯಾಲಯ ಭೇಟಿ ಕಾರ್ಯಕ್ರಮವನ್ನು ಯೋಜನೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here