ಅಂಬೇಡ್ಕರ್ ಅವರನ್ನು ಅವಮಾನಿಸಿರುವ ಅಮಿತ್ ಶಾ ಕೂಡಲೇ ರಾಜೀನಾಮೆಗೆ ನೀಡಲಿ- ಕುಂಬ್ರದಲ್ಲಿ ನಡೆದ ಪ್ರತಿಭಟನೆಯಲ್ಲಿ ಎಸ್.ಡಿ.ಪಿ.ಐ ಆಗ್ರಹ

0

ಪುತ್ತೂರು: ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್‌ರನ್ನು ಅವಮಾನ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ‘ಅಮಿತ್ ಶಾ ಕ್ಷಮೆ ಕೇಳಲಿ, ಇಲ್ಲದಿದ್ದಲ್ಲಿ ತೊಳಗಲಿ” ಎಂಬ ಘೋಷವಾಕ್ಯದೊಂದಿಗೆ ಎಸ್‌ಡಿಪಿಐ ಕುಂಬ್ರ ಬ್ಲಾಕ್ ವತಿಯಿಂದ ಕುಂಬ್ರ ಜಂಕ್ಷನ್‌ನಲ್ಲಿ ಪ್ರತಿಭಟನಾ ಸಭೆ ಡಿ.21ರಂದು ರಾತ್ರಿ ನಡೆಯಿತು.


ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಸಮಿತಿ ಉಪಾಧ್ಯಕ್ಷ ಹಮೀದ್ ಸಾಲ್ಮರ ಮಾತನಾಡಿ ಅಂಬೇಡ್ಕರ್, ಜೈ ಭೀಮ್ ಎಂದು ಹೇಳುವುದು ನಮಗೆ ಫ್ಯಾಶನ್ ಅಲ್ಲ, ಅದು ಕ್ರಾಂತಿ ಕೂಡ ಆಗಿದೆ, ಅಂಬೇಡ್ಕರ್ ಅವರಿಗೆ ಮಾಡುವ ಅವಮಾನವನ್ನು ದೇಶದ ಸಂವಿಧಾನ ಪ್ರೇಮಿಗಳು ಯಾವತ್ತೂ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.


ದಲಿತ ಸಂಘರ್ಷ ಸಮಿತಿ (ಪ್ರೊ.ಕೃಷ್ಣಪ್ಪ ಸ್ಥಾಪಿತ) ಮುಖಂಡರಾದ ಉದಯ ಕುಮಾರ್ ಕೆಯ್ಯೂರು ಮಾತನಾಡಿ ದೇಶಕ್ಕೆ ಸಂವಿಧಾನವನ್ನು ನೀಡಿದ ಬಾಬಾ ಸಾಹೇಬ್ ಅಂಬೇಡ್ಕರ್‌ರವರನ್ನು ಅವಮಾನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾರವರ ನಡೆ ಖಂಡನೀಯ, ಅಂಬೇಡ್ಕರ್ ಬರೆದ ಸಂವಿಧಾನದಿಂದಾಗಿ ಇಂದು ಅಮಿತ್ ಶಾ ಗೃಹ ಸಚಿವ ಸ್ಥಾನದಲ್ಲಿರುವುದು ಎಂಬುದನ್ನು ಮರೆಯಬಾರದು, ಸಂವಿಧಾನವನ್ನು ಒಪ್ಪಿ ಈ ದೇಶದಲ್ಲಿ ಎಲ್ಲರಿಗೂ ಜೀವಿಸಬಹುದು, ಒಪ್ಪದವರು ಇಲ್ಲಿಂದ ತೊಳಗಲಿ ಎಂದು ಹೇಳಿದರು.


ಎಸ್‌ಡಿಪಿಐ ಕುಂಬ್ರ ಬ್ಲಾಕ್ ಅಧ್ಯಕ್ಷ ರಿಯಾಝ್ ಬಳಕ್ಕ ಮಾತನಾಡಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಅವಮಾನ ದೇಶದ ಸಂವಿಧಾನಕ್ಕೆ ಮಾಡಿದ ಅವಮಾನವಾಗಿದೆ, ಗೃಹ ಸಚಿವರು ಆರ್‌ಎಸ್‌ಎಸ್ ಕಲಿಸಿರುವುದನ್ನು, ಅಂತರಾಳದಲ್ಲಿರುವುದನ್ನು ಮನ ಬಿಚ್ಚಿ ಹೇಳಿದ್ದಾರೆ. ಗೃಹ ಸಚಿವ ಸ್ಥಾನಕ್ಕೆ ಇವರು ಕೂಡಲೇ ರಾಜೀನಾಮೆ ನೀಡಿ ದೇಶದ ಕ್ಷಮೆಯನ್ನು ಕೇಳಬೇಕು ಎಂದು ಹೇಳಿದರು.

ಒಳಮೊಗ್ರು ಗ್ರಾ.ಪಂ ಸದಸ್ಯ ಸಿರಾಜ್ ಪರ್ಪುಂಜ, ಕುಂಬ್ರ ಬ್ಲಾಕ್ ಉಪಾಧ್ಯಕ್ಷ ಅಶ್ರಫ್ ಸಂಟ್ಯಾರ್, ಮುಖಂಡರಾದ ಎಸ್.ಎಮ್ ಮಹಮ್ಮದ್ ಕುಂಞಿ, ರಿಯಾಝ್ ಜಾರತ್ತಾರು, ಅಶ್ರಫ್ ಪರ್ಪುಂಜ, ಅಶ್ರಫ್ ಕುರಿಯ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಕುಂಬ್ರ ಬ್ಲಾಕ್ ಕಾರ್ಯದರ್ಶಿ ಇರ್ಶಾದ್ ಜಾರತ್ತಾರು ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here