ಮಾ.1,2: ಪುತ್ತೂರು ‘ಕೋಟಿ ಚೆನ್ನಯ’ ಜೋಡು ಕರೆ ಕಂಬಳ

0

ಪುತ್ತೂರು: 32ನೇ ವರ್ಷದ ಪುತ್ತೂರು ಕೋಟಿ ಚೆನ್ನಯ ಜೋಡು ಕರೆ ಕಂಬಳ ಕೂಟ ಮಾ.1 ಮತ್ತು 2ರಂದು ನಡೆಸಲು ಡಿ.21ರಂದು ಪುತ್ತೂರು ಬೈಪಾಸ್ ರಸ್ತೆಯ ಉದಯಗಿರಿ ಸಭಾಂಗಣದಲ್ಲಿ ನಡೆದ ಕಂಬಳ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ನಿರ್ಣಯಿಸಲಾಗಿದೆ.


ದ.ಕ.ಜಿಲ್ಲೆಗೆ ಮಾದರಿ ಕಂಬಳವಾಗಿ ಮೂಡಿಬರಲಿ:
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ, ಪುತ್ತೂರಿನಲ್ಲಿ ನಡೆಯುವ ಕೋಟಿ ಚೆನ್ನಯ ಜೋಡುಕರೆ ಕಂಬಳವು ದ.ಕ.ಜಿಲ್ಲೆಗೆ ಮಾದರಿ ಕಂಬಳವಾಗಿ ಮೂಡಿಬರಲಿ. ಕಂಬಳದಿಂದ ನಮಗೆ ಹೆಸರು ಬಂದಿದೆ ವಿನಃ ನಮ್ಮಿಂದ ಕಂಬಳಕ್ಕೆ ಹೆಸರು ಬಂದದಲ್ಲ. ನಾವೇನಾದರೂ ಆಗಿದ್ದರೆ ಅದು ಕಂಬಳ ನಮಗೆ ನೀಡಿದ್ದಾಗಿದೆ. ಈಗ ನಮಗೆ ಏನಾದರೂ ಸ್ಥಾನ ಮಾನ ಸಿಕ್ಕಿದ್ದರೂ ಅದು ಕಂಬಳದಿಂದಲೇ ಆಗಿದೆ ಎಂದು ಹೇಳಿದರು. ವಿನಯ್ ಕುಮಾರ್ ಸೊರಕೆಯವರು ಪ್ರತಿನಿಧಿಸುತ್ತಿರುವ ಕಾಪು ಕ್ಷೇತ್ರದಲ್ಲೂ ಹೊಸದಾಗಿ ಕಂಬಳ ಆಯೋಜಿಸುವಂತೆ ವಿನಂತಿಸಿದ ಅಶೋಕ್ ರೈ ಅವರು, ಇದಕ್ಕಾಗಿ ಎಲ್ಲಾ ರೀತಿಯ ಸಹಾಯ, ಸಹಕಾರ ನೀಡುವುದಾಗಿ ಹೇಳಿದರು. ಪುತ್ತೂರಿನಲ್ಲಿ ಈ ಬಾರಿ ಕಂಬಳ ನಡೆಸಲು ಯಾವುದೇ ತೊಂದರೆಯಾಗದು. ಎಲ್ಲರೂ ಒಗ್ಗಟ್ಟಾಗಿ ಶಕ್ತಿ ಮೀರಿ ಕೆಲಸ ಮಾಡಿದರೆ ಕಂಬಳ ಯಶಸ್ವಿ ಆಗಬಹುದು. ಇದಕ್ಕೆ ಬೇಕಾದ ಸಹಕಾರ ಕೊಡಲು ನಾನು ಸಿದ್ಧ ಎಂದು ಅಶೋಕ್ ರೈಯವರು ಹೇಳಿದರು. ಬೆಂಗಳೂರು ಕಂಬಳದ ಬಗ್ಗೆ ಕೋರ್ಟಿನಲ್ಲಿ ನಲ್ಲಿರುವ ಕೇಸ್ ಮುಗಿದ ತಕ್ಷಣ ಕಂಬಳ ನಡೆಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದರು.


ಪ್ರತಿಷ್ಠಿತ ಕಂಬಳವಾಗಿ ಮೂಡಿಬರಲಿ:
ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವರೂ ಆದ ವಿನಯ ಕುಮಾರ್ ಸೊರಕೆ ಅವರು ಮಾತನಾಡಿ, ಇತಿಹಾಸ ಪ್ರಸಿದ್ಧ ಹಾಗೂ ತುಳುನಾಡಿನ ಜಾನಪದ ಕ್ರೀಡೆಯಾದ ಕೋಟಿ ಚೆನ್ನಯ ಜೋಡುಕರೆ ಕಂಬಳ ಪುತ್ತೂರಿನಲ್ಲಿ ಪ್ರತಿಷ್ಠಿತ ಕಂಬಳವಾಗಿ ಮೂಡಿಬಂದಿದೆ. ಶ್ರೀ ಮಹಾಲಿಂಗೇಶ್ವರ ದೇವರ ಅನುಗ್ರಹದಿಂದ ಇಲ್ಲಿನ ಕಂಬಳವು ವರ್ಷದಿಂದ ವರ್ಷಕ್ಕೆ ಜನಪ್ರಿಯಗೊಳ್ಳುತ್ತಿದೆ. ಈ ಹಿಂದೆ ಶಕುಂತಳಾ ಶೆಟ್ಟಿಯವರನ್ನು ಬಿಜೆಪಿ ಕೈ ಬಿಟ್ಟಾಗ ಕಾಂಗ್ರೆಸ್‌ನವರು ಅವರನ್ನು ಶಾಸಕರನ್ನಾಗಿ ಮಾಡಿದರು. ಬಿಜೆಪಿಯಲ್ಲಿದ್ದ ಅಶೋಕ್ ಕುಮಾರ್ ರೈ ಅವರು ಕೋಟಿಚೆನ್ನಯ ಜೋಡುಕರೆಗೆ ಕಂಬಳಕ್ಕೆ ಸಹಕರಿಸಿ, ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬಂದಾಗ ಕಾಂಗ್ರೆಸ್ ಪಕ್ಷ ಅವರನ್ನು ಶಾಸಕರನ್ನಾಗಿ ಮಾಡಿದೆ. ಇದು ಪುತ್ತೂರಿನ ಕಂಬಳದ ಶಕ್ತಿಯಾಗಿದೆ. ಕಂಬಳಕ್ಕೆ ಕೈಜೋಡಿಸಿದ ಹಲವಾರು ಮಂದಿಗೆ ಸ್ಥಾನಮಾನ ದೊರೆತಿದೆ ಎಂದರು. ಈ ಹಿಂದೆ ನಿಂತು ಹೋಗಿದ್ದ ಪುತ್ತೂರು ಕಂಬಳವನ್ನು ಜಯಂತ ರೈ ಅವರು ಪ್ರಾರಂಭಿಸಿದರು. ಒಂದ ಹಂತದಲ್ಲಿ ಇದು ನಿಲ್ಲುತ್ತದೆ ಎಂದಾಗ ಉದ್ಯಮಿ ಮುತ್ತಪ್ಪ ರೈ ಮುಂದುವರಿಸಿದರು. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರ ಸಹಕಾರದಿಂದ ಚಂದ್ರಹಾಸ ಶೆಟ್ಟಿಯವರು ಮುಂದುವರಿಸಿಕೊಂಡು ಬರುತ್ತಿದ್ದು ಇದೀಗ ಪುತ್ತೂರಿನ ಕಂಬಳ ಜಿಲ್ಲೆಯ ಪ್ರತಿಷ್ಠಿತ ಕಂಬಳವಾಗಿ ಮೂಡಿಬಂದಿದೆ ಎಂದು ಹೇಳಿದರು. ನಾನು ಪುತ್ತೂರು ಬಿಟ್ಟು 25 ವರ್ಷ ಕಳೆದರೂ ನನ್ನ ಮೇಲೆ ಪುತ್ತೂರಿನ ಜನ ಇಟ್ಟ ಪ್ರೀತಿ ವಿಶ್ವಾಸ ಇವತ್ತಿಗೂ ಕೂಡಾ ಅದೇ ರೀತಿ ಮುಂದುವರಿಯುತ್ತಾ ಬರುತ್ತಿದ್ದು, ಇದು ನಾನು ಸಂಪಾದಿಸಿದ ಆಸ್ತಿಯಾಗಿದೆ. ಪುತ್ತೂರಿನಲ್ಲಿ ನಡೆಯುವ ಕೋಟಿ ಚೆನ್ನಯ ಕಂಬಳ, ಸುಧಾಕರ್ ಶೆಟ್ಟಿ ಆರಂಭಿಸಿದ ಕಿಲ್ಲೆ ಮೈದಾನದ ಗಣೇಶೋತ್ಸವ, ರಂಜಾನ್ ತಿಂಗಳ ಉಪವಾಸ ಬಿಡಿಸುವ ಸೌಹಾರ್ದ ಕೂಟದಲ್ಲಿ ಪ್ರತಿ ವರ್ಷ ಭಾಗವಹಿಸುತ್ತಿದ್ದೇನೆ. ಇದು ನನಗೆ ಆನಂದವನ್ನು ಉಂಟು ಮಾಡಿದೆ ಎಂದರು.


ಅಶೋಕ್ ಕುಮಾರ್ ರೈ ಅವರು ಕೆಲವರಿಗೆ ಮಾತ್ರ ಸೀಮಿತ ಎಂಬ ಅಪಪ್ರಚಾರ ನಡೆಯುತ್ತಿದೆ. ಆದರೆ ಅಶೋಕ್ ಕುಮಾರ್ ರೈ ಅವರು ಎಲ್ಲರನ್ನೂ ಒಗ್ಗೂಡಿಸಿಕೊಂಡು ಒಟ್ಟಿಗೆ ಹೋಗುತ್ತಿದ್ದಾರೆ. ಕಂಬಳಕ್ಕೆ ಸರಕಾರ ಹಾಗೂ ಇನ್ನಿತರ ಕಡೆಯಿಂದ ಇಷ್ಟೊಂದು ಮಹತ್ವ ಸಿಕ್ಕಿದ್ದರೆ ಅದು ಶಾಸಕ ಅಶೋಕ್ ಕುಮಾರ್ ರೈ ಅವರಿಂದ ಸಾಧ್ಯವಾಗಿದೆ ಎಂದು ವಿನಯಕುಮಾರ್ ಸೊರಕೆ ಹೇಳಿದರು.


ಎಲ್ಲರ ಸಹಕಾರ ಅಗತ್ಯ:
ಸಭೆಯ ಅಧ್ಯಕ್ಷತೆ ವಹಿಸಿದ ಪುತ್ತೂರು ಕೋಟಿ ಚೆನ್ನಯ ಜೋಡು ಕರೆ ಕಂಬಳ ಸಮಿತಿಯ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪುತ್ತೂರಿನಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಮಾ.1 ಮತ್ತು 2ರಂದು ನಡೆಯುವ 32ನೇ ವರ್ಷದ ಕೋಟಿ ಚೆನ್ನಯ ಜೋಡು ಕರೆ ಕಂಬಳವು ಅತ್ಯಂತ ಯಶಸ್ವಿಯಾಗಿ ಮೂಡಿಬರಲು ಎಲ್ಲರ ಸಹಕಾರ ಅಗತ್ಯವಾಗಿದೆ. ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆಯುವ ಈ ಕಂಬಳವನ್ನು ದೇವರ ಸೇವೆಯಾಗಿ ಮಾಡುವ ಅವಕಾಶ ನಮಗೆ ಸಿಕ್ಕಿದೆ. ಸಮಿತಿಯ ಖಜಾಂಜಿಯಾದ ಈಶ್ವರ ಭಟ್ ಪಂಜಿಗುಡ್ಡೆಯವರು ಇದೀಗ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಹಾಗೂ ಪ್ರಧಾನ ಕಾರ್ಯದರ್ಶಿ ದಿನೇಶ ಪಿ.ವಿ.ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಕಂಬಳ ಸಮಿತಿ ಸದಸ್ಯರಾದ ಕೃಷ್ಣಪ್ರಸಾದ್ ಆಳ್ವ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಉಪಾಧ್ಯಕ್ಷ ರೋಶನ್ ರೈ ಬನ್ನೂರು ಅವರು ಪುತ್ತೂರು ನಗರಸಭೆ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ. ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ಸುಭಾಷ್ ರೈ ಬೆಳ್ಳಿಪ್ಪಾಡಿ ಅವರು ಕೂಡಾ ಮಹಾಲಿಂಗೇಶ್ವರ ದೇವಸ್ಥಾನದ ಸದಸ್ಯರಾಗಿದ್ದಾರೆ. ಹೀಗೆ ಕಂಬಳ ಸಮಿತಿಯಲ್ಲಿರುವ ಹಲವು ಮಂದಿ ವಿವಿಧ ಸ್ಥಾನಮಾನ ಪಡೆದುಕೊಂಡಿದ್ದಾರೆ. ಇದು ನಮ್ಮ ಸರಕಾರ, ಶಾಸಕ ಅಶೋಕ್ ಕುಮಾರ್ ರೈ ಹಾಗೂ ಮಹಾಲಿಂಗೇಶ್ವರ ದೇವರ ಆಶೀರ್ವಾದದಿಂದ ಆಗಿದೆ. ಸಂಪ್ರದಾಯದಂತೆ ಕಂಬಳದ ಕರೆ ಮುಹೂರ್ತವನ್ನು ದೇವಸ್ಥಾನದ ಆಡಳಿತ ಮೊಕ್ತೇಸರರು ನಡೆಸಬೇಕಾಗಿದ್ದು, ಸಂಘದ ಖಜಾಂಜಿಯಾಗಿರುವ ಪಂಜಿಗುಡ್ಡೆ ಈಶ್ವರ ಭಟ್ ಅವರಿಗೆ ಈ ಭಾಗ್ಯ ಒದಗಿ ಬಂದಿರುವುದು ಸಂತೋಷ ತಂದಿದೆ ಎಂದರು. ದಿ.ಜಯಂತ ಕುಮಾರ್ ರೈ ಅವರ ನೇತೃತ್ವದಲ್ಲಿ ಆಗಿನ ಶಾಸಕ ವಿನಯಕುಮಾರ್ ಸೊರಕೆ ಅವರ ಸಹಕಾರದಿಂದ ಪ್ರಾರಂಭಿಸಲಾದ ಕೋಟಿ ಚೆನ್ನಯ ಜೋಡುಕರೆ ಕಂಬಳವು 10 ವರ್ಷಗಳ ಕಾಲ ನಡೆದು ಮಗದೊಮ್ಮೆ ನಿಲ್ಲುತ್ತದೆ ಎಂದಾಗ ಉದ್ಯಮಿ ಮುತ್ತಪ್ಪ ರೈ ಅವರು ಮುನ್ನಡೆಸಿದರು. ಈಗ ನಾವು ಮತ್ತು ಶಾಸಕರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯುತ್ತಾ ಬರುತ್ತಿದೆ ಎಂದರು.


ಮಾಜಿ ಶಾಸಕಿ, ಕಂಬಳ ಸಮಿತಿ ಗೌರವ ಸಲಹೆಗಾರರಾದ ಶಕುಂತಳಾ ಶೆಟ್ಟಿಯವರು ಮಾತನಾಡಿ, ಪುತ್ತೂರು ಕಂಬಳ ಯಶಸ್ವಿಯಾಗಿ ನಡೆಯಬೇಕಾದರೆ ಎಲ್ಲರ ಸಹಕಾರ ಅಗತ್ಯವಿದೆ. ಪುತ್ತೂರಿನ ಕಂಬಳವು ರಾಜ್ಯಕ್ಕೆ ಮಾದರಿ ಕಂಬಳವಾಗಿ ಮೂಡಿ ಬರುತ್ತದೆ ಎಂದು ಹೇಳಿದರು.


ಕಂಬಳ ಸಮಿತಿ ಖಜಾಂಜಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರೂ ಆದ ಪಂಜಿಗುಡ್ಡೆ ಈಶ್ವರ ಭಟ್ ಅವರು ಮಾತನಾಡಿ, ನಾನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಕಂಬಳ ಸಮಿತಿಗೆ ಸಿಕ್ಕ ಜಯವಾಗಿದೆ. ಕೋಟಿ ಚೆನ್ನಯ ಜೋಡುಕರೆ ಕಂಬಳವು ಕಳೆದ ಬಾರಿಗಿಂತ ಈ ಬಾರಿ ಇನ್ನಷ್ಟು ಯಶಸ್ವಿಯಾಗಿ ನಡೆಯುವಂತಾಗಲಿ. ಇದಕ್ಕೆ ಬೇಕಾದ ಸಹಕಾರ ಪ್ರತಿಯೊಬ್ಬರು ನೀಡುವಂತಾಗಲಿ ಎಂದು ಅವರು ಹೇಳಿದರು.


ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಕ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಅವರು ಮಾತನಾಡಿ ಕಂಬಳದ ಯಶಸ್ವಿಗೆ ಎಲ್ಲರ ಸಹಕಾರ ಯಾಚಿಸಿದರು. ಕಂಬಳ ಸಮಿತಿ ಉಪಾಧ್ಯಕ್ಷ ನಿರಂಜನ ರೈ, ಸಂಚಾಲಕ ವಸಂತ ಕುಮಾರ್ ರೈ ಜೆ.ಕೆ ವಂದಿಸಿದರು.


ವೇದಿಕೆಯಲ್ಲಿ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಪಿ.ವಿ ಉಪಸ್ಥಿತರಿದ್ದರು. ಕಂಬಳ ಸಮಿತಿಯ ಪದಾಧಿಕಾರಿಗಳಾದ ಉದ್ಯಮಿ ಶಿವರಾಮ ಆಳ್ವ, ಜಿನ್ನಪ್ಪ ಪೂಜಾರಿ ಮುರ, ಮಂಜುನಾಥ ಗೌಡ ತೆಂಕಿಲ, ವಿಲ್ಪ್ರೆಡ್ ಫೆರ್ನಾಂಡಿಸ್, ಚಂದ್ರಶೇಖರ್ ರೈ, ಶರತ್ ಕೇಪುಳು, ಚಂದ್ರಹಾಸ ರೈ ಬನ್ನೂರು, ಶಿವಪ್ರಸಾದ್ ರೈ ಮಠಂತಬೆಟ್ಟು, ರಶೀದ್ ಮುರ, ಹಸೈನಾರ್ ಬನಾರಿ, ದೀಕ್ಷಿತ್, ಕಾರ್ತಿಕ್, ದಾಮೋದರ್ ಭಂಡಾರ್‌ಕರ್, ಪ್ರಶಾಂತ್ ಮುರ, ಭಾಗ್ಯೇಶ್ ರೈ, ಲೋಕೇಶ್ ಗೌಡ ಪಡ್ಡಾಯೂರು, ಉಮಾಶಂಕರ್ ನಾಯ್ಕ್, ಅಮಳರಾಮಚಂದ್ರ, ಕಿರಣ್ ಡಿಸೋಜ, ಶಶಿಕುಮಾರ್ ನೆಲ್ಲಿಕಟ್ಟೆ, ಜಗದೀಶ್ ಶೆಟ್ಟಿ ಜೀತ್, ಅಬ್ದುಲ್ ಖಾದರ್ ಪೋಳ್ಯ, ಪ್ರೇಮಾನಂದ ನಾಯ್ಕ್, ಯತೀಶ್ ಶೆಟ್ಟಿ ಕೋಡಿಂಬಾಡಿ, ಜೋಕಿಂ ಡಿಸೋಜ, ಶಿವಕುಮಾರ್, ಅಬ್ದುಲ್ ಖಾದರ್, ಹೆಚ್. ಮಹಮ್ಮದ್ ಆಲಿ, ರಂಜೀತ್ ಬಂಗೇರ, ಪ್ರವೀಣ್‌ಚಂದ್ರ ಆಳ್ವ, ದಾಮೋದರ ಮುರ, ವಿಶ್ವಜೀತ್ ಅಮ್ಮುಂಜ, ಕೆ.ಜನಾರ್ದನ, ಅಬೂಬಕ್ಕರ್ ಮುಲಾರ್, ನೌಶಾದ್ ಬೊಳುವಾರು, ಸನತ್ ರೈ ಒಳತ್ತಡ್ಕ, ವಿಕ್ರಂ ಶೆಟ್ಟಿ ಅಂತರ, ಹರ್ಷ ಶೆಟ್ಟಿ, ಕಿಶೋರ್ ಸರೋಳಿ, ಸುದರ್ಶನ್ ನಾಯ್ಕ್ ಕಂಪ, ಪ್ರಭಾಕರ್ ಸಾಮಂತ್, ಶರತ್ ಎಂ, ಪ್ರಸಾದ್ ಬಿ, ಜಯಂತ ಕಲ್ಲೇಗ, ಜಯ, ರೋಶನ್ ರೈ ಬನ್ನೂರು, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ ಕುಮಾರ್, ಸುಭಾಷ್ ರೈ ಬೆಳ್ಳಿಪ್ಪಾಡಿ, ನ್ಯಾಯವಾದಿ ಕೃಷ್ಣವೇಣಿ, ಮಹಾಬಲ ರೈ ವಳತ್ತಡ್ಕ, ಚಂದ್ರಶೇಖರ್ ನೆಹರುನಗರ, ರಾಜೇಶ್ ಶೆಟ್ಟಿ, ಯತೀಶ್ ಶೆಟ್ಟಿ ಕೊಡಿಂಬಾಡಿ, ಡೆನ್ನಿಸ್ ಮಸ್ಕರೇನ್ಹಸ್, ಮೌರೀಸ್ ಮಸ್ಕರೇನ್ಹಸ್, ಕೃಷ್ಣ ನಾಯ್ಕ, ಪೂರ್ಣೇಶ್ ಭಂಡಾರಿ, ಪ್ರವೀಣ್ ಶೆಟ್ಟಿ ಅಳಕೆಮಜಲು, ಯೋಗೀಶ ಸಾಮಾನಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಸನ್ಮಾನ:
ಪ್ರತಿ ಕಂಬಳಕ್ಕೆ ತಲಾ ರೂ.5 ಲಕ್ಷದಂತೆ ಸರಕಾರದ ವತಿಯಿಂದ ಒಟ್ಟು ರೂ. 1.20 ಕೋಟಿ ರೂ.ಅನುದಾನ ಬಿಡುಗಡೆ ಮಾಡಲು ಕಾರಣಕರ್ತರಾದ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ, ಕಂಬಳವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದ ಕಂಬಳ ಸಮಿತಿ ಗೌರವಾಧ್ಯಕ್ಷರಾಗಿರುವ ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರಿಗೆ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರಿಗೆ, ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಖಜಾಂಜಿಯಾಗಿದ್ದು ಇದೀಗ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಗೊಂಡ ಪಂಜಿಗುಡ್ಡೆ ಈಶ್ವರ ಭಟ್, ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಆಯ್ಕೆಗೊಂಡ ದಿನೇಶ್ ಕುಲಾಲ್ ಪಿ.ವಿ, ಕಂಬಳ ಸಮಿತಿಯ ಸದಸ್ಯರಾದ ವಿನಯಕುಮಾರ್ ಸವಣೂರು, ಮಹಾಬಲ ರೈ ವಳತ್ತಡ್ಕ, ಸುಭಾಷ್ ರೈ ಬೆಳ್ಳಿಪ್ಪಾಡಿ, ನ್ಯಾಯವಾದಿ ಕೃಷ್ಣವೇಣಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡ ಕೃಷ್ಣಪ್ರಸಾದ್ ಆಳ್ವ, ಪುತ್ತೂರು ನಗರಸಭಾ ನಾಮನಿರ್ದೇಶಿತ ಸದಸ್ಯರಾದ ರೋಶನ್ ರೈ ಬನ್ನೂರು, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಗೊಂಡ ರಾಧಾಕೃಷ್ಣ ನಾಕ್‌ರವರಿಗೆ ಇದೇ ಸಂದರ್ಭದಲ್ಲಿ ಪುಷ್ಪಗುಚ್ಚ ನೀಡಿ, ಶಾಲು ಹಾಕಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here