ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಸರ್ಟಿಫಿಕೇಷನ್ ಕಾರ್ಯಕ್ರಮ-ವಾಣಿಜ್ಯ ಸರ್ಟಿಫಿಕೇಟ್‌ ಕೋರ್ಸ್‌ ಗಳ ಪ್ರಮಾಣಪತ್ರ ಪ್ರದಾನ ಸಮಾರಂಭ

0

ಪ್ರಾಯೋಗಿಕ ಅನುಭವಗಳೊಂದಿಗೆ ಭವಿಷ್ಯವನ್ನು ರೂಪಿಸಿಕೊಳ್ಳಿ:  ವಾಮನ ಪೈ

ಪುತ್ತೂರು:  “ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅನೇಕಾನೇಕ ಉದ್ಯೋಗಾವಕಾಶಗಳಿವೆ.ಆದರೆ ಅಂತಹ ಉದ್ಯೋಗ ಸಾಧ್ಯತೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕೆಂದಾದರೆ ಕೇವಲ ವಿದ್ಯಾಸಂಸ್ಥೆಗಳಿಂದ ಸಿಗುವ ಜ್ಞಾನ ಸಾಲದು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಂಡಲ್ಲಿ, ಅದು ಅವರ ಮುಂದಿನ ವೃತ್ತಿ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀಳುವುದು. ಅದು ಅವರಿಗೆ ಅತ್ಯುತ್ತಮ ಉದ್ಯೋಗವನ್ನು ಅರಸಿಕೊಂಡು ಮುಂದುವರೆಯುವಲ್ಲಿ ಅತ್ಯಂತ ಸಹಕಾರಿ. ವಿವೇಕಾನಂದ ಪದವಿಪೂರ್ವ ಕಾಲೇಜು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಅಂತಹ ಸರ್ಟಿಫಿಕೇಟ್‌ ಕೋರ್ಸ್‌ ಗಳನ್ನು ಪರಿಚಯಿಸಿದ್ದು ಅದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಂಡಿರುತ್ತಾರೆ. ಅದರಿಂದ ಪಡೆದ ಜ್ಞಾನವನ್ನು ಪ್ರಾಯೋಗಿಕ ಅನುಭವವನ್ನಾಗಿ ಮಾರ್ಪಡಿಸಿದ್ದಲ್ಲಿ ಅದು ಜೀವನದ ಸಫಲತೆಗೆ ದಾರಿದೀಪವಾಗುತ್ತದೆ.” ಎಂದು ಪುತ್ತೂರು ಛೇಂಬರ್‌ ಆಫ್‌ ಕಾಮರ್ಸ್‌ ಮತ್ತು ಗಣೇಶ್ ಟ್ರೇಡರ್ಸ್ ನ ಮಾಲಕ ವಾಮನ ಪೈ ಅಭಿಪ್ರಾಯ ವ್ಯಕ್ತಪಡಿಸಿದರು.

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ 2024-25 ನೇ ಸಾಲಿನಲ್ಲಿ ವಿನೂತನವಾಗಿ ಪ್ರಪ್ರಥಮ ಬಾರಿಗೆ ಪರಿಚಯಿಸಲಾದ ಸರ್ಟಿಫಿಕೇಟ್‌ ಕೋರ್ಸ್‌ ಗಳ ಪ್ರಮಾಣಪತ್ರ ಪ್ರದಾನ ಸಮಾರಂಭವು ವೈದೇಹಿ ಸಭಾಂಗಣದಲ್ಲಿ, ವಾಣಿಜ್ಯ ಸಂಘದ ಆಶ್ರಯದಲ್ಲಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಇವರು ಪದವಿ ವಿದ್ಯಾಭ್ಯಾಸದ ಸಂದರ್ಭದಲ್ಲಿ ಪುಟ್ಟ-ಪುಟ್ಟ ಅರೆಕಾಲಿಕ ಉದ್ಯೋಗಗಳಿಗೆ ಸೇರಿ ಅಲ್ಲಿ ನಾವು ಕಲಿತ ವಿದ್ಯೆಯನ್ನು ಬಳಸಿ ವ್ಯವಹಾರಗಳನ್ನು ಮಾಡಿ ಇಂದು ಅತ್ಯುನ್ನತ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದುಕೊಂಡಿರುವ ವ್ಯಕ್ತಿಗಳ ಉದಾಹರಣೆಗಳನ್ನಿತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕರಾದ ಡಾ. ಕೃಷ್ಣ ಪ್ರಸನ್ನ ವಹಿಸಿಕೊಂಡು “ಭಾರತವು ಆರ್ಥಿಕವಾಗಿ ಮುಂದುವರಿದ ಹಾಗೂ ವಾಣಿಜ್ಯ ಕೇಂದ್ರೀಕೃತವಾದ ದೇಶವಾಗಿತ್ತು. ಹಲವು ದಶಕಗಳಿಂದ ಕೆಲವೊಂದು ದುಷ್ಟ ಶಕ್ತಿಗಳ ದಬ್ಬಾಳಿಕೆಯಿಂದ ಆರ್ಥಿಕವಾಗಿ ದೇಶ ಕುಂದಿದರೂ, ಇತ್ತೀಚೆಗೆ ಚೇತರಿಸುತ್ತಾ ಬಂದಿದೆ. ಸಮಾಜ ಮುಂದುವರಿಯಲು ಆರ್ಥಿಕತೆ ಸದೃಢವಾಗಬೇಕು. ಇತ್ತೀಚಿಗಿನ ದಿನಗಳಲ್ಲಿ ಎಲ್ಲಾ ರೀತಿಯ ಉದ್ಯೋಗಾವಕಾಶಗಳನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಂಡು ಸಮಾಜ ಮುಂದುವರೆಯುತ್ತಿದೆ. ವಿದ್ಯಾರ್ಥಿಯು ಕಾಣುವ ಕನಸುಗಳು ನನಸಾಗಬೇಕಾದರೆ ಜೀವನದಲ್ಲಿ ಸ್ಪಷ್ಟ ಗುರಿ ಇರಬೇಕು.ಇಂದಿನ ಕಾಲದಲ್ಲಿ ವಿದ್ಯಾರ್ಥಿಗಳು ಅವರ ಆಸಕ್ತಿಯನ್ನರಿತು ವಾಣಿಜ್ಯ ವಿಷಯಗಳ ವ್ಯಾಸಂಗ ಮಾಡಿ ಹಲವು ವ್ಯವಹಾರಗಳ ಕಡೆಗೆ ಗಮನಹರಿಸುತಿದ್ದಾರೆ.” ಎಂದರು.

       ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ  ಪ್ರಸಕ್ತ ಸಾಲಿನಲ್ಲಿ ಪರಿಚಯಿಸಲಾದ ವಾಣಿಜ್ಯ ಸರ್ಟಿಫಿಕೇಟ್ ಕೋರ್ಸ್ ಗಳ ಸರ್ಟಿಫಿಕೇಟ್ ವಿತರಣೆ ಹಾಗೂ ವಾಣಿಜ್ಯ ಸಂಘದ ಆಶ್ರಯದಲ್ಲಿ ನಡೆಸಲಾದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆಯನ್ನು ಹಮ್ಮಿಕೊಳ್ಳಲಾಯಿತು.

       ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಹೇಶ ನಿಟಿಲಾಪುರ, ಉಪಪ್ರಾಂಶುಪಾಲರಾದ ಎಂ. ದೇವಿಚರಣ್‌ ರೈ, ಶೈಕ್ಷಣಿಕ ಸಂಯೋಜಕರಾದ ಶ್ರೀವತ್ಸ, ವಾಣಿಜ್ಯ ಸಂಘದ ವಿದ್ಯಾರ್ಥಿ ಪದಾಧಿಕಾರಿಗಳು, ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದ ಉಪನ್ಯಾಸಕ ವೃಂದದವರು ಪಾಲ್ಗೊಂಡರು. ವಾಣಿಜ್ಯ ವಿಭಾಗ ಮುಖ್ಯಸ್ಥರಾದ ದೇವಿಪ್ರಸಾದ್‌ ಪ್ರಮಾಣಪತ್ರ ವಿತರಣೆಯನ್ನು ನೆರವೇರಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶ್ರೀಧರ ಶೆಟ್ಟಿಗಾರ್‌ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಸಂಖ್ಯಾಶಾಸ್ತ್ರ ವಿಭಾಗದ ಉಪನ್ಯಾಸಕಿ ಅರುಣಾ ವಂದಿಸಿದರು. ಪ್ರಥಮ ಪಿಯುಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ವಿದ್ಯಾರ್ಥಿನಿ ವೈಶಾಲಿ ವಿ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here