ಅಜ್ಜಿಕಲ್ಲು ಏಕತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

0

ಸರಕಾರಿ ಶಾಲೆಯಲ್ಲೂ ಅತ್ಯುತ್ತಮ ಶಿಕ್ಷಣ ಲಭಿಸುತ್ತಿದೆ: ತ್ರಿವೇಣಿ ಪಲ್ಲತ್ತಾರು


ಪುತ್ತೂರು: ಸರಕಾರಿ ಶಾಲೆಗಳಲ್ಲೂ ಅತ್ಯುತ್ತಮ ಶಿಕ್ಷಣ ದೊರೆಯುತ್ತಿದ್ದು, ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಬೇಕು ಆ ಮೂಲಕ ಸರಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ನಾವು ಪ್ರಯತ್ನ ಪಡಬೇಕು ಎಂದು ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಹೇಳಿದರು.


ಅವರು ದ.21 ರಂದು ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಏಕತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಸರಕಾರವು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ , ಉಚಿತ ಸಮವಸ್ತ್ರ ಎಲ್ಲವನ್ನು ಕೊಡುವ ಮೂಲಕ ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದೆಂದು ಯೋಚನೆಗಳನ್ನು ರೂಪಿಸುತ್ತಿದೆ ಎಂದ ಅವರು, ನಾವು ನಮ್ಮ ಭಾಗದಲ್ಲಿನ ಮಕ್ಕಳು ಕೂಡ ಯೋಜನೆಯ ಲಾಭವನ್ನು ಪಡೆದುಕೊಂಡು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಮಹತ್ತರ ಜವಬ್ದಾರಿ ನಮ್ಮ ಮೇಲಿದೆ ಎಂದು ತ್ರಿವೇಣಿ ಪಲ್ಲತ್ತಾರು ಹೇಳಿದರು.


ಅತಿಥಿಯಾಗಿ ಭಾಗವಹಿಸಿದ್ದ ಒಳಮೊಗ್ರು ಗ್ರಾಪಂ ಸದಸ್ಯ ಮಹೇಶ್ ರೈ ಕೇರಿ ಮಾತನಾಡಿ, ಶಾಲೆಯ ಪ್ರಾರಂಭದಿಂದ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸಿದ ಹಿರಿಯ ಚೇತನಗಳ ಕೊಡುಗೆಯನ್ನು ಸ್ಮರಿಸಿ ನಾವು ಕಿರಿಯರು ಶಾಲೆಯ ಅಭ್ಯುದಯಕ್ಕೆ ಅವರ ಮಾರ್ಗದಲ್ಲೇ ನಡಯಬೇಕು ಎಂದರು , ಇವತ್ತಿನ ಸ್ಪರ್ಧಾತ್ಮಕ ಬದುಕಿನಲ್ಲಿ ಇಂಗ್ಲಿಷ್ ಭಾಷೆ ಅಗತ್ಯ ಆದರೆ ಮನೆಯಲ್ಲಿ ನಮ್ಮ ಮಾತೃಭಾಷೆಯೆ ಇರಲಿ , ಸಂವಹನ ಭಾಷೆಯಾಗಿ ಮಾತ್ರ ಇಂಗ್ಲೀಷ್ ಇರಲಿ ಮನೆಯನ್ನೆ ಇಂಗ್ಲಿಷ್ ಮಾಡದಿರಿ ಎಂದು ಹೇಳಿ ಶುಭ ಹಾರೈಸಿದರು. ಹಿರಿಯ ವಿಧ್ಯಾರ್ಥಿ ಸಂಘದ ಅಧ್ಯಕ್ಷರಾದ ಮಂಜುನಾಥ ರೈ ಮೊಡಪ್ಪಾಡಿ ಮಾತನಾಡಿ ಶಾಲೆಯ ಪ್ರತಿಯೊಂದು ಹಾಗು ಹೋಗುಗಳಲ್ಲಿ ಹಿರಿಯ ವಿಧ್ಯಾರ್ಥಿಗಳ ಪಾತ್ರ ಮಹತ್ತರವಾಗಿದೆ. ಇಲ್ಲಿನ ಹಿರಿಯ ವಿಧ್ಯಾರ್ಥಿಗಳೆಲ್ಲರೂ ಶಾಲೆಯ ಅಭಿವೃದ್ಧಿಗೆ ಕಟಿಬದ್ಧರಾಗಬೇಕೆಂದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಧುಸೂದನ್‌ರವರು ಉದ್ಘಾಟಿಸಿ ಶುಭ ಹಾರೈಸಿದರು. ಕುಂಬ್ರ ಕ್ಲಸ್ಟರ್ ಸಿಆರ್ ಪಿ ಶಶಿಕಲಾರವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.


ವೇದಿಕೆಯಲ್ಲಿ ಒಳಮೊಗ್ರು ಗ್ರಾಮ ಪಂಚಾಯತ್ ಸದಸ್ಯರುಗಳಾದ ವನಿತಾ , ನಳಿನಾಕ್ಷಿ , ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ತಿಮ್ಮಪ್ಪ ನಾಯ್ಕ ಬೈರೋಡಿ , ವಿದ್ಯಾರ್ಥಿ ನಾಯಕ ಅನ್ವಿತ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ್ರಸಕ್ತ ಸಾಲಿನ ಶೈಕ್ಷಣಿಕ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ , ಶಾಶ್ವತ ದಾನಿಗಳಿಗೆ ಗೌರವಾರ್ಪಣೆ ಮಾಡಲಾಯಿತು. ಈ ಸಂಧರ್ಭದಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರನ್ನು ಗೌರವಿಸಲಾಯಿತು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಚಿತ್ರಾ ರೈ ಸ್ವಾಗತಿಸಿ , ಶಾಲಾ ವರದಿಯನ್ನು ವಾಚಿಸಿದರು. ಅತಿಥಿ ಶಿಕ್ಷಕಿ ಚಂದ್ರಕಲಾ ವಂದಿಸಿದರು. ಸಹಶಿಕ್ಷಕ ಪ್ರೀತಂ ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕಿ ಲಕ್ಷ್ಮಿ,ಗೌರವ ಶಿಕ್ಷಕಿ ಮುಪಿಧಾ ಸಹಕರಿಸಿದರು. ನಂತರ ಶಾಲಾ ವಿಧ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಿತು. ಅಭಿನಯ ಆರ್ಟ್ಸ್ ಪುತ್ತೂರು ಇವರ ಕಲಾಕಾಣಿಕೆ ಮಣ್ಣ್ ಕಾರ್ಣಿಕದ ತುಳು ನಿಗೂಢಮಯ ನಾಟಕ ಕಲಾಭಿಮಾನಿಗಳನ್ನು ರಂಜಿಸಿತು.ಬೆಳಗ್ಗೆ ತೆಗ್ಗು ಶಾಲಾ ಶಿಕ್ಷಕಿ ರಶ್ಮಿತಾ ರವೀಂದ್ರ ಧ್ವಜಾರೋಹಣ ನೆರವೇರಿಸಿದರು.

LEAVE A REPLY

Please enter your comment!
Please enter your name here