ಡಿ.29: ದಕ್ಷಿಣ ಕನ್ನಡ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘದ ಪದಗ್ರಹಣ

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಸುಳ್ಯ, ಪುತ್ತೂರು, ವಿಟ್ಲ. ಈಶ್ವರಮಂಗಲ ಮತ್ತು ಮಂಗಳೂರು ತಾಲೂಕುಗಳಲ್ಲಿ ವಾಸಿಸುತ್ತಿರುವ ವಾಣಿಯ ಗಾಣಿಗ ಸಮಾಜದ 5 ತಾಲೂಕು ಸಂಘಗಳ ಪ್ರಮುಖರನ್ನು ಸೇರಿಸಿ ದ.ಕ ಜಿಲ್ಲೆಯಲ್ಲಿ ಸಂಘಟನಾತ್ಮಕವಾಗಿ ರಚಿಸಲಾದ ಬಲಿಷ್ಟವಾದ ಸಂಘ “ದಕ್ಷಿಣ ಕನ್ನಡ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘ ಪದಗ್ರಹಣ ಸಮಾರಂಭವು ಡಿ.29ರಂದು ಮಂಗಳೂರಿನ ಕುದ್ಮಲ್ ರಂಗರಾವ್ (ಪುರಭವನ) ಸಭಾಭವನದಲ್ಲಿ ನಡೆಯಲಿದೆ.


ವೈವಿದ್ಯತ್ಯತೆಯಲ್ಲಿ ಏಕತೆಯನ್ನು ಸಾರುವ ನಮ್ಮ ಈ ದೇಶದ ಸಂಸ್ಕೃತಿಯಲ್ಲಿ ಹಲವಾರು ಜಾತಿ, ಧರ್ಮ, ಪಂಗಡಗಳಿವೆ. ತಮ್ಮ ತಮ್ಮ ಸಮುದಾಯದ ಶ್ರೇಯೀಭಿವೃದ್ಧಿಗಾಗಿ ತಮ್ಮದೇ ಸಮುದಾಯದ ಹೆಸರಿನ ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡು ಸಂಘಟಿತರಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಎಲ್ಲಾ ಕಡೆಯೂ ಕಾಣುತ್ತಿದ್ದೇವೆ. ಸಮುದಾಯದಲ್ಲಿರುವ ಕಡು ಬಡವರಿಗೆ ಸಹಾಯ ಮಾಡುವುದು, ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಲು ಸಹಕರಿಸುವುದು, ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು, ಸಮಾಜದಲ್ಲಿ ವಿಶೇಷ ಸಾಧನೆಗೈದ ಮಹನೀಯರನ್ನು ಗುರುತಿಸಿ ಗೌರವಿಸುವುದು, ವಿದ್ಯಾನಿಧಿ ಸ್ಥಾಪಿಸುವುದು, ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸುವುದು, ಸಹಕಾರಿ ಸಂಘಗಳನ್ನು ಸ್ಥಾಪಿಸಿ ಯುವ ಜನಾಂಗಕ್ಕೆ ಉದ್ಯೋಗ ಕಲ್ಪಿಸಲು ಪ್ರಯತ್ನಿಸುವುದು ಸೇರಿದಂತೆ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ನಿರ್ಧರಿಸಲಾಗಿದೆ.


ಕಾರ್ಯಕ್ರಮವನ್ನು ಸಂಸದ ಕ್ಯಾಪ್ಟನ್ ಬ್ರಿಜೇಷ್ ಚೌಟ ಉದ್ಘಾಟಿಸಲಿದ್ದಾರೆ. ಸಂಘದ ನಿಯೋಜಿತ ಅಧ್ಯಕ್ಷ ಕೆ.ರಾಮ ಮುಗೋಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರು ಮಹಾನಗರ ಪಾಲಿಗೆಯ ಮಹಾ ಪೌರರಾದ ಮನೋಜ್ ಕುಮಾರ್, ಮಂಗಳೂರು ದಕ್ಷಿಣದ ಶಾಸಕ.ಡಿ.ವೇದವ್ಯಾಸ ಕಾಮತ್, ಮಂಗಳೂರು ಉತ್ತರದ ಶಾಸಕ ಡಾ| ವೈ. ಭರತ್ ಶೆಟ್ಟಿ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಅಖಿಲ ಕರ್ನಾಟಕ ಗಾಣಿಗರ ಸಂಘ ಬೆಂಗಳೂರು ಇದರ ಅಧ್ಯಕ್ಷ ರಾಜಶೇಖರ್, ಖ್ಯಾತ ಉದ್ಯಮಿ, ಕಾಸರಗೋಡು ಕೃಷ್ಣ ಹಾರ್ಡ್‌ವೇರ್ ಮತ್ತು ಸಮೂಹ ಸಂಸ್ಥೆಗಳು ಮುಖ್ಯಸ್ಥ ಸುರೇಶ್ ಬಟ್ಟಂಪಾರೆ, ಬೆಂಗಳೂರಿನ ಪೋಲೀಸ್ ನಿರೀಕ್ಷಕ ಪ್ರಕಾಶ್ ಕೆ., ಸ್ವಿಗ್ಗಿ ಸಾಫ್ಟ್‌ವೇರ್ ನಿರ್ದೇಶಕ ಪ್ರೀತಂ ಕೆ. ಎಸ್., ನಿವೃತ್ತಿ ಮುಖ್ಯೋಪಾಧ್ಯಾಯಿನಿ ಶಂಕರಿ ಪಟ್ಟೆ, ನಿವೃತ್ತ ಉಪನ್ಯಾಸಕಿ ಸುಕನ್ಯ ದೇಲಂತಬೆಟು, ಗೌರವಾಧ್ಯಕ್ಷರು ದ.ಕ.ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಎಸ್.ಶಂಕರ ಪಾಟಾಳಿ ಮುಕ್ರಂಪಾಡಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಖ್ಯಾತ ಕಿರುತೆರೆ ನಟ ಕೌಶಿಕ್ ರಾಮ್ ಪಾಲ್ಗೊಳ್ಳಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಜಿಲ್ಲೆಯ ಐದು ತಾಲೂಕುಗಳ ಸಮುದಾಯ ಬಾಂಧವರಿಂದ ಭಾರತದ ಸಂಸ್ಕೃತಿಯನ್ನು ಬಿಂಬಿಸುವ ‘ಸಾಂಸ್ಕೃತಿಕ ವೈಭವ” ನಡೆಯಲಿದೆ.


ಪುತ್ತೂರು ಹಾಗೂ ಕಡಬ ತಾಲೂಕಿನ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪುತ್ತೂರು ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಸಾದ್ ಕಲ್ಲರ್ಪೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here