ಪುತ್ತೂರು: ಪತ್ರಕರ್ತ ,ಸಾಹಿತಿ ಗೋಪಾಲಕೃಷ್ಣ ಕುಂಟಿನಿ ಅವರು “ಹವ್ಯಕ ಸ್ಫೂರ್ತಿ ರತ್ನ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಈ ವಾರಾಂತ್ಯದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ “ವಿಶ್ವ ಹವ್ಯಕ ಸಮ್ಮೇಳನ”ದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.ಅಖಿಲ ಹವ್ಯಕ ಮಹಾಸಭಾ ಪ್ರಕಟನೆಯಲ್ಲಿ ತಿಳಿಸಿದೆ.
ಗೋಪಾಲಕೃಷ್ಣ ಕುಂಟಿನಿ ಅವರು ಮೂರು ದಶಕಗಳ ಕಾಲ ಕನ್ನಡ ಪತ್ರಿಕಾರಂಗದಲ್ಲಿ ವರದಿಗಾರನಾಗಿ ಗ್ರಾಮೀಣ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಮಾಧ್ಯಮ ಪ್ರತಿನಿಧಿಯಾಗಿ ದೆಹಲಿಯ ಅಖಿಲಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಆಯೋಜಿಸಿದ ಮಾಧ್ಯಮ ಕಾರ್ಯಾಗಾರಗಳಲ್ಲಿ ರಾಜ್ಯದ ಪ್ರತಿನಿಧಿಯಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದಾರೆ. ವಿದೇಶ ಅಧ್ಯಯನ ಪ್ರವಾಸಗಳನ್ನು ಮಾಡಿದ್ದಾರೆ.
ಆರು ಕಥಾಸಂಕಲನ, ಒಂದು ಕವನ ಸಂಕಲನ, ಒಂದು ರಾಜಕೀಯ ವಿಡಂಬನೆ, ಒಂದು ಕಾದಂಬರಿ, ಒಂದು ಅಧ್ಯಯನ ಕೃತಿ, ಹಾಗೂ ನಾಲ್ಕು ಸಂಪಾದಿತ ಕೃತಿಗಳೂ ಸೇರಿ ಅವರ ಹದಿನಾಲ್ಕು ಪುಸ್ತಕಗಳು ಪ್ರಕಟವಾಗಿವೆ. ಕನ್ನಡ ಸಾಹಿತ್ಯ ಪರಿಷತ್ ಆಯೋಜನೆಯ ಉಪ್ಪಿನಂಗಡಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಪಡೆದಿದ್ದಾರೆ. ಪುತ್ತೂರಿನಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಮುದಾಯ ಬಾನುಲಿ ಕೇಂದ್ರ “ರೇಡಿಯೋ ಪಾಂಚಜನ್ಯ”ದ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಗ್ರಾಮೀಣ ಸಂವಹನ ಕ್ಷೇತ್ರವನ್ನು ಬೆಳೆಸಿದ್ದಾರೆ.