ಮಂಗಳೂರಿಗೆ ಬ್ರಹ್ಮೋಪದೇಶ ಕಾರ್ಯಕ್ರಮಕ್ಕೆ ಹೋಗಲೆಂದು ಬರುತ್ತಿದ್ದರು
ಮಗನನ್ನು ಬಸ್ಸಿನಲ್ಲಿ ಕಳುಹಿಸಿ ಸ್ಕೂಟಿಯೇರಿದ್ದ ಚಿದಾನಂದ ಆಚಾರ್ಯ-ನಳಿನಿ ದಂಪತಿ
ಕೋಡಿಂಬಾಡಿ ಮೋನಡ್ಕ ಮನೆಯಲ್ಲಿ ಮೃತದೇಹದ ಅಂತಿಮ ವಿಧಿ ವಿಧಾನ
ಸಿದ್ದಾಪುರದಲ್ಲಿ ಅಂತ್ಯಕ್ರಿಯೆ
ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಪಾಜೆ ಸಮೀಪದ ಕೊಯನಾಡಿನ ಚೆಡಾವು ಬಳಿ ಸ್ಕೂಟಿ ಹಾಗೂ ಕಂಟೈನರ್ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಕೊಡಗು ನಿವಾಸಿಗಳಾಗಿದ್ದ ಕೋಡಿಂಬಾಡಿ ಮೂಲದ ದಂಪತಿ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಂಟೈನರ್ ಲಾರಿ ಹಾಗೂ ಕೊಡಗಿನ ಸಿದ್ದಾಪುರದಿಂದ ಸುಳ್ಯ ಮೂಲಕ ಪುತ್ತೂರಿಗೆ ಬರುತ್ತಿದ್ದ ಸ್ಕೂಟಿ ನಡುವೆ ದ.24ರ ಸಂಜೆ ಮುಖಾಮುಖಿ ಡಿಕ್ಕಿಯಾಗಿದೆ.ಸ್ಕೂಟಿ ಸವಾರ ಕೊಡಗು ಜಿಲ್ಲೆಯ ಸಿದ್ಧಾಪುರದ ನೆಲ್ಲಿಹುದಿಕೇರಿ ನಿವಾಸಿಯಾಗಿದ್ದ ಪುತ್ತೂರು ಮೂಲದ ಎಂ.ಚಿದಾನಂದ ಆಚಾರ್ಯ(48ವ.)ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಸ್ಕೂಟಿಯ ಸಹಸವಾರೆಯಾಗಿದ್ದು ಅಪಘಾತದಿಂದ ಗಂಭೀರ ಗಾಯಗೊಂಡಿದ್ದ, ಚಿದಾನಂದ ಆಚಾರ್ಯ ಅವರ ಪತ್ನಿ ನಳಿನಿ(39ವ.)ಅವರನ್ನು ಆಂಬುಲೆನ್ಸ್ ಮೂಲಕ ಸ್ಥಳೀಯರು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರಾದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.
ಬ್ರಹ್ಮೋಪದೇಶ ಕಾರ್ಯಕ್ರಮಕ್ಕೆಂದು ಬರುತ್ತಿದ್ದರು:
ಚಿದಾನಂದ ಆಚಾರ್ಯ ದಂಪತಿ ಚಿನ್ನದ ಕೆಲಸ ಮಾಡಿಕೊಂಡು ಕೊಡಗಿನ ಸಿದ್ದಾಪುರದ ನೆಲ್ಲಿಹುದಿಕೇರಿಯಲ್ಲಿ ಹನ್ನೆರಡು ವರ್ಷದ ಪುತ್ರನೊಂದಿಗೆ ನೆಲೆಸಿದ್ದರು.ಚಿದಾನಂದ ಆಚಾರ್ಯ ಅವರ ಜೊತೆಗೆ ಕೆಲಸ ಮಾಡಿಕೊಂಡಿದ್ದವರೋರ್ವರ ಮಗನಿಗೆ ಡಿ.25ರಂದು ಮಂಗಳೂರುನಲ್ಲಿ ಬ್ರಹ್ಮೋಪದೇಶ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಚಿದಾನಂದ ಆಚಾರ್ಯ ಮತ್ತು ನಳಿನಿ ದಂಪತಿ ತಮ್ಮ ಮಗನನ್ನು ಮಡಿಕೇರಿಯಲ್ಲಿ ಬಸ್ಸಿನಲ್ಲಿ ಕುಳ್ಳಿರಿಸಿ ಬಳಿಕ ತಾವು ಸ್ಕೂಟಿಯಲ್ಲಿ ಹೊರಟು ಬಂದಿದ್ದರು.ಸಂಪಾಜೆಯ ಚೆಡಾವು ತಲುಪಿದಾಗ ಕಂಟೈನರ್ ಲಾರಿ ಇವರ ಸ್ಕೂಟಿಗೆ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಸ್ಕೂಟಿ ನಜ್ಜುಗುಜ್ಜಾಗಿದೆ.ದಂಪತಿ ಮೃತಪಟ್ಟಿದ್ದಾರೆ.ಕಂಟೈನರ್ ಲಾರಿ ಚಾಲಕ ಪರಾರಿಯಾಗಿದ್ದು,ಬಳಿಕ ಸಂಪಾಜೆ ಪೊಲೀಸರು ಬಂಧಿಸಿ ಕೇಸು ದಾಖಲಿಸಿಕೊಂಡಿದ್ದಾರೆ.
ಕೋಡಿಂಬಾಡಿಗೆ ಮೃತ ದೇಹ:
ಚಿದಾನಂದ ಆಚಾರ್ಯ ಮತ್ತು ನಳಿನಿ ದಂಪತಿಯ ಮೃತದೇಹವನ್ನು ಕೋಡಿಂಬಾಡಿ ಗ್ರಾಮದ ಮೋನಡ್ಕ ದಿ.ನಾರಾಯಣ ಆಚಾರ್ಯ ಅವರ ಮನೆಗೆ ತಂದು ಅಂತಿಮ ವಿಧಿ ವಿಧಾನ ಪೂರೈಸಿ ಬಳಿಕ ಸಿದ್ಧಾಪುರಕ್ಕೆ ಕೊಂಡೊಯ್ದು ಅಂತ್ಯ ಸಂಸ್ಕಾರ ನಡೆಸಲಾಗಿದೆ.ಮೃತ ಚಿದಾನಂದ ಆಚಾರ್ಯ ಅವರು ಕೋಡಿಂಬಾಡಿ ಮೋನಡ್ಕದ ದಿ.ನಾರಾಯಣ ಆಚಾರ್ಯ ಅವರ ಅಣ್ಣ ಅಣ್ಣಿ ಆಚಾರ್ಯ ಅವರ ಮಗನಾಗಿದ್ದು ಬಾಲ್ಯದಲ್ಲಿ ಮೋನಡ್ಕದಿಂದಲೇ ಪೆರ್ನೆ ಶಾಲೆಗೆ ಹೋಗುತ್ತಿದ್ದರು.ಅವರ ಪತ್ನಿ ನಳಿನಿಯವರು ಮೋನಡ್ಕ ನಾರಾಯಣ ಆಚಾರ್ಯ ಅವರ ತಂಗಿ, ಕಡೇಶ್ವಾಲ್ಯ ನಿವಾಸಿ ಕಮಲ ಅವರ ಮಗಳಾಗಿದ್ದು ಬಾಲ್ಯದಲ್ಲಿ ವಿಟ್ಲ ಮಂಗಿಲಪದವು ಶಾಲೆಗೆ ಹೋಗುತ್ತಿದ್ದರು.ಮದುವೆಯಾದ ಬಳಿಕ ದಂಪತಿ ಕೊಡಗಿನ ಸಿದ್ಧಾಪುರದ ನೆಲ್ಲಿಹುದೇರಿಯಲ್ಲಿ ಮನೆಮಾಡಿ ಅಲ್ಲೇ ಚಿನ್ನದ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು.ಮೃತ ದಂಪತಿಗೆ ಹನ್ನೆರಡು ವರ್ಷ ಪ್ರಾಯದ ಮಗನಿದ್ದು ತಂದೆ,ತಾಯಿ ಇಬ್ಬರೂ ಅಪಘಾತದಲ್ಲಿ ಬಲಿಯಾಗಿರುವುದರಿಂದ ಮಗ ಅನಾಥವಾಗುವಂತಾಗಿದೆ.