ಬೃಹತ್ ಹೊರೆಕಾಣಿಕೆ ಸಮರ್ಪಣೆ ಮೆರವಣಿಗೆ – ನಾಳೆಯಿಂದ ಬ್ರಹ್ಮಕಲಶೋತ್ಸವ ಆರಂಭ
ಪುತ್ತೂರು: ಸಂಪ್ಯ ಉದಯಗಿರಿಯಲ್ಲಿನ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಡಿ.27ರಿಂದ ಜ.3ರ ತನಕ ಶ್ರೀ ಅನ್ನಪೂರ್ಣೇಶ್ವರಿ ದೇವರ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಡಿ. 26ರಂದು ಸಂಜೆ ಹೊರೆಕಾಣಿಕೆ ಸಮರ್ಪಣೆ ಮೆರವಣಿಗೆ ನಡೆಯಿತು.
ಸಂತಾನ, ದುರಿತದೋಷಗಳ ಪರಿಹಾರ, ಕಲ್ಯಾಣ ಪ್ರಾಪ್ತಿ ಮುಂತಾದ ಭಾಗ್ಯಗಳನ್ನು ಕರುಣಿಸುವ ಕ್ಷೇತ್ರವಾಗಿರುವ ಆರ್ಯಾಪು ಗ್ರಾಮದ ಸಂಪ್ಯದ ಉದಯಗಿರಿ ಶ್ರೀ ವಿಷ್ಣುಮೂರ್ತಿ, ಅನ್ನಪೂಣೇಶ್ವರಿ ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ನಾಗಮಂಡಲಗಳು, ರಕ್ತೇಶ್ವರಿ ನಡಾವಳಿ, ಅತಿರುದ್ರಯಾಗ, ಲಕ್ಷ್ಮಿತ್ರಿಮಧುರ ಪೂರಿತ ನಾಳಿಕೇರ ಗಣಪತಿಯಾಗ, ಲಕ್ಷಗಾಯತ್ರಿ ಯಜ್ಞ, ಕಾಣಿಯೂರು ಶ್ರೀಗಳ ಚಾತುರ್ಮಾಸ ವೃತಾಚರಣೆ ಮೊದಲಾದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ, ಶರಣಾದ ಭಕ್ತರ ಇಷ್ಟಾರ್ಥಗಳನ್ನು ಅನುಗ್ರಹಿಸುತ್ತಾ ಬಂದಿರುವ ಶ್ರೀ ಕ್ಷೇತ್ರ ಹಾಗು ಸುಮಾರು 120 ವರ್ಷಗಳಿಂದ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಬಂದಿರುವ ಕ್ಷೇತ್ರವಾಗಿದೆ. ಇದೀಗ ಶ್ರೀ ಅನ್ನಪೂಣೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದೆ. ಪ್ರತಿ ದಿನ ಗಣಪತಿ ಹೋಮ ಮಹಾಪೂಜೆ, ಮಧ್ಯಾಹ್ನ ಮತ್ತು ರಾತ್ರಿ ಅನ್ನಪ್ರಸಾದ ವಿತರಣೆ ನಡೆಯಲಿದೆ. ಜ.2ಕ್ಕೆ ಪ್ರತಿಷ್ಠೆ, ಪ್ರತಿಷ್ಠಾಬಲಿ, ಕಲಶಾಭಿಷೇಕ ನಡೆಯಲಿದೆ.
ಡಿ.27ಕ್ಕೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಚಾಲನೆ
ಡಿ.27ರಂದು ಬೆಳಿಗ್ಗೆ ಭಜನಾ ಕಾರ್ಯಕ್ರಮದ ಉದ್ಘಾಟನೆ, ಸಂಜೆ ಸಭಾ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ನ್ಯೂಸ್ ಫಸ್ಟ್ ಕನ್ನಡ ಇದರ ಎಮ್.ಡಿ. ರವಿಕುಮಾರ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಡಿ.28ಕ್ಕೆ ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯ ಮತ್ತು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಡಿ. 29ರಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.
ಡಿ. 30ರಂದು ಹೊರನಾಡ ಶ್ರೀ ಅನ್ನಪೂಣೇಶ್ವರಿ ಕ್ಷೇತ್ರದ ಧರ್ಮಕರ್ತ ಡಾ. ಭೀಮೇಶ್ವರ ಜೋಷಿ ಅಶೀರ್ವಚನ ನೀಡಲಿದ್ದಾರೆ. ಮಂಗಳೂರು ಶಾಸಕ ವೇದವ್ಯಾಸ ಕಾಮತ್, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅಭ್ಯಾಗತರಾಗಿ ಬಾಗವಹಿಸಲಿದ್ದಾರೆ. ಡಿ.31ರಂದು ವಿಶ್ವಕರ್ಮ ಜಗದ್ಗುರುಪೀಠ ಅರೆಮಾದನ ಹಳ್ಳಿ ಇಲ್ಲಿನ ಶ್ರೀ ಅನಂತಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಸ್ವಾಮೀಜಿಯವರು, ಜ.1ರಂದು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರು ಅಶೀರ್ವಚನ ನೀಡಲಿದ್ದಾರೆ. ಸಂಸದ ಬ್ರಿಜೇಶ್ ಚೌಟ, ಜ.3ರಂದು ಧನ್ಯೋಸ್ಮಿ ಕಾರ್ಯಕ್ರಮ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಕುಕ್ಕಾಡಿ ತಂತ್ರಿ ಪ್ರೀತಂ ಪುತೂರಾಯ ಅವರು ತಿಳಿಸಿದ್ದಾರೆ.
ಹೊರೆಕಾಣಿಕೆ ಸಮರ್ಪಣೆ
ಶ್ರೀ ಕ್ಷೇತ್ರಕ್ಕೆ ಸಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರೆಕಾಣಿಕೆ ಸಮರ್ಪಣೆ ಮೆರಣಿಗೆ ನಡೆಯಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರೂ ಆಗಿರುವ ಈಶ್ವರ ಭಟ್ ಪಂಜಿಗುಡ್ಡೆಯವರು ತೆಂಗಿನ ಕಾಯಿ ಒಡೆಯುವ ಮೂಲಕ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬ್ರಹ್ಮಕಲಶೋತ್ಸವ ನಿರ್ವಿಘ್ನವಾಗಿ ನಡೆಯಲು ಆರಂಭದಲ್ಲಿ ದೇವಳದಲ್ಲಿ ಸಮಿತಿ ಪದಾಧಿಕಾರಿಗಳು ಪ್ರಾರ್ಥನೆ ಮಾಡಿದರು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ, ಚಿದಾನಂದ ಬೈಲಾಡಿ, ಅಧ್ಯಕ್ಷ ಡಾ. ಸುರೇಶ್ ಪುತ್ತೂರಾಯ, ಕಾಯಾಧ್ಯಕ್ಷ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ರಾಜೇಶ್ ಬನ್ನೂರು, ಧರ್ಮದರ್ಶಿ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ, ಪ್ರಧಾನ ಕಾರ್ಯದರ್ಶಿ ಜಯಂತ ಶೆಟ್ಟಿ ಕಂಬಳತ್ತಡ್ಡ, ಸಂಘಟನಾ ಕಾರ್ಯದರ್ಶಿ ರಾಧಾಕೃಷ್ಣ ಬೋರ್ಕರ್, ಕೋಶಾಧಿಕಾರಿ ಉಯದ ಕುಮಾರ್ ರೈ ಸಂಪ್ಯ, ಜೊತೆ ಕಾರ್ಯದರ್ಶಿ ಧನುಷ್ ಹೊಸಮನೆ, ಸ್ವಾಗತ ಸಮಿತಿಯ ಪದಾಧಿಕಾರಿ ಯು ಲೋಕೇಶ್ ಹೆಗ್ಡೆ, ನೇಮಾಕ್ಷ ಸುವರ್ಣ, ಪೂರ್ಣಿಮಾ ಪುತ್ತೂರಾಯ, ಅಣ್ಣಿ ಪೂಜಾರಿ ಸಂಪ್ಯ, ನರೇಂದ್ರ ನಾಯಕ್ ಮರಕ್ಕ, ಸಾಂಸ್ಕೃತಿಕ ವೇದಿಕೆ ಸಮಿತಿ ಸಂಚಾಲಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ, ಸತೀಶ್ ಆಚಾರ್ಯ, ನಯನಾ ರೈ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.