ಪುತ್ತೂರು:ಪಂಚಾಯತ್ ಕಚೇರಿಗೆ ತೆರಳಿದ್ದ ತನಗೆ ಗ್ರಾಮ ಪಂಚಾಯತ್ ಅಧ್ಯಕ್ಷರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಗ್ರಾ.ಪಂ.ಮಾಜಿ ಸದಸ್ಯರೋರ್ವರು ಏಕಾಂಗಿಯಾಗಿ ಪಂಚಾಯತ್ ಕಚೇರಿ ಮುಂಭಾಗದಲ್ಲಿ ರಾತ್ರಿ ತನಕ ಧರಣಿ ನಡೆಸಿರುವ ಘಟನೆ ಡಿ.26ರಂದು ಬನ್ನೂರು ಗ್ರಾ.ಪಂನಲ್ಲಿ ನಡೆದಿದೆ.ನನಗೆ ಈ ಬಗ್ಗೆ ಸೂಕ್ತ ಉತ್ತರ ನೀಡಬೇಕು.ಅಧಿಕಾರಿಗಳು ಬಾರದೇ ನಾನು ಇಲ್ಲಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದು ಗ್ರಾ.ಪಂ.ಮಾಜಿ ಸದಸ್ಯ ರತ್ನಾಕರ ಪ್ರಭು ಅವರು ಪಂಚಾಯತ್ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದ್ದಾರೆ.
ಎರಡು ದಿನಗಳ ಹಿಂದೆ ತಾನು ಪಂಚಾಯತ್ ಕಚೇರಿಗೆ ತೆರಳಿದ್ದ ಸಂದರ್ಭದಲ್ಲಿ ಕಚೇರಿಯಲ್ಲಿ ಅಧಿಕಾರಿಗಳು ಇಲ್ಲದಿರುವ ಬಗ್ಗೆ ಚಲನವಲನ ಹಾಗೂ ಸಂದರ್ಶಕ ಪುಸ್ತಕ ಕೇಳಿದಾಗ ಅಲ್ಲಿನ ಸಿಬ್ಬಂದಿಗಳು ನೀಡದೇ ಸತಾಯಿಸಿದ್ದಾರೆ ಎಂದು ರತ್ನಾಕರ ಪ್ರಭು ಆರೋಪಿಸಿದ್ದಾರೆ.ಪಿಡಿಒ ಇಲ್ಲದ ಸಮಯದಲ್ಲಿ ಅವರ ಕಚೇರಿ ಒಳಗೆ ತೆರಳಿ ಫೈಲ್‌ಗಳನ್ನು ನೋಡಿದ್ದರೆಂಬ ಆರೋಪ ರತ್ನಾಕರ ಪ್ರಭು ಅವರ ಮೇಲಿದೆ.ಈ ವಿಚಾರ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾಗಿ, ಕಚೇರಿಯಲ್ಲಿ ಅಧಿಕೃತ ಸಿಬ್ಬಂದಿಗಳ ಹೊರತಾಗಿ ತಾತ್ಕಾಲಿಕ ನೆಲೆಯಲ್ಲಿರುವವರು ಯಾವುದೇ ದಾಖಲೆಗಳನ್ನು ನೀಡಬಾರದು.ಪಿಡಿಒ ಇಲ್ಲದ ಸಂದರ್ಭದಲ್ಲಿ ಸಾರ್ವಜನಿಕರು ಅವರ ಕಚೇರಿಯೊಳಗೆ ಹೋಗಬಾರದು ಎಂದು ಅಧ್ಯಕ್ಷರು ಸಿಬ್ಬಂದಿಗಳಿಗೆ ಸಭೆಯಲ್ಲಿ ಸೂಚಿಸಿದ್ದರು.ಈ ವಿಚಾರ ತಿಳಿದ ರತ್ನಾಕರ ಪ್ರಭುರವರು ಸಂಜೆ ಪಂಚಾಯತ್ ಕಚೇರಿಗೆ ತೆರಳಿ, ನಾನು ಕಚೇರಿಗೆ ಬಂದಿರುವುದನ್ನು ಯಾರು ಹೇಳಿದ್ದು ಎಂದು ಪ್ರಶ್ನಿಸಿ ಸಿಬ್ಬಂದಿಗಳನ್ನು ಗದರಿಸಿದ್ದರೆನ್ನಲಾಗಿದೆ.ಇದೇ ಸಂದರ್ಭದಲ್ಲಿ ಕಚೇರಿಯಲ್ಲಿದ್ದ ಗ್ರಾ.ಪಂ ಅಧ್ಯಕ್ಷೆ ಸ್ಮಿತಾ ಹಾಗೂ ರತ್ನಾಕರ ಪ್ರಭುರವರ ಮಧ್ಯೆ ಚರ್ಚೆ ನಡೆದಿತ್ತು.‘ನೀವು ಕಚೇರಿಗೆ ಬಂದು ಸಿಬ್ಬಂದಿಗಳ ಮೇಲೆ ಗೂಂಡಾಗಿರಿ ಮಾಡುತ್ತೀರಿ. ನಿಮ್ಮ ಮೇಲೆ ದೂರು ನೀಡಬೇಕಾಗುತ್ತದೆ’ ಎಂದು ಅಧ್ಯಕ್ಷರು ತನ್ನನ್ನು ಬೆದರಿಸಿದ್ದಾರೆ ಎಂದು ಆರೋಪಿಸಿ ರತ್ನಾಕರ ಪ್ರಭು ಧರಣಿ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
‘ನಾನು ಡಿ.24ರಂದು ಗ್ರಾ.ಪಂ.ಕಚೇರಿಗೆ ಹೋಗಿದ್ದೆ.ಆ ಸಂದರ್ಭದಲ್ಲಿ ಪಂಚಾಯತ್‌ನಲ್ಲಿ ಅಧಿಕಾರಿಗಳು ಇರಲಿಲ್ಲ.ಚಲನವಲನ ಹಾಗೂ ಸಾರ್ವಜನಿಕ ಸಂದರ್ಶಕರ ದಾಖಲೀಕರಣದ ಪುಸ್ತಕ ಕೇಳಿದ್ದೇನೆ.ಇದಕ್ಕೆ ನನ್ನನ್ನು ಒಂದು ಗಂಟೆಗೂ ಹೆಚ್ಚು ಕಾಲ ಕಾಯಿಸಿದ್ದಾರೆ.ನಂತರ ಬಂದ ಪ್ರಭಾರ ಪಿಡಿಒ ಪುಸ್ತಕ ನೀಡಿದ್ದರೂ ಅದರಲ್ಲಿ ಯಾವುದೇ ದಾಖಲೀಕರಣ ಇರಲಿಲ್ಲ.ಹೀಗಾಗಿ ನಾನು ಸಹಿ ಮಾಡುವುದಿಲ್ಲ ಎಂದಿದ್ದೇನೆ.ನಾನು ಪಿಡಿಒ ಕಚೇರಿ ಒಳಗೆ ಹೋಗಿದ್ದೇನೆ.ಆದರೆ ಯಾವುದೇ ದಾಖಲೆ ಮುಟ್ಟಿಲ್ಲ.ಈ ವಿಚಾರ ಡಿ.26ರಂದು ನಡೆದ ಸಭೆಯಲ್ಲಿ ಪ್ರಸ್ತಾಪವಾಗಿದ್ದು ನಾನು ಕಚೇರಿಯಲ್ಲಿ ಫೈಲ್ ನೋಡಿರುವುದಾಗಿ ಸಭೆಯಲ್ಲಿ ಆರೋಪಿಸಲಾಗಿದೆ ಎಂಬ ಮಾಹಿತಿ ನನಗೆ ದೊರೆತಿದ್ದು ನಾನು ಸಂಜೆ ಕಚೇರಿಗೆ ತೆರಳಿ ಪ್ರಭಾರ ಪಿಡಿಒ ಅವರಲ್ಲಿ ಈ ಕುರಿತು ವಿಚಾರಿಸಿದ್ದೇನೆ.ಈ ಸಂದರ್ಭದಲ್ಲಿ ಕಚೇರಿಯಲ್ಲಿದ್ದ ಅಧ್ಯಕ್ಷರು, ಸಭೆಯಲ್ಲಿ ನಾನೇ ಪ್ರಸ್ತಾಪಿಸಿದ್ದು ಎಂದು ಹೇಳಿದರು.ಈ ವಿಚಾರದಲ್ಲಿ ನಮ್ಮೊಳಗೆ ಮಾತಿನ ಚಕಮಕಿ ನಡೆದಿದೆ.ಈ ಸಂದರ್ಭದಲ್ಲಿ, ನೀವು ಪಂಚಾಯತ್‌ಗೆ ಬಂದು ಗೂಂಡಾಗಿರಿ ಮಾಡುತ್ತಿದ್ದೀರಿ.ನಿಮ್ಮ ಮೇಲೆ ದೂರು ನೀಡುವುದಾಗಿ ಅಧ್ಯಕ್ಷರು ತಿಳಿಸಿದ್ದಾರೆ.ನಾನು ಏನು ಗೂಂಡಾಗಿರಿ ಮಾಡಿದ್ದೇನೆ.ಗ್ರಾಮದ ಅಭಿವೃದ್ಧಿ ಬಗ್ಗೆ ಮಾತನಾಡಿದರೆ ಗೂಂಡಾಗಿರಿ ಆಗುವುದಾದರೆ ಹೇಗೆ.? ಈ ರೀತಿ ಬೆದರಿಕೆ ಹಾಕಿದರೆ ನಾವು ಸಾರ್ವಜನಿಕ ಕೆಲಸ ಮಾಡುವುದು ಹೇಗೆ?. ಅಭಿವೃದ್ಧಿ ಆಗುವುದು ಹೇಗೆ?. ಬೆದರಿಕೆ ಹಾಕಿದರೆ ಕಚೇರಿಗೆ ಬರುವುದಾದರೂ ಹೇಗೆ?. ಇದಕ್ಕೆ ನನಗೆ ಉತ್ತರ ನೀಡಬೇಕು.ತಾ.ಪಂ ಕಾರ್ಯನಿರ್ವಾಹಕಾಽಕಾರಿ, ಜಿ.ಪಂ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಅಥವಾ ಲೋಕಾಯುಕ್ತರೇ ಬರಲಿ.ಪಂಚಾಯತ್‌ನ ನಾಲ್ಕು ವರ್ಷಗಳ ಅನುದಾನಗಳ ಬಗ್ಗೆ ತನಿಖೆ ನಡೆಯಲಿ.ಅಧಿಕಾರಿಗಳು ಬಾರದೇ ನಾನು ಇಲ್ಲಿಂದ ಕದಲುವುದಿಲ್ಲ’ ಎಂದು ರತ್ನಾಕರ ಪ್ರಭು ತಿಳಿಸಿದ್ದಾರೆ.
ಮೂರನೇ ಬಾರಿ ಬೆದರಿಸಿದ್ದಕ್ಕೆ ದೂರು ನೀಡಬೇಕಾಗುತ್ತದೆ ಎಂದಿದ್ದೆ-ಅಧ್ಯಕ್ಷೆ ಸ್ಮಿತಾ
ರತ್ನಾಕರ ಪ್ರಭುರವರು ಕಚೇರಿಗೆ ಬಂದು ದಾಖಲೆ ಕೇಳಿರುವುದು, ಪಿಡಿಓ ಕಚೇರಿಗೆ ಹೋಗಿರುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾಗಿ ಚರ್ಚೆಯಾಗಿತ್ತು.ಅಧಿಕೃತವಾಗಿ ಜಯಂತಿಯವರು ಮಾತ್ರವೇ ಇದ್ದು ಅವರು ಸಭೆಗಳಿಗೆ ಹೋಗಿರುವಾಗ ಪಂಚಾಯತ್‌ನ ಸುರಕ್ಷತೆಯ ದೃಷ್ಠಿಯಿಂದ ಕಚೇರಿಗೆ ಯಾರೇ ಬಂದು ದಾಖಲೆ ಕೇಳಿದಾಗ ತಾತ್ಕಾಲಿಕ ನೆಲೆಯಲ್ಲಿರುವ ಸಿಬ್ಬಂದಿಗಳು ನೀಡಬಾರದು.ಅಧಿಕೃತ ಸಿಬ್ಬಂದಿಗಳು ಮಾತ್ರವೇ ನೀಡಬೇಕು.ಪಿಡಿಒ ಇಲ್ಲದ ಸಂದರ್ಭದಲ್ಲಿ ಅವರ ಕಚೇರಿಯೊಳಗೆ ಸಾರ್ವಜನಿಕರು ಹೋಗಬಾರದು ಎಂದು ತಿಳಿಸಲಾಗಿದೆ.ಸಭೆಯಲ್ಲಿ ನಡೆದ ವಿಚಾರಗಳ ಬಗ್ಗೆ ಮಾಹಿತಿ ಪಡೆದ ರತ್ನಾಕರ ಪ್ರಭು ಅವರು ಸಂಜೆ ಕಚೇರಿಗೆ ಆಗಮಿಸಿದ್ದಾರೆ.ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾಧಿಕಾರಿಗಳಿಗೆ, ಪಂಚಾಯತ್‌ಗೆ ಸಂಬಂಧಿಸಿದ ಬೇಡಿಕೆಗಳ ಪಟ್ಟಿ ಮಾಡುತ್ತಿದ್ದೆ.ಕಚೇರಿಯಲ್ಲಿ ಸಿಬ್ಬಂದಿಗಳನ್ನು ಗದರಿಸಿದ್ದಾರೆ.ನನ್ನ ಎದುರಿನಲ್ಲೇ ಸಿಬ್ಬಂದಿಗಳನ್ನು ಗದರಿಸುವಾಗ ನಾನು ಅವರನ್ನು ಪ್ರಶ್ನಿಸಿದ್ದೇನೆ.ಕೇಳುವುದನ್ನು ಸಮಾಧಾನದಲ್ಲಿ ಕೇಳುವಂತೆ ಅವರಿಗೆ ತಿಳಿಸಿದ್ದೇನೆ.ಈ ಸಂದರ್ಭದಲ್ಲಿ, ನಿಮ್ಮ ಪಂಚಾಯತ್ ಅಲ್ಲ ಇದು.ನೀವು ಎಂಥ ಅಧ್ಯಕ್ಷರು. ನನ್ನನ್ನು ಕೇಳಲು ನೀವು ಯಾರು? ಎಂದು ನನ್ನನ್ನೂ ಬೆದರಿಸಿದ್ದಾರೆ.ಹೀಗೆ ಬೆದರಿಸಿದರೆ ದೂರು ನೀಡಬೇಕಾಗುತ್ತದೆ ಎಂದು ನಾನು ಅವರಲ್ಲಿ ಹೇಳಿದ್ದೇನೆ.ಅವರು ನನ್ನನ್ನು ಈ ರೀತಿ ಬೆದರಿಸುವುದು ಇದೇ ಮೊದಲಲ್ಲ.ಈ ಹಿಂದೆ ಎರಡು ಬಾರಿ ಬೆದರಿಸಿದ್ದಾರೆ.ಇದೀಗ ಮೂರನೇ ಬಾರಿ ಬೆದರಿಸಿರುವುದಕ್ಕೆ ದೂರು ನೀಡಬೇಕಾಗುತ್ತದೆ ಎಂದು ಹೇಳಿದ್ದೇನೆ.ಸಿಬ್ಬಂದಿಗಳನ್ನು ಗದರಿಸುವಾಗ ಅಧ್ಯಕ್ಷಳಾಗಿ ನನ್ನ ಕರ್ತವ್ಯವಾಗಿ ನಾನು ಅವರಲ್ಲಿ ಪ್ರಶ್ನಿಸಿದ್ದೇನೆ.ನನ್ನ ಎದುರಲ್ಲೇ ಸಿಬ್ಬಂದಿಗಳನ್ನು ಅವಮಾನಿಸುವಾಗ ಅಧ್ಯಕ್ಷಳಾಗಿ ನಾನು ಪ್ರಶ್ನಿಸಬಾರದೇ ಎಂದು ಅಧ್ಯಕ್ಷೆ ಸ್ಮಿತಾ ತಿಳಿಸಿದ್ದಾರೆ.