ಪುತ್ತೂರು: ಹಗರಣಗಳಲ್ಲಿ ಕೋಟಿ ಕೋಟಿ ಅವ್ಯಹಾರ ಮಾಡುವವರಿಗೆ ಸಮಾಜ ಗೌರವಿಸುತ್ತೆ. ಮಾನವನಿಗೆ ಮತ್ತೂ ಮತ್ತೂ ಬೇಕು ಎನ್ನುವ ದುರಾಸೆಯೇ ಇಂದಿನ ದಿನಗಳಲ್ಲಿ ಜಾಸ್ತಿಯಾಗಿದೆ. ಮಾನವೀಯತೆ ಎಂಬುದು ನಗಣ್ಯವಾಗಿಬಿಟ್ಟಿದೆ. ದೇಶ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ನಮ್ಮಲ್ಲಿನ ದುರಾಸೆ ಬಿಟ್ಟು ಬಿಡಬೇಕು, ಮಾನವೀಯತೆಯನ್ನು ಬೆಳೆಸಿಕೊಂಡು ಜೀವನದಲ್ಲಿ ಸಂತೃಪ್ತರಾಗಬೇಕು ಎಂದು ಕರ್ನಾಟಕ ಲೋಕಾಯಕ್ತ ಇದರ ನಿವೃತ್ತ ಚೀಫ್ ಜಸ್ಟೀಸ್ ಎನ್.ಸಂತೋಷ್ ಹೆಗ್ಡೆರವರು ಕರೆ ನೀಡಿದರು.
ಅಂತರ್ರಾಷ್ಟ್ರೀಯ ಜೇಸಿಐ ಪುತ್ತೂರು ವಲಯ 15ರ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ಡಿ.26 ರಂದು ಸಂಜೆ ರೋಟರಿ ಮನೀಷಾ ಸಭಾಂಗಣದಲ್ಲಿ ಜರಗಿದ್ದು, ಅವರು ಮುಖ್ಯ ಅತಿಥಿಗಳಾಗಿ ‘ಡ್ರಗ್ಸ್ ಮುಕ್ತ ಪುತ್ತೂರು, ಸೈಬರ್ ಕ್ರೈಮ್ ಜಾಗೃತಿ ಬಗ್ಗೆ ಅಭಿಯಾನ’ ಪೋಸ್ಟರ್‌ನ್ನು ಅನಾವರಣಗೊಳಿಸಿ ಮಾತನಾಡಿದರು.
ತಪ್ಪು ಮಾಡಿ ಜೈಲಿಗೆ ಹೋದವರ ಮನೆಗೆ ಹೋಗಬೇಡ ಎಂದು ನನಗೆ ನನ್ನ ಹೆತ್ತವರು ಹೇಳಿದ ಮಾತು. ಆದರೆ ಇಂದು ಸಮಾಜದಲ್ಲಿ ತಪ್ಪೆಸಗಿ ಜೈಲಿಗೆ ಹೋಗಿ ಜಾಮೀನು ಪಡೆದು ಬಂದವರಿಗೆ ಜೈಕಾರ ಹಾಕುವುದು ಇಂದಿನ ಸಮಾಜದಲ್ಲಿ ಕಾಣ ಸಿಗುವುದು ವಿಪರ್ಯಾಸ. ಹಿಂದಿನ ಕಾಲದಲ್ಲಿ ಮನೆಯಲ್ಲಿ ತಪ್ಪು ಮಾಡಿದರೂ ಪೆಟ್ಟು, ಶಾಲೆಯಲ್ಲಿ ನೀತಿ ಪಾಠ ಆದರೆ ಇಂದು ಅದೆಲ್ಲವೂ ನಗಣ್ಯವಾಗಿಬಿಟ್ಟು ಸಮಾಜ ಅವನತಿಯತ್ತ ಸಾಗುತ್ತಿದೆ ಎಂದ ಅವರು ಮಕ್ಕಳ ಭವಿಷ್ಯ ಒಳ್ಳೆಯದಾಗಬೇಕಾದರೆ ಪೋಷಕರು ಮಕ್ಕಳ ಬಗ್ಗೆ ಸಮಯವನ್ನು ಮೀಸಲಿಡಬೇಕು. ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು ಸುಮ್ಮಿನಿದ್ರೆ ಸಾಲದು, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಬೇಕಾದರೆ ಅವರಿಗೆ ಮಾನವೀಯತೆಯ ಮೌಲ್ಯ ಏನೆಂಬುದನ್ನು ಕಲಿಸಿಕೊಡಬೇಕು. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುವುದೇ ಮಾನವನ ಧರ್ಮ. ಸಮಾಜದಲ್ಲಿ ಒಳ್ಳೆಯತನದ ಮನೋಭಾವನೆ ಬರಬೇಕಾದರೆ ನಾವು ನಮ್ಮಲ್ಲಿ ಒಳ್ಳೆಯತನವನ್ನು ಮೈಗೂಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಮನುಷ್ಯನಲ್ಲಿ ಮನುಷ್ಯತನ ಇರಬೇಕಾಗುವುದು ಅಗತ್ಯ-ವಂ|ಆಂಟನಿ ಪ್ರಕಾಶ್:
ಗೌರವ ಅತಿಥಿಗಳಾಗಿ ಭಾಗವಹಿಸಿದ ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ|ಆಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ನಡೆ ಮತ್ತು ನುಡಿ ಮಾನವನ ವ್ಯಕ್ತಿತ್ವದಲ್ಲಿ ವಿರಳ. ಆದರೆ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆರವರು ಹೇಗೆ ನುಡಿದಿದ್ದರೋ ಹಾಗೆಯೇ ನಡೆದು ತೋರಿಸಿಕೊಟ್ಟಿದ್ದಾರೆ. ಎಲ್ಲಿ ಮಾನವೀಯತೆವಿದೆಯೋ ಅಲ್ಲಿ ಸುದೃಢವಾದ ಬಲವಾದ ಸಮಾಜ ರೂಪುಗೊಳ್ಳುತ್ತದೆ. ಕಾಗೆಗಳಲ್ಲಿ ಕಾಗೆತನ, ಆನೆಗಳಲ್ಲಿ ಆನೆತನ, ಮನುಷ್ಯನಲ್ಲಿ ಮನುಷ್ಯತನ ಇರಬೇಕಾಗುವುದು ಅಗತ್ಯ. ಇದೇ ಮಾನವೀಯತೆಯನ್ನು, ವ್ಯಕ್ತಿತ್ವ ವಿಕಸನ ಬೆಳೆಸುವ ಜವಾಬ್ದಾರಿ ಜೇಸಿಗಿದೆ. ಯಾವುದೇ ವಿಚಾರದಲ್ಲಿ ಆಗಲಿ ನಮ್ಮಲ್ಲಿ ಸ್ವಾರ್ಥವಿರಕೂಡದು ಎಂದರು.
ಸಮಾಜಮುಖಿ ಕೆಲಸಗಳ ಮೂಲಕ ಜನರ ಬಾಯಲ್ಲಿ ಜೇಸಿ ಸಂಸ್ಥೆಯ ಹೆಸರಿರಲಿ-ಸುಹಾಸ್ ಮರಿಕೆ:
ಜೇಸಿಐ ಇಂಡಿಯಾದ ವಲಯ 15, ರೀಜ್ಹನ್ ಇ ಇದರ ವಲಯ ಉಪಾಧ್ಯಕ್ಷ(ಝಡ್‌ವಿಪಿ) ಸುಹಾಸ್ ಮರಿಕೆ ಮಾತನಾಡಿ, ಜೀವನದಲ್ಲಿ ಯಾರನ್ನು ಆದರ್ಶ ವ್ಯಕ್ತಿ ಅಂತ ಅಂದುಕೊಂಡಿದ್ದೇನೆಯೋ ಅವರೇ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆರವರೊಂದಿಗೆ ವೇದಿಕೆ ಹಂಚಿಕೊಂಡಿರುವುದು ಬಹಳ ಖುಶಿ ತಂದಿದೆ. ಜೇಸಿ ಸಂಸ್ಥೆ ಊರಿನ ಅಭಿವೃದ್ಧಿಗೆ ಉತ್ತಮ ಸೇವೆಗಳನ್ನು ಮಾಡುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಸೇವೆಗಳನ್ನು ನೀಡಿ ಜನರ ಬಾಯಲ್ಲಿ ಜೇಸಿ ಸಂಸ್ಥೆಯ ಹೆಸರಿರಲಿ ಎಂದರು.
ಜೇಸಿ ಸಂಸ್ಥೆಯು ಭವಿಷ್ಯದ ನಾಯಕರುಗಳನ್ನು ಸೃಷ್ಟಿಸುತ್ತಿದೆ-ಮೋಹನ ಕೆ:
ಜೇಸಿಐ ನಿರ್ಗಮನ ಅಧ್ಯಕ್ಷ ಮೋಹನ ಕೆ ಮಾತನಾಡಿ, ಜಗತ್ತಿನ ಶ್ರೇಷ್ಠ ಸಂಪತ್ತು ಅದು ಮಾನವನ ವ್ಯಕ್ತಿತ್ವದಲ್ಲಿ ಅಡಗಿದೆ ಎಂದು ಜೇಸಿ ವಾಣಿ ಹೇಳುತ್ತದೆ. ಅದೇ ರೀತಿ ಜಗತ್ತಿನಲ್ಲಿ ವ್ಯಕ್ತಿತ್ವ ವಿಕಸನವನ್ನು ಕಲಿಸುವಂತಾದ ಸಂಸ್ಥೆ ಅಂದರೆ ಅದು ಜೇಸಿ ಸಂಸ್ಥೆ ಯಾಗಿದೆ. ಜೇಸಿ ಸಂಸ್ಥೆಯು ಜನರಿಗೆ ತರಬೇತಿ ನೀಡುವ ಮುಖಾಂತರ ಭವಿಷ್ಯದ ನಾಯಕರುಗಳನ್ನು ಸೃಷ್ಟಿಸುತ್ತಿದೆ. ನನ್ನ ನಾಯಕತ್ವದಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲು ಜೇಸಿ ಪೂರ್ವಾಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರುಗಳು ತುಂಬಾ ಸಹಕಾರ ನೀಡಿದ್ದಾರೆ ಎಂದು ಹೇಳಿ ನೂತನ ತಂಡದ ಅಧ್ಯಕ್ಷ ಭಾಗ್ಯೇಶ್ ರೈಯವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಶುಭ ಹಾರೈಸಿದರು.
ನೂತನ ಸದಸ್ಯರ ಸೇರ್ಪಡೆ:
ನೂತನ ಸದಸ್ಯರಾಗಿ ಪ್ರವೀಣ್ ಶೆಟ್ಟಿ ಅಳಕೆಮಜಲು, ರಮ್ಯ ಭಾಗ್ಯೇಶ್ ರೈ, ಮಂಜುಶ್ರೀ, ಅವಿನಾಶ್ ಬಿ.ಎಸ್, ಅವಿನಾಶ್ ರೈ, ಲಕ್ಷ್ಮೀಶ ಕೆ, ಧನುಷ್ ಶೆಟ್ಟಿರವರುಗಳನ್ನು ಸಂಸ್ಥೆಗೆ ಸೇರ್ಪಡೆಗೊಳಿಸಲಾಯಿತು. ಪೂರ್ವಾಧ್ಯಕ್ಷ ಪುರುಷೋತ್ತಮ ಶೆಟ್ಟಿರವರು ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ಪೂರ್ವಾಧ್ಯಕ್ಷೆ ಸ್ವಾತಿ ಜೆ.ರೈಯವರು ನೂತನ ಸದಸ್ಯರನ್ನು ಪರಿಚಯಿಸಿದರು.
52ನೇ ಅಧ್ಯಕ್ಷರಿಗೆ ಬೀಳ್ಕೊಡುಗೆ:
52ನೇ ಅಧ್ಯಕ್ಷರಾಗಿ ಜೇಸಿಐ ಸಂಸ್ಥೆಯನ್ನು ಮುನ್ನಡೆಸಿ ನಿರ್ಗಮಿಸಿರುವ ಸುಹಾಸ್ ಮರಿಕೆರವರನ್ನು ಜೇಸಿ ಪೂರ್ವಾಧ್ಯಕ್ಷರುಗಳು ಹೂ ನೀಡಿ ಬೀಳ್ಕೊಟ್ಟರು. ನಿರ್ಗಮನ ಅಧ್ಯಕ್ಷರ ಕುರಿತು ಪೂರ್ವಾಧ್ಯಕ್ಷ ಶರತ್ ಕುಮಾರ್ ರೈಯವರು ಮಾತನಾಡಿದರು.
ಗೌರವ:
ಜೇಸಿಐ ನೂತನ ಅಧ್ಯಕ್ಷನಾಗಿದ್ದು, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಕಾರ್ಯದರ್ಶಿಯಾಗಿರುವ ಭಾಗ್ಯೇಶ್ ರೈಯವರು ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಅಧ್ಯಕ್ಷೆ ವೇದಾವತಿ ಎ., ಹಾಗೂ ತನ್ನ ಕುಟುಂಬದ ರೋಲ್ ಮಾಡೆಲ್ ಆಗಿರುವ ಚಿಕ್ಕಪ್ಪ ಎ.ಕೆ ಜಯರಾಮ ರೈರವರುಗಳನ್ನು ಭಾಗ್ಯೇಶ್ ರೈಯವರನ್ನು ಶಾಲು ಹೊದಿಸಿ ಗೌರವಿಸಲಾಯಿತು.
ಪದಪ್ರದಾನ:
2025ನೇ ಸಾಲಿನ ಪುತ್ತೂರು ಜೇಸಿಐ ಅಧ್ಯಕ್ಷರಾಗಿ ಭಾಗ್ಯೇಶ್ ರೈ, ನಿಕಟಪೂರ್ವ ಅಧ್ಯಕ್ಷರಾಗಿ ಮೋಹನ ಕೆ, ಉಪಾಧ್ಯಕ್ಷರುಗಳಾಗಿ ಜಿತೇಶ್ ರೈ(ನಿರ್ವಹಣೆ), ಶರತ್ ಶ್ರೀನಿವಾಸ್(ತರಬೇತಿ), ರಾಜಶೇಖರ್(ಕಾರ್ಯಕ್ರಮ), ವಿಘ್ನೇಶ್(ಬೆಳವಣಿಗೆ ಮತ್ತು ಅಭಿವೃದ್ಧಿ), ಸುಹಾಸ್ ರೈ(ಉದ್ಯಮ), ನಿರೋಶ್(ಸಾರ್ವಜನಿಕ ಸಂಪರ್ಕ & ಮಾರ್ಕೆಟಿಂಗ್), ಕಾರ್ಯದರ್ಶಿ ಮನೋಹರ್ ಪಾಟಾಳಿ, ಜೊತೆ ಕಾರ್ಯದರ್ಶಿ ರಂಜಿನಿ ಶೆಟ್ಟಿ, ಕೋಶಾಧಿಕಾರಿ ರುಕ್ಮಯ, ಮಹಿಳಾ ಜೇಸಿ ಸಂಯೋಜಕಿ ಆಶಾ ಮೋಹನ್, ಜೆಜೆಸಿ ವಿಂಗ್ ಚೇರ್‌ಪರ್ಸನ್ ಸ್ವಸ್ಥಿ ಶೆಟ್ಟಿ, ಜೆಜೆಸಿ ವಿಂಗ್ ಸಂಯೋಜಕ ಅಶ್ವಿನಿ ಕೆ, ನಿರ್ವಹಣೆ ನಿರ್ದೇಶಕರಾಗಿ ಪ್ರಜ್ವಲ್ ರೈ ಸೊರಕೆ, ಸುಪ್ರೀತ್ ಕೆ.ಸಿ, ಬೆಳವಣಿಗೆ ಮತ್ತು ಅಭಿವೃದ್ಧಿ ನಿರ್ದೇಶಕರಾಗಿ ಗೌರವ್ ಭಾರದ್ವಾಜ್, ವಿರೂಪಾಕ್ಷ, ತರಬೇತಿ ನಿರ್ದೇಶಕರಾಗಿ ಜಗನ್ನಾಥ್ ಅರಿಯಡ್ಕ, ಅನೂಪ್ ಕೆ.ಜೆ, ಕಾರ್ಯಕ್ರಮ ನಿರ್ದೇಶಕರಾಗಿ ಸಂದೀಪ್ ರೈ, ಶೋಭಾ ರೈ, ಉದ್ಯಮ ನಿರ್ದೆಶಕರಾಗಿ ಪ್ರಜ್ವಲ್ ಡಿ’ಸೋಜ, ಹರಿಗಣೇಶ್, ಸಾರ್ವಜನಿಕ ಸಂಪರ್ಕ & ಮಾರ್ಕೆಟಿಂಗ್ ನಿರ್ದೇಶಕರಾಗಿ ಸಾಯಿರಾಮ್ ಬಾಳಿಲ, ರಕ್ಷಿತ್, ನಳಪಾಕ ಸಂಯೋಜಕರಾಗಿ ಸತೀಶ್ ನಾಯ್ಕ್, ಶರತ್ ಆಳ್ವ, ಸಂದೇಶ್ ರೈ, ಚೇತನ್‌ರವರು ಪದಪ್ರದಾನವನ್ನು ಸ್ವೀಕರಿಸಿದರು.
ರಂಜಿನಿ ಶೆಟ್ಟಿ ಜೇಸಿ ವಾಣಿ ಓದಿದರು. ಪೂರ್ವಾಧ್ಯಕ್ಷರಾದ ವಿಶ್ವಪ್ರಸಾದ್ ಸೇಡಿಯಾಪು, ವಿಜಯಕುಮಾರ್ ಮೊಳೆಯಾರ್, ಶರತ್ ಕುಮಾರ್ ರೈರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಜೇಸಿಐ ನಿರ್ಗಮನ ಅಧ್ಯಕ್ಷ ಮೋಹನ ಕೆ.ರವರು ಅಧ್ಯಕ್ಷರ ವರದಿ ಮಂಡಿಸಿದರು. ಮುಖ್ಯ ಅತಿಥಿಗಳ ಪರಿಚಯವನ್ನು ವೇಣುಗೋಪಾಲ್, ಪಶುಪತಿ ಶರ್ಮ, ನೂತನ ಅಧ್ಯಕ್ಷರ ಪರಿಚಯವನ್ನು ಸುಪ್ರೀತ್ ಕೆ.ಸಿ, ನೂತನ ಕಾರ್ಯದರ್ಶಿ ಪರಿಚಯವನ್ನು ನಿರ್ಗಮನ ಕಾರ್ಯದರ್ಶಿ ಆಶಾ ಮೋಹನ್, ನೂತನ ಜೆಜೆಸಿ ಅಧ್ಯಕ್ಷರ ಪರಿಚಯವನ್ನು ನಿರ್ಗಮನ ಜೆಜೆಸಿ ಅಧ್ಯಕ್ಷೆ ವಿಷ್ಣುಪ್ರಿಯರವರು ಸಭೆಗೆ ಪರಿಚಯಿಸಿದರು. ಸನ್ಮಾನಿತರ ಪರಿಚಯವನ್ನು ಜಗನ್ನಾಥ್ ಅರಿಯಡ್ಕ ಹಾಗೂ ಆಶಾ ಮೋಹನ್‌ರವರು ನೀಡಿದರು. ನಿಕಟಪೂರ್ವ ಮಹಿಳಾ ಜೇಸಿ ವಿಭಾಗದ ಮುಖ್ಯಸ್ಥೆ ಶೋಭಾ ರೈ, ನೂತನ ಜೆಜೆಸಿ ಅಧ್ಯಕ್ಷೆ ಸ್ವಸ್ಥಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಿಕರ ಪರವಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ್ ರೈ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ನಿಕಟಪೂರ್ವ ಅಧ್ಯಕ್ಷ ಡಾ.ರಾಜೇಶ್ ಬೆಜ್ಜಂಗಳ ರವರು ಶುಭ ನುಡಿಯನ್ನಾಡಿದರು. ನೂತನ ಕಾರ್ಯದರ್ಶಿ ಮನೋಹರ್ ಪಾಟಾಳಿ ವಂದಿಸಿದರು.
ಭಾಗ್ಯೇಶ್..ನಾನೇ ಭಾಗ್ಯವಂತ..
ಅನೇಕ ಹೋರಾಟದ ಹಿನ್ನೆಲೆಯಲ್ಲಿ, ಸಂಘಟನೆಯಲ್ಲಿ ಸಮಾಜಮುಖಿ ಕೆಲಸ ಮಾಡುವ ಮೂಲಕ ಗುರುತಿಸಿಕೊಂಡಿದ್ದೇನೆ. ಡ್ರಗ್ಸ್ ಮುಕ್ತ ಪುತ್ತೂರು, ಸೈಬರ್ ಕ್ರೈಮ್ ಜಾಗೃತಿ ಬಗ್ಗೆ ಅಭಿಯಾನ ಹಮ್ಮಿಕೊಂಡು ಮುಂದಿನ ಜನಾಂಗವನ್ನು ಎಚ್ಚರಿಸುವ ಕಾರ್ಯವನ್ನು ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಜೊತೆಗೆ ಕೈಜೋಡಿಸುತ್ತಿದ್ದೇನೆ. ಲಯನ್ಸ್, ರೋಟರಿ, ಜೇಸಿ ಈ ಮೂರು ಸಂಘಟನೆಗಳೊಂದಿಗೆ ನನಗೆ ಒಡನಾಟವಿದ್ದು ಕೆಲಸ ಮಾಡಲು ಮುಖ್ಯವಾಗಿ ಮನಸ್ಸು ಬೇಕಾಗಿದೆ ಎಂದು ಅರಿತವ ನಾನು. ಇದೀಗ ಜೇಸಿಯ 54ನೇ ಅಧ್ಯಕ್ಷನಾಗಿ ಆಯ್ಕೆಯಾಗಿದ್ದು ಖುಶಿ ನೀಡಿದೆ, ನಿಮ್ಮ ನಂಬಿಕೆ ಉಳಿಸಿಕೊಳ್ಳುತ್ತೇನೆ. ಜೊತೆಗೆ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆರವರ ಸಮ್ಮುಖದಲ್ಲಿ ನಾನು ಪದಪ್ರದಾನ ಸ್ವೀಕರಿಸಿರುವುದು ಭಾಗ್ಯೇಶ್ ಭಾಗ್ಯವಂತನೇ ಎಂದು ಹೇಳಲು ಹೆಮ್ಮೆಯಾಗುತ್ತದೆ.
-ಭಾಗ್ಯೇಶ್ ರೈ, ನೂತನ ಅಧ್ಯಕ್ಷರು, ಜೇಸಿಐ
ರೂ.5 ಲಕ್ಷ ನಿಧಿ ಹಸ್ತಾಂತರ..
ಇತ್ತೀಚೆಗೆ ಅಗಲಿದ ಜೇಸಿಐ ಸದಸ್ಯ ಪ್ರಶಾಂತ್ ಪಲ್ಲತ್ತಡ್ಕರವರ ಕುಟುಂಬಕ್ಕೆ ಜೇಸಿಐ ಕಲ್ಯಾಣ ನಿಧಿಯಿಂದ ರೂ.5 ಲಕ್ಷ ಹಣವನ್ನು ದಿ.ಪ್ರಶಾಂತ್ ಪಲ್ಲತ್ತಡ್ಕರವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಸನ್ಮಾನ..
ಕರ್ನಾಟಕ ಲೋಕಾಯಕ್ತ ಇದರ ನಿವೃತ್ತ ಚೀಫ್ ಜಸ್ಟೀಸ್ ಎನ್.ಸಂತೋಷ್ ಹೆಗ್ಡೆ, ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ|ಆಂಟನಿ ಪ್ರಕಾಶ್ ಮೊಂತೇರೊ, ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಪುತ್ತೂರು ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ, ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯ ಡಾ.ಅಜಯ್, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪುತ್ತೂರು ನಗರಸಭಾ ಪೌರಾಯುಕ್ತ ಮಧು ಎಸ್.ಮನೋಹರ್, ಪುತ್ತೂರು ಜೆಸಿಐ ಸ್ಥಾಪಕ ಸದಸ್ಯ ಕೆ.ಆರ್ ಶೆಣೈ, ಜೆಸಿಐ ವಲಯ 15ರ ಉಪಾಧ್ಯಕ್ಷ ಸುಹಾಸ್ ಮರಿಕೆ, ಪೂರ್ವ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ನೂತನ ಅಧ್ಯಕ್ಷ ಭಾಗ್ಯೇಶ್ ರೈಯವರನ್ನು ಜೆಸಿಐಗೆ ಪರಿಚಯಿಸಿದ ಪೂರ್ವಾಧ್ಯಕ್ಷ ಶಶಿರಾಜ್ ರೈ, ನಿಕಟಪೂರ್ವ ಅಧ್ಯಕ್ಷ ಮೋಹನ ಕೆ, ಝೀ ಕನ್ನಡ ಸರಿಗಮಪ ಸೀಸನ್-20ರ ಫೈನಲಿಸ್ಟ್ ಸಮನ್ವಿ ರೈ, ಕಲರ್ಸ್ ಕನ್ನಡದ ಕನ್ನಡ ಕೋಗಿಲೆ ಅಂತಿಮ ಹಂತದ ಸ್ಪರ್ಧಿ ಅಪೇಕ್ಷಾ ಪೈ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌ರವರನ್ನು ಸನ್ಮಾನಿಸಲಾಯಿತು.