ಇಳಿಕೆಯತ್ತ ಸಾಗುತ್ತಿರುವ ನೇತ್ರಾವತಿಯ ನೀರಿನ ಹರಿವು

0

ಉಪ್ಪಿನಂಗಡಿ: ಈ ಬಾರಿ ಸುಧೀರ್ಘ ಮಳೆ ಸುರಿದ ಕಾರಣಕ್ಕೆ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳಲ್ಲಿ ನೀರಿನ ಹರಿವು ಡಿಸೆಂಬರ್ ತಿಂಗಳ ಮಧ್ಯದವರೆಗೆ ತೃಪ್ತಿದಾಯಕವಾಗಿದ್ದರೆ, ಈಗ ಇಳಿಕೆಯತ್ತ ಸಾಗಿದೆ. ಮಳೆ ಸುರಿಯುವ ಸಾಧ್ಯತೆಯ ಬಗ್ಗೆ ಮಾಹಿತಿಯಿರುವುದರಿಂದ ಬಿಳಿಯೂರಿನಲ್ಲಿ ನೇತ್ರಾವತಿ ನದಿಗೆ ಕಟ್ಟಲಾದ ಅಣೆಕಟ್ಟಿಗೆ ಗೇಟು ಅಳವಡಿಸುವ ಕಾರ್ಯವೂ ವಿಳಂಬವಾಗಿದೆ.
ಡಿಸೆಂಬರ್ ತಿಂಗಳ ಮಧ್ಯದ ವರೆಗೂ ಮಳೆ ಸುರಿಯುತ್ತಿದ್ದ ಕಾರಣ ನದಿಗಳೆರಡರಲ್ಲೂ ನೀರಿನ ಹರಿವು ಹೆಚ್ಚಿತ್ತು. ಈ ಕಾರಣಕ್ಕೆ ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ಬಿಳಿಯೂರು ಅಣೆಕಟ್ಟಿಗೆ ಗೇಟು ಅಳವಡಿಸಬೇಕಾದ ಪ್ರಕ್ರಿಯೆಯನ್ನು ಮುಂದೂಡಲಾಗುತ್ತಿತ್ತು. ಇದೀಗ ನದಿಯಲ್ಲಿ ನೀರಿನ ಪ್ರಮಾಣ ಇಳಿಕೆ ಕಾಣಲಾರಂಭಿಸಿದ್ದು, ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಅಣೆಕಟ್ಟಿಗೆ ಗೇಟು ಅಳವಡಿಸಿ ನೀರು ಸಂಗ್ರಹಿಸುವ ಕಾರ್ಯಕ್ಕೆ ಸಣ್ಣ ನಿರಾವರಿ ಇಲಾಖೆ ಮುಂದಾಗಲಿದೆ.


ಈ ಮಧ್ಯೆ ಮತ್ತೆ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಕಾಣಿಸಿಕೊಂಡು ಮಳೆ ಸುರಿಯುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆಯು ಮಾಹಿತಿ ನೀಡಿದ್ದು, ಮಳೆ ಸುರಿಯತೊಡಗಿದರೆ ಅಣೆಕಟ್ಟಿಗೆ ಗೇಟು ಅಳವಡಿಸುವ ಕಾರ್ಯದಲ್ಲಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಶಿವಪ್ರಸನ್ನ, ನದಿಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗುತ್ತಿದ್ದು, ಯಾವುದೇ ಸಮಯದಲ್ಲಿ ಗೇಟು ಅಳವಡಿಸುವ ಬಗ್ಗೆ ನಿರ್ಧಾರ ತಳೆಯಲಾಗುವುದು. ಮಳೆ ಸುರಿಯದೇ ಇದ್ದರೆ, ಡಿಸೆಂಬರ್ ಕೊನೆಯ ವಾರವಾಗಿರುವ ಈ ವಾರದಲ್ಲೇ ಅಣೆಕಟ್ಟಿಗೆ ಗೇಟು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here