ಆಟೋರಿಕ್ಷಾ ಚಾಲಕರು ಪುತ್ತೂರಿನ ನರನಾಡಿಗಳು-ಅಶೋಕ್ ಕುಮಾರ್ ರೈ
*ರಿಕ್ಷಾ ಚಾಲಕರಿಗೂ ಪೊಲೀಸರಿಗೂ ಅವಿನಾಭಾವ ಸಂಬಂಧ-ಉದಯರವಿ
*ರಿಕ್ಷಾ ಚಾಲಕರಲ್ಲಿ ಯಾವುದೇ ಕೀಳು ಭಾವನೆ ಬೇಡ-ಆಂಜನೇಯ ರೆಡ್ಡಿ
*ಸಂಘ ಸ್ನೇಹದ ಕಡಲಾಗಿ ಸ್ನೇಹದ ಸಂಗಮವಾಗಲಿ-ಸುಭಾಸ್ ರೈ
*ರಿಕ್ಷಾ ಚಾಲಕರು ಸ್ವಾವಲಂಬಿ ಜೀವನ ನಡೆಸುವವರು-ಜಗದೀಶ್ ಶೆಟ್ಟಿ
ಪುತ್ತೂರು: ಪುತ್ತೂರು ಸ್ನೇಹಸಂಗಮ ಆಟೋರಿಕ್ಷಾ ಚಾಲಕ ಮಾಲಕರ ಸಂಘದ 27ನೇ ವರ್ಷದ ವಾರ್ಷಿಕ ಮಹಾಸಭೆ ಡಿ.28ರಂದು ಟೌನ್‌ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಆಟೋರಿಕ್ಷಾ ಚಾಲಕರು ಪುತ್ತೂರಿನ ನರನಾಡಿಗಳು. ರಿಕ್ಷಾ ಚಾಲಕರಿಗೆ ಜೀವನ ನಿರ್ವಹಣೆ ಕಷ್ಟ. ಪ್ರತಿದಿನ ಕಷ್ಟಪಟ್ಟು ದುಡಿದು ಜೀವನ ನಿರ್ವಹಿಸಬೇಕಾಗುತ್ತದೆ. ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ನನ್ನ ಅನುದಾನದಲ್ಲಿ ರಿಕ್ಷಾ ತಂಗುದಾಣ ನಿರ್ಮಿಸಿಕೊಟ್ಟಿದ್ದೇನೆ. ಡವರಿಗಾಗಿ ಕಾಂಗ್ರೆಸ್ ಸರಕಾರ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಇದರಿಂದ ರಾಜ್ಯದ ಬಡಕುಟುಂಬಗಳು ಕಷ್ಟಗಳಿಂದ ದೂರವಾಗಿದೆ. ರಿಕ್ಷಾ ಚಾಲಕ ಮಾಲಕರು ತಮ್ಮ ಮಕ್ಕಳಿಗೆ ಒಳ್ಳೆಯ ವಿಧ್ಯಾಭ್ಯಾಸ ನೀಡಬೇಕು ಎಂದು ಹೇಳಿದ ಅವರು ಸಂಘದ ಮೂಲಕ ಸಾಧಕರನ್ನು ಗುರುತಿಸು ಕೆಲಸ ಮಾಡಿದ್ದೀರಿ. ಇದು ಉತ್ತಮವಾದ ಕೆಲಸ. ಪುತ್ತೂರಿನ ಅಭಿವೃದ್ಧಿಗೆ ಕೆಲಸ ಮಾಡೋಣ ಎಂದರು.
ಮುಖ್ಯ ಅತಿಥಿ ಪುತ್ತೂರು ನಗರ ಸಂಚಾರಿ ಪೊಲೀಸ್ ಠಾಣೆಯ ಸಂಚಾರಿ ಉಪನಿರೀಕ್ಷಕ ಉದಯರವಿ ಮಾತನಾಡಿ ರಿಕ್ಷಾ ಚಾಲಕರಿಗೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಅವಿನಾಭಾವ ಸಂಬಂಧ ಇದೆ. ಪೊಲೀಸರಿಗೆ ತಮ್ಮ ಕರ್ತವ್ಯದಲ್ಲಿ ಹಲವು ವಿಧದಲ್ಲಿ ಸಹಕಾರಿಯಾಗುವವರು ರಿಕ್ಷಾ ಚಾಲಕರು. ನಿಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಬೇಕು. ರಿಕ್ಷಾ ಚಾಲಕರು ಸುಗಮ ಸಂಚಾರಕ್ಕೆ ಸಹಕಾರ ನೀಡುತ್ತೀರಿ ಅದೇರೀತಿ ಸುಗಮ ಸಂಚಾರಕ್ಕೆ ತೊಡಕನ್ನೂ ಉಂಟು ಮಾಡುತ್ತೀರಿ. ಅನುಭವಿ ಚಾಲಕರಿಂದ ಯಾವುದೇ ತೊಡಕು ಉಂಟಾಗುವುದಿಲ್ಲ ಎಂದು ಹೇಳಿದ ಅವರು ತೊಡಕುಂಟುಮಾಡುವ ರಿಕ್ಷಾ ಚಾಲಕರಿಗೆ ಸಂಚಾರ ನಿಯಮಗಳ ಮಾಹಿತಿ ತಿಳಿಸಿದರು.
ಪುತ್ತೂರು ನಗರಠಾಣೆಯ ಉಪನಿರೀಕ್ಷಕ ಆಂಜನೇಯ ರೆಡ್ಡಿ ಮಾತನಾಡಿ ರಿಕ್ಷಾ ಚಾಲಕರು ಸಮಾಜದಲ್ಲಿ ದುಡಿದು ತಿನ್ನುವವರು. ಸಮಾಜದ ಉತ್ತಮ ಚೇತನಗಳನ್ನು ಮೇಲಕ್ಕೆತ್ತವುದು ಉತ್ತಮ ಕೆಲಸ. ಸಭೆಯಲ್ಲಿ ಸಾಧಕರಿಗೆ ಸನ್ಮಾನ ಮಾಡಿರುವುದು ಕಾರ್ಯಕ್ರಮದ ಶ್ರೇಷ್ಠತೆ, ಉತ್ಕೃಷ್ಠತೆಯನ್ನು ತಿಳಿಸುತ್ತದೆ ಎಂದರು. ರಿಕ್ಷಾ ಚಾಲಕರಲ್ಲಿ ಶೇ.95ಷ್ಟು ಚಾಲಕರು ಸಂಚಾರಿ ನಿಯಮ ಪಾಲಿಸುತ್ತೀರಿ. ಶೇ.5ರಷ್ಟು ಮಂದಿ ಸಂಚಾರ ನಿಯಮ ಉಲ್ಲಂಘಿಸುವವರಿದ್ದಾರೆ. ನಾನು ಬದುಕಬೇಕು. ಇನ್ನೊಬ್ಬರನ್ನು ಬದುಕಿಸುವ ಕೆಲಸ ಮಾಡಬೇಕು. ನಿಮ್ಮಲ್ಲಿ ಯಾವುದೇ ಕೀಳು ಭಾವನೆ ಬೇಡ. ಅಟೋರಿಕ್ಷಾ ನಿಮ್ಮ ರಕ್ಷಣೆ ಮಾಡುವ ದೇವರಾಗಿದೆ. ಸದು ನಿಮ್ಮ ಆಸ್ತಿ. ನಿಮ್ಮ ಸಂಸಾರ ನಡೆಸುವ ಶಕ್ತಿಯಾಗಿದೆ ಎಂದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪ್ರಗತಿಪರ ಕೃಷಿಕ ಸುಭಾಸ್ ರೈ ಕಡಮಜಲು ಮಾತನಾಡಿ ಇವತ್ತು, ಸನ್ಮಾನ, ಮಾಹಿತಿ, ಸಮವಸ್ತ್ರ ವಿತರಣೆಯಂತಹ ತ್ರಿಸ್ತರದ ಕಾರ್ಯಕ್ರಮ ನಡೆದಿದೆ. ಸಮಚಿತ್ತವಾದ ಕೆಲಸ ಮಾಡುವವರಿಗೆ ಸಮವಸ್ತ್ರ ಬೇಕಾಗಿದೆ. ನಿಮ್ಮ ಸಂಘವು ಸ್ನೇಹದ ಕಡಲಾಗಿ ಸ್ನೇಹದ ಸಂಗಮವಾಗಲಿ ಎಂದರು.
ಸಂಘದ ಕಾನೂನು ಸಲಹೆಗಾರರಾದ ವಕೀಲೆ ಹರಿಣಾಕ್ಷಿ ಜೆ.ಶೆಟ್ಟಿ ಮಾತನಾಡಿ ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಗೌರವಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿ ರಿಕ್ಷಾ ಚಾಲಕರು ಸ್ವಾಭಿಮಾನಿಗಳು. ಸ್ವಾಲಂಬಿ ಜೀವನ ನಡೆಸುವವರು. ಅನಾಥರಿಗೆ ಸಹಾಯ ಮಾಡುವ ಗುಣ ರಿಕ್ಷಾ ಚಾಲಕರಲ್ಲಿದೆ ಎಂದರು. ರಿಕ್ಷಾದಲ್ಲಿ ಯಾವುದೇ ವಸ್ತು ಬಿಟ್ಟು ಹೋದರೂ ಅದನ್ನು ವಾರೀಸುದಾರರಿಗೆ ಪ್ರಾಮಾಣಿಕವಾಗಿ ಹಿಂತಿರುಗಿಸುವ ಗುಣ ನಿಮ್ಮಲ್ಲಿದೆ ಎಂದರು. ಮಹಾಸಭೆಯಲ್ಲಿ ಎಲ್ಲಾ ಸದಸ್ಯರು ಭಾಗವಹಿಸಬೇಕು. ಇದಕ್ಕಾಗಿ ವರ್ಷದಲ್ಲಿ ಒಮ್ಮೆ ಎರಡು ಗಂಟೆ ಸಮಯ ಮೀಸಲಿಡಬೇಕು ಎಂದು ಹೇಳಿದರು.
ಸಾಧಕರಿಗೆ ಸನ್ಮಾನ: ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಹಾಗೂ ಇತರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸುಭಾಷ್ ರೈ ಕಡಮಜಲು ಹಾಗೂ ಹರೀಶ್ ಭಟ್ ಕೇಪುಳುರವರನ್ನು ಶಾಲು, ಹಾರ, ಸ್ಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಸಂಘದ ಸದಸ್ಯ ಮಕ್ಕಳಾದ ಪಿಯುಸಿಯಲ್ಲಿ ಶೇ.93 ಅಂಕ ಗಳಿಸಿದ ಚಾರ್ಲ್ಸ್‌ಡಿಸೋಜ ಮತ್ತು ಮೆಗ್‌ಡೆಲಿನೆ ಡಿಸೋಜ ದಂಪತಿಯ ಪುತ್ರಿ ಸಂತ ಫಿಲೋಮಿನಾ ಪ.ಪೂ.ಕಾಲೇಜಿನ ಪ್ರೀಮ ಡಿಸೋಜ, ಎಸ್‌ಎಸ್‌ಎಲ್‌ಸಿಯಲ್ಲಿ ಶೇ.98 ಅಂಕ ಹಾಗೂ ಉತ್ತರ ಜಿಗಿತ, ಎತ್ತರ ಜಿಗಿತದಲ್ಲಿ ಬಹುಮಾನ ಪಡೆದ ಜಗದೀಶ್ ಶೆಟ್ಟಿ ಮತ್ತು ಹರಿಣಾಕ್ಷಿ ಜೆ.ಶೆಟ್ಟಿ ದಂಪತಿ ಪುತ್ರಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಮೃದ್ಧಿ ಜೆ.ಶೆಟ್ಟಿ, ಎಸ್‌ಎಸ್‌ಎಲ್‌ಸಿಯಲ್ಲಿ ಶೇ.91 ಅಂಕ ಪಡೆದ ರಾಷ್ಟ್ರಮಟ್ಟದಲ್ಲಿ ವಿಜ್ಞಾನ ವಿಭಾಗದ ಇನ್‌ಸ್ಪೈರ್ ಅವಾರ್ಡ್ ಪಡೆದ ಚನಿಯಪ್ಪ ನಾಯ್ಕ ಮತ್ತು ಎಸ್.ಗೀತಾ ದಂಪತಿ ಪುತ್ರಿ, ಉಪ್ಪಳಿಗೆ ಸರಕಾರಿ ಪ್ರೌಢಶಾಲೆಯ ಅಜಿತ್ ಸಿ., ಎಸ್‌ಎಸ್‌ಎಲ್‌ಸಿಯಲ್ಲಿ ಶೇ.91 ಅಂಕ ಪಡೆದ ಹರೀಶ್ ಕುಮಾರ್ ಮತ್ತು ಸುಮಿತ್ರ ಕೆ. ದಂಪತಿ ಪುತ್ರಿ, ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸುಹನಿ ಹರೀಶ್, ಜಿಲ್ಲಾಮಟ್ಟದ ಕ್ರಿಕೆಟ್, ತಾಲೂಕು ಮಟ್ಟದ ಶಾಟ್‌ಪುಟ್‌ನಲ್ಲಿ ಸಾಧನೆ ಮಾಡಿದ ಇಸ್ಮಾಯಿಲ್ ಮತ್ತು ಕೆ.ಎಂ.ಆಯಿಷಾ ದಂಪತಿ ಪುತ್ರ, ಹಾರಾಡಿ ಶಾಲೆಯ ಮಹಮ್ಮದ್ ಅಬ್ನಾಜ್‌ರವರನ್ನು ಶಾಲು, ಹಾರ, ಸ್ಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.
ಸಮವಸ್ತ್ರ ವಿತರಣೆ: ಸಂಘದ ಸದಸ್ಯ ಚಾಲಕ ಮಾಲಕರಿಗೆ ಸಮವಸ್ತ್ರ ವಿತರಿಸಲಾಯಿತು. ಪುತ್ತೂರು ರಾಧಾಸ್ ಜವಳಿ ಮಳಿಗೆ ಮತ್ತು ಬೊಳುವಾರಿನ ಸ್ನೇಹ ಸಿಲ್ಕ್ಸ್‌ನವರು ನೀಡಿದ ಸಮವಸ್ತ್ರವನ್ನು ಗಣ್ಯರು ಸಾಂಕೇತಿಕವಾಗಿ ವಿತರಿಸಿದರು.
ರಾಧಾಸ್ ಮಾಲಕ ಪ್ರಥಮ್ ಕಾಮತ್, ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯ ಭಾರತಿ, ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ ಸಿಟಿಗುಡ್ಡೆ, ಪಾಕತಜ್ಞ ಹರೀಶ್ ಭಟ್ ಕೇಪುಳು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮೃದ್ಧಿ ಜೆ.ಶೆಟ್ಟಿ ತಂಡ ಪ್ರಾರ್ಥಿಸಿದರು. ಸಂಘದ ಗೌರವ ಸಲಹೆಗಾರ ಜೋಕಿಂ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕಾರ್ಯಾದ್ಯಕ್ಷ ಚನಿಯಪ್ಪ ನಾಯ್ಕ ವಾರ್ಷಿಕ ವರದಿ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ಹರೀಶ್ ಕುಮಾರ್ ಸ್ವಾಗತಿಸಿ ಅಧ್ಯಕ್ಷ ಇಸ್ಮಾಯಿಲ್ ವಂದಿಸಿದರು. ಸಂಘದ ಉಪಾಧ್ಯಕ್ಷ ತಾರಾನಾಥ ಗೌಡ, ಖಜಾಂಜಿ ಸಿಲ್ವೆಸ್ಟರ್ ಡಿಸೋಜಾ, ಸಂಚಾಲಕ ಅರವಿಂದ ಗೌಡ ಪೆರಿಗೇರಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳ ಘೋಷಣೆ, ಅಧಿಕಾರ ಸ್ವೀಕಾರ
2025ನೇ ಸಾಲಿನ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು ಪದಾಧಿಕಾರಿಗಳ ಹೆಸರನ್ನು ಘೋಷಣೆ ಮಾಡಲಾಯಿತು. ನೂತನ ಪದಾಧಿಕಾರಿಗಳಿಗೆ ನಿಕಟಪೂರ್ವ ಪದಾಧಿಕಾರಿಗಳು ಸಂಘದ ಪುಸ್ತಕ ನೀಡಿ ಅಧಿಕಾರ ಹಸ್ತಾಂತರಿಸಿದರು.