ಪುತ್ತೂರು: ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು ಇದರ ಆಡಳಿತ ಮಂಡಳಿಯ 13 ನಿರ್ದೇಶಕರ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ಪುತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಹಕಾರಿ ಕ್ಷೇತ್ರದಿಂದ ಪುತ್ತೂರು ಲ್ಯಾಂಪ್ಸ್ ಸೊಸೈಟಿ ನಿರ್ದೇಶಕ ಮಂಜುನಾಥ ಎನ್.ಎಸ್.ರವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಚುನಾವಣಾ ಅಧಿಕಾರಿ ಸುಧಿರ್ ಕುಮಾರ್ ಕೆ.ರವರು ಆಯ್ಕೆ ಪ್ರಕ್ರಿಯೆ ನಡೆಸಿ ನಿರ್ದೇಶಕರ ಹೆಸರನ್ನು ಘೋಷಣೆ ಮಾಡಿದ್ದಾರೆ.
ದ.ಕ.ಜಿಲ್ಲಾ ಸಹಕಾರಿ ಯೂನಿಯನ್ನ ಮುಂದಿನ 5 ವರ್ಷದ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದ್ದು ಜ.4ರಂದು ಚುನಾವಣೆ ಘೋಷಣೆಯಾಗಿತ್ತು. ಯೂನಿಯನ್ನ 13 ನಿರ್ದೇಶಕರ ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿದ್ದು ಇದೀಗ ಎಲ್ಲಾ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ. ಮಂಗಳೂರು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಮಂಗಳೂರಿನ ನೀಲಯ ಎಂ.ಅಗರಿ, ಬಂಟ್ವಾಳ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಬಂಟ್ವಾಳದ ಬಿ.ಪದ್ಮಶೇಖರ ಜೈನ್, ಪುತ್ತೂರು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಶಶಿಕುಮಾರ್ ರೈ ಬಾಲ್ಯೊಟ್ಟು, ಸುಳ್ಯ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ನೆಲ್ಲೂರು ಕೆಮ್ರಾಜೆಯ ವಿಷ್ಣು ಭಟ್, ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಸತೀಶ್ ಕೆ., ಮಂಗಳೂರು ತಾಲೂಕಿನ ಮೂಡಬಿದ್ರೆ-ಮೂಲ್ಕಿ ಫಿರ್ಕಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರದಿಂದ ಮೂಡಬಿದ್ರೆಯ ಜೊಯ್ಲಸ್ ವಿಲ್ರೆಡ್ ಡಿಸೋಜ, ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕ್ಷೇತ್ರದಿಂದ ಸುಧಾಕರ ಪಿ.ಶೆಟ್ಟಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಹಕಾರಿ ಸಂಘಗಳ ಕ್ಷೇತ್ರದಿಂದ ಮಂಜುನಾಥ ಎನ್.ಎಸ್., ಮಹಿಳಾ ಸಹಕಾರಿ ಸಂಘಗಳ ಕ್ಷೇತ್ರದಿಂದ ಬಂಟ್ವಾಳದ ಸವಿತಾ ಎನ್.ಶೆಟ್ಟಿ, ಪಟ್ಟಣ ಸಹಕಾರಿ ಬ್ಯಾಂಕ್ ಮತ್ತು ಪತ್ತಿನ ಸಹಕಾರಿ ಸಂಘಗಳ ಕ್ಷೇತ್ರದಿಂದ ಡಾ|ಎಸ್.ಆರ್.ಹರೀಶ್ ಆಚಾರ್ಯ, ಮೀನುಗಾರಿಕಾ ಸಹಕಾರ ಸಂಘಗಳ ಮತ್ತು ಕೈಗಾರಿಕಾ ಸಹಕಾರಿ ಸಂಘಗಳ ಕ್ಷೇತ್ರದಿಂದ ಕೆ.ಸಂಜೀವ ಪೂಜಾರಿ, ಜಿಲ್ಲೆಯ ಮಾರಾಟ ಸಹಕಾರಿ ಸಂಘಗಳ ಮತ್ತು ಕೃಷಿ ಗ್ರಾಮೀಣಾಭಿವೃದ್ಧಿ ಸಹಕಾರಿ ಬ್ಯಾಂಕುಗಳ ಕ್ಷೇತ್ರದಿಂದ ಪ್ರವೀಣ್ ಗಿಲ್ಬರ್ಟ್ ಪಿಂಟೊ ಹಾಗೂ ಇತರ ಎಲ್ಲಾ ಸಹಕಾರ ಸಂಘಗಳ ಕ್ಷೇತ್ರದಿಂದ ಚಿತ್ತರಂಜನ್ ಬೋಳಾರ್ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶಶಿಕುಮಾರ್ ರೈ ಬಾಲ್ಯೊಟ್ಟು:
ಇರ್ದೆ ಗ್ರಾಮದ ಬಾಲ್ಯೊಟ್ಟು ನಿವಾಸಿಯಾಗಿರುವ ಶಶಿಕುಮಾರ್ ರೈರವರು ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕಿನ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ 8 ವರ್ಷ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷರಾಗಿ, ಇರ್ದೆ ಹಾಗೂ ಬೆಟ್ಟಂಪಾಡಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ, ಬೆಂದ್ರ್ತೀರ್ಥ ಅಭಿವೃದ್ಧಿ ಸಮಿತಿಯ ಸಂಚಾಲಕರಾಗಿ, ಪೇರ್ಲತ್ತಡ್ಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ, ಇರ್ದೆ ಶ್ರೀವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರರಾಗಿ, ನಿಡ್ಪಳ್ಳಿ ಶ್ರೀಶಾಂತಾದುರ್ಗಾ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕರಾಗಿ, ಸಾರ್ವಜನಿಕ ಶಾರದೋತ್ಸವ ಸಮಿತಿಯಲ್ಲಿ 23 ವರ್ಷ ಅಧ್ಯಕ್ಷರಾಗಿ, ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ, ಉಪ್ಪಿನಂಗಡಿ ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಸಂಚಾಲಕರಾಗಿ, ಪುತ್ತೂರು ತಾಲೂಕು ಯುವ ಬಂಟರ ಸಂಘದ ಸ್ಥಾಪನಾ ಸಮಿತಿ ಕೋಶಾಽಕಾರಿಯಾಗಿ, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಪುತ್ತೂರು ಸೌಹಾರ್ದ ಸಹಕಾರಿಯ ಉಪಾಧ್ಯಕ್ಷರಾಗಿ, ಪುತ್ತೂರು ಟಿ.ಎ.ಪಿ.ಎಂ.ಎಸ್.ನ ನಿರ್ದೇಶಕರಾಗಿ ಹಾಗೂ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಲ್ಲಿ ೩ನೇ ಬಾರಿಗೆ ನಿರ್ದೇಶಕರಾಗಿದ್ದಾರೆ.
ಮಂಜುನಾಥ ಎನ್.ಎಸ್.:
ಬೆಟ್ಟಂಪಾಡಿ ಗ್ರಾಮದ ಉಪ್ಪಳಿಗೆ ನಿವಾಸಿಯಾಗಿರುವ ಮಂಜುನಾಥ ಎನ್.ಎಸ್ರವರು ಎಪಿಎಂಸಿ ಉಪಾಧ್ಯಕ್ಷರಾಗಿ ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾದ ಉಪಾಧ್ಯಕ್ಷ, ಲ್ಯಾಂಪ್ಸ್ ಮಹಾಮಂಡಲದ ನಿರ್ದೇಶಕರಾಗಿ, ಪುತ್ತೂರು ಲ್ಯಾಂಪ್ಸ್ ಸಹಕಾರಿ ಸಂಘದ ಅಧ್ಯಕ್ಷರಾಗಿ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ ಪುತ್ತೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಬೆಟ್ಟಂಪಾಡಿ ಗ್ರಾ.ಪಂ ಸದಸ್ಯರಾಗಿ, ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಉಪ್ಪಳಿಗೆ ಸರಕಾರಿ ಪ್ರೌಢ ಶಾಲಾಭಿವೃದ್ಧಿ ಸಮಿತಿ, ಉಪ್ಪಳಿಗೆ ಪ್ರಾಥಮಿಕ ಶಾಲೆ ಸಮಿತಿ ಸೇರಿದಂತೆ ಹಲವು ಸಾಮಾಜಿಕ, ಧಾರ್ಮಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದು ಪ್ರಸ್ತುತ ಪುತ್ತೂರು ಲ್ಯಾಂಪ್ಸ್ ಸಹಕಾರಿ ಸಂಘದ ನಿರ್ದೇಶಕರಾಗಿದ್ದಾರೆ.