ಸುದ್ದಿ ಸಮೂಹ ಸಂಸ್ಥೆಯ ಪಿ.ಆರ್.ಓ., ಸುಳ್ಯ, ಪುತ್ತೂರು, ಬೆಳ್ತಂಗಡಿ ಪತ್ರಿಕೆ, ಚಾನೆಲ್‌ಗಳ ಕನ್ಸಲ್ಟೆಂಟ್ ಆಗಿ ರಾಘವ ಶರ್ಮ ನಿಡ್ಲೆ ನೇಮಕ

0

ಪುತ್ತೂರು: ಸುದ್ದಿ ಸಮೂಹ ಸಂಸ್ಥೆಯ ಪಬ್ಲಿಕ್ ರಿಲೇಷನ್ ಆಫೀಸರ್ ಆಗಿ ಮತ್ತು ಸುಳ್ಯ, ಪುತ್ತೂರು, ಬೆಳ್ತಂಗಡಿ ಪತ್ರಿಕೆ, ವೆಬ್‌ಸೈಟ್ ಹಾಗೂ ಚಾನೆಲ್‌ಗಳ ಕನ್ಸಲ್ಟೆಂಟ್ ಆಗಿ ರಾಘವ ಶರ್ಮ ನಿಡ್ಲೆ ನೇಮಕಗೊಂಡಿದ್ದಾರೆ. ಅವರು ಹೊಸ ವರುಷದ ಜನವರಿ 1ರಂದು ಬೆಳ್ತಂಗಡಿಯಲ್ಲಿ ಸೇವೆ ಪ್ರಾರಂಭಿಸಲಿದ್ದಾರೆ. ಚಾನೆಲ್ ಮತ್ತು ಪತ್ರಿಕೆಯನ್ನು ಹಾಗೂ ಸುದ್ದಿ ಸಮೂಹ ಸಂಸ್ಥೆಯ ಕಾರ್ಯವ್ಯಾಪ್ತಿಯನ್ನು ಜಿಲ್ಲೆಗೆ ವಿಸ್ತರಿಸುವ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.


ರಾಘವ ಶರ್ಮರವರ ಪರಿಚಯ:
ಅವರು ಮೂಲತಃ ಬೆಳ್ತಂಗಡಿ ತಾಲೂಕಿನ ನಿಡ್ಲೆಯವರು. 2007ರಲ್ಲಿ ಉಜಿರೆಯಲ್ಲಿ ಕಾಲೇಜು ಶಿಕ್ಷಣ ಪೂರ್ಣಗೊಳಿಸಿದ ಕೂಡಲೇ ‘ದ ಸಂಡೇ ಇಂಡಿಯನ್’ ಸುದ್ದಿ ಪತ್ರಿಕೆಗೆ ದೆಹಲಿ ವರದಿಗಾರರಾಗಿ ಸೇರಿ, ಸುಮಾರು ಮೂರೂವರೆ ವರ್ಷಗಳ ಕಾಲ ಕೆಲಸ ಮಾಡಿದ್ದರು. ಬಳಿಕ ಜನಶ್ರೀ ಕನ್ನಡ ಸುದ್ದಿ ವಾಹಿನಿಯಲ್ಲಿ ಒಂದೂವರೆ ವರ್ಷಗಳ ಕಾಲ ದೆಹಲಿ ಬ್ಯುರೋ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು.


2012ರಿಂದ ಇಲ್ಲಿಯವರೆಗೆ ವಿಜಯವಾಣಿ ಪತ್ರಿಕೆಯ ದೆಹಲಿ ವಿಶೇಷ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ರಾಷ್ಟ್ರ ರಾಜಕೀಯ, ಕರ್ನಾಟಕಕ್ಕೆ ಸಂಬಂಧಿಸಿ ದೆಹಲಿಯಲ್ಲಿ ನಡೆಯುವ ವಿದ್ಯಮಾನ, ಸುಪ್ರೀಂಕೋರ್ಟ್ ಕಲಾಪ, ಲೋಕಸಭೆ ಚುನಾವಣೆ ಮತ್ತು ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳ ವೇಳೆ ಆ ರಾಜ್ಯಗಳಿಗೆ ಪ್ರವಾಸಗೈದು ಹಲವು ವಿಶೇಷ ವರದಿಗಳನ್ನು ಮಾಡಿದ ಹೆಗ್ಗಳಿಕೆ ರಾಘವ ಶರ್ಮ ಅವರದ್ದು. ದೆಹಲಿ ಹಾಗೂ ಉತ್ತರ ಭಾರತದ ವಿವಿಧ, ಮಹತ್ತರ ಘಟನಾವಳಿಗಳಿಗೆ ಸಾಕ್ಷಿಯಾಗಿ, ಅವರ ಹಲವು ಸ್ಪೆಷಲ್ ಸ್ಟೋರಿಗಳು ಪ್ರಕಟಗೊಂಡಿವೆ. ಚುನಾವಣೆಯ ಸಂದರ್ಭ ಪ್ರಧಾನಿ ಮೋದಿಯವರ ಕ್ಷೇತ್ರ ವಾರಣಾಸಿಯಲ್ಲಿ ಹಾಗೂ ಅಯೋಧ್ಯೆಯ ರಾಮಮಂದಿರ ಪ್ರತಿಷ್ಠಾಪನೆ ಸಮಯದಲ್ಲಿ ಆ ಕ್ಷೇತ್ರಗಳಲ್ಲಿ ವಿಶೇಷ ವರದಿ ಮಾಡಿದ್ದಾರೆ. ವಿಜಯವಾಣಿ ಪತ್ರಿಕೆ ಕೆಲಸದ ಜತೆಗೆ 2017ರಿಂದ 2023ರ ತನಕ ದಿಗ್ವಿಜಯ ನ್ಯೂಸ್ ಚಾನೆಲ್‌ಗೂ ಅವರು ದೆಹಲಿಯಿಂದ, ವಿವಿಧ ರಾಜ್ಯಗಳಿಂದ ವರದಿಗಾರಿಕೆ ಮಾಡಿದ್ದಾರೆ. ಹೀಗಾಗಿ, ಟಿವಿ ಚಾನೆಲ್ ವರದಿಗಾರಿಕೆಯೂ ಇವರಿಗೆ ಕರಗತ. ಒಟ್ಟು 17 ವರ್ಷಗಳ ಕಾಲ ದೆಹಲಿಯಲ್ಲಿ ಕೆಲಸ ಮಾಡಿ, ಈಗ ಕುಟುಂಬ ಸಮೇತ ತಮ್ಮ ಊರಿಗೆ ಬಂದಿದ್ದಾರೆ.

LEAVE A REPLY

Please enter your comment!
Please enter your name here