ಪುತ್ತೂರು: ಕುಶಲ ಹಾಸ್ಯ ಪ್ರಿಯರ ಸಂಘದ ಕಾರ್ಯಕ್ರಮವು ಅನುರಾಗ ವಠಾರದಲ್ಲಿ ಡಿ.28ರಂದು ನಡೆಯಿತು. ಹಿರಿಯ ವಕೀಲ ಪುರಂದರ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನವರಸಗಳಲ್ಲಿ ಹಾಸ್ಯರಸಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಹಾಸ್ಯವೆಂಬುದು ಒಂದು ಪೂರ್ಣ ರೂಪದ ರಸವಾಗಿದೆ. ಪ್ರಸಿದ್ಧ ಚುಟುಕು ಕವಿ ಡುಂಡಿರಾಜ್ ಅವರು ತಮ್ಮ ನವಿರು ಹಾಸ್ಯದ ಚುಟುಕುಗಳ ಮೂಲಕ ಅತ್ಯಂತ ಕಡಿಮೆ ಶಬ್ದಗಳಲ್ಲಿ ಗಂಭೀರವಾದ ವಿಷಯವನ್ನು ನೀರಸವಾಗದಂತೆ ಓದುಗರಿಗೆ ತಲಪಿಸುವುದರಲ್ಲಿ ಸಿದ್ಧಹಸ್ತರು ಎಂದರು.
ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಭಾಜನರಾದ ಹಿರಿಯ ಸಾಹಿತಿ, ಪತ್ರಕರ್ತ, ನಿವೃತ್ತ ಪ್ರೊ. ವಿ.ಬಿ. ಅರ್ತಿಕಜೆ,ಅವರ ಧರ್ಮಪತ್ನಿ ಭಾಗ್ಯಲಕ್ಷ್ಮಿ ಅರ್ತಿಕಜೆಯವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸುದಾಮ ಕೆದಿಲಾಯ, ಸಾವಿತ್ರಿ ಭಟ್ ಬಡೆಕ್ಕಿಲ, ಸುಬ್ರಹ್ಮಣ್ಯ ಶರ್ಮ, ಶಂಕರಿ ಎಂ. ಎಸ್. ಭಟ್, ಭಾಗ್ಯಲಕ್ಷ್ಮಿ ಅರ್ತಿಕಜೆ, ಶಂಕರಿ ಶರ್ಮ ಮುಂತಾದವರು ತಮ್ಮ ನಗೆ ಚಟಾಕಿಗಳಿಂದ ಸಭಿಕರನ್ನು ರಂಜಿಸಿದರು.
ಸಂಘದ ಅಧ್ಯಕ್ಷರಾದ ಸತ್ಯೇಶ್ ಕೆದಿಲಾಯರು ಪ್ರಾರ್ಥಿಸಿ, ಸ್ವಾಗತಿಸಿ, ಗಣ್ಯರನ್ನು ಪರಿಚಯಿಸಿದರು. ಉಪಾಧ್ಯಕ್ಷ ಸುಬ್ರಹ್ಮಣ್ಯ ಶರ್ಮ ಕಾರ್ಯಕ್ರಮ ನಿರ್ವಹಿಸಿ, ಧನ್ಯವಾದ ಸಮರ್ಪಿಸಿದರು.