ಉಪ್ಪಿನಂಗಡಿ: ನೇತ್ರಾವತಿ ನದಿಗೆ ಬಿಳಿಯೂರು ಎಂಬಲ್ಲಿ ನಿರ್ಮಿಸಲಾಗಿರುವ ಅಣೆಕಟ್ಟಿನ ಗೇಟುಗಳನ್ನು ಅಳವಡಿಸಿರುವುದರಿಂದ ನೇತ್ರಾವತಿ ನದಿಯಲ್ಲಿ ಹಿನ್ನೀರು ಪ್ರಮಾಣ ಹೆಚ್ಚಳವಾಗಿದೆ.
ಸಾಮಾನ್ಯವಾಗಿ ನವೆಂಬರ್ ತಿಂಗಳಾರಂಭದಲ್ಲಿ ಗೇಟು ಅಳವಡಿಸುವ ಯೋಜನೆ ಇತ್ತಾದರೂ ಈ ಬಾರಿ ಮಳೆಯು ದೀರ್ಘಾವಧಿ ಸುರಿದ ಕಾರಣ ಗೇಟು ಅಳವಡಿಸಲು ಕಾರ್ಯವನ್ನು ವಿಳಂಬಿಸಲಾಗಿತ್ತು. ಕಳೆದ ಮೂರು ದಿನಗಳಿಂದ ಗೇಟು ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಿ ಸೋಮವಾರ ಎಲ್ಲಾ ಗೇಟುಗಳನ್ನು ಪೂರ್ಣ ಪ್ರಮಾಣದಲ್ಲಿ ಹಾಕಲಾಯಿತು. ಇದರಿಂದಾಗಿ ನದಿಯಲ್ಲಿ ಹಿನ್ನೀರು ಸಂಗ್ರಹಿಸಲ್ಪಟ್ಟು ನದಿ ಪಾತ್ರದ ಕೃಷಿಕರಿಗೆ ಸಂತಸ ಮೂಡಿದೆ.
ಬಿಳಿಯೂರು ಅಣೆಕಟ್ಟು ಬಹು ಗ್ರಾಮ ಕುಡಿಯುವ ಯೋಜನೆಗೆ ಬಳಕೆಯಾಗುತ್ತಿದೆಯಾದರೂ , ಪ್ರಧಾನವಾಗಿ ಮಂಗಳೂರು ನಗರಕ್ಕೆ ನೀರು ಸರಬರಾಜುಗೊಳ್ಳಲಿರುವ ತುಂಬೆ ಅಣೆಕಟ್ಟಿಗೆ ಅಗತ್ಯಬಿದ್ದರೆ ನೀರು ಒದಗಿಸುವ ಹೆಚ್ಚುವರಿ ಜಲಾಶಯವಾಗಿ ಪರಿಗಣಿಸಲ್ಪಡುತ್ತಿದೆ.
ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳೆರಡರಲ್ಲೂ ನೀರು ಸಂಗ್ರಹಣೆಗೊಳ್ಳುವುದರಿಂದ ಪುತ್ತೂರು ನಗರಕ್ಕೆ ನೀರು ಸರಬರಾಜು ಮಾಡಲು ನಿರ್ಮಿಸಲಾದ ನೆಕ್ಕಿಲಾಡಿಯ ಅಣೆಕಟ್ಟಿನಲ್ಲಿ ಗೇಟು ಅಳವಡಿಸದೆ ನೀರು ಸಂಗ್ರಹಗೊಳ್ಳುವಂತಾಗಿದೆ. ಮಾತ್ರವಲ್ಲದೆ ನದಿ ಪಾತ್ರದ ಹಲವೆಡೆ ಬಾವಿ, ಕೊಳವೆ ಭಾವಿ, ಕೆರೆಗಳಲ್ಲಿ ಅಂತರ್ಜಲ ವೃದ್ಧಿಯಾಗಿ ಕೃಷಿ ಚಟುವಟಿಕೆಗಳಲ್ಲಿ ಚೇತರಿಕೆ ಕಾಣುವಂತಾಗಿದೆ.
ಒಟ್ಟಾರೆ ೨ ತಿಂಗಳು ವಿಳಂಬವಾಗಿ ನೀರು ಸಂಗ್ರಹಿಸುವ ಕಾರ್ಯಕ್ಕೆ ಮುಂದಾದ ಸಣ್ಣ ನೀರಾವರಿ ಇಲಾಖಾ ನಡೆಯಿಂದಾಗಿ ನಿರಾಸೆಗೆ ಸಿಲುಕಿದ್ದ ಕೃಷಿಕರಿಗೆ ೨೦೨೫ ನೇ ವರ್ಷಾರಂಭದ ಮುನ್ನಾ ದಿನವೇ ಸಂತಸ ಮೂಡುವಂತೆ ಹಿನ್ನೀರು ಸಂಗ್ರಹಣೆಗೊಳ್ಳಲಾರಂಭಿಸಿದೆ.