ನೂತನ ವ್ಯವಸ್ಥಾಪನಾ ಸಮಿತಿಯ ಪ್ರಥಮ ಸಭೆ

0

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಿತ್ಯ ಪರಮಾನ್ನ, ಮಹಾ ಅನ್ನದಾನ ಸೇವೆಯ ಹೊಸ ಯೋಜನೆ

ಇಂದಿನಿಂದ ನಿತ್ಯ ಅನ್ನಪ್ರಸಾದ ಜೊತೆ ಪಾಯಸ ಪ್ರಸಾದ

ಪುತ್ತೂರು:ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಿತ್ಯ ಪರಮಾನ್ನ ಅನ್ನದಾನ ಸೇವೆ ಮತ್ತು ಮಹಾ ಅನ್ನದಾನ ಸೇವಾ ಯೋಜನೆಯ ಮೂಲಕ ಭಕ್ತರಿಗೆ ಪರಮಾನ್ನ ಮತ್ತು ಅನ್ನದಾನ ಸೇವೆಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ.ಇದರ ಜೊತೆಗೆ ಜ.1ರಿಂದ ನಿತ್ಯ ಪಾಯಸ ಪ್ರಸಾದವೂ ಆರಂಭಗೊಳ್ಳಲಿದೆ.


ದೇವಳದ ನೂತನ ವ್ಯವಸ್ಥಾಪನಾ ಸಮಿತಿಯ ಸದಸ್ಯರ ಪ್ರಥಮ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರ ಅಧ್ಯಕ್ಷತೆಯಲ್ಲಿ ಡಿ.31ರಂದು ಸದಸ್ಯರ ಪ್ರಥಮ ಸಭೆ ನಡೆಯಿತು.ಸಭೆಯಲ್ಲಿ ದೇವಳದ ಇತರ ಅಭಿವೃದ್ದಿ ವಿಚಾರದಲ್ಲಿ ಚರ್ಚಿಸಲಾಯಿತು.ದೇವಳಕ್ಕೆ ಬಂದಿರುವ ವಿವಿಧ ದೂರು ಅರ್ಜಿಗಳನ್ನು ಪರಿಶೀಲಿಸಲಾಯಿತು.


ಪರಮಾನ್ನ ಅನ್ನದಾನ ಸೇವೆ, ಮಹಾ ಅನ್ನದಾನ ಸೇವೆ:
ಸಭೆಯ ಬಳಿಕ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ಮಾತನಾಡಿ, ಈಗಾಗಲೇ ಪ್ರತಿ ದಿನ ದೇವಳದಲ್ಲಿ ಅನ್ನದಾನ ನಡೆಯುತ್ತಿದೆ.ವಿದ್ಯಾರ್ಥಿಗಳು ಭಕ್ತರು ಸೇರಿದಂತೆ ಸುಮಾರು 2 ಸಾವಿರ ಮಂದಿ ಪ್ರತಿ ದಿನ ಮತ್ತು ಸೋಮವಾರ 3 ಸಾವಿರ ಮಂದಿ ಅನ್ನದಾನ ಸ್ವೀಕರಿಸುತ್ತಾರೆ.ಈ ನಿಟ್ಟಿನಲ್ಲಿ ಭಕ್ತರ ಆಶಯದಂತೆ ದೇವಳದಲ್ಲಿ ಪರಮಾನ್ನ ಅನ್ನದಾನ ಮತ್ತು ಮಹಾ ಅನ್ನದಾನ ಸೇವೆಯನ್ನು ಆರಂಭಿಸುವ ಕುರಿತು ನಿರ್ಣಯಿಸಲಾಗಿದೆ.ಶ್ರೀ ದೇವರಿಗೆ ಅರ್ಪಿಸಿದ ನೈವೇದ್ಯವನ್ನು ಒಂದು ದಿನದ ಪರಮಾನ್ನ ಅನ್ನದಾನ ಸೇವೆಯಾಗಿ ಮತ್ತು ಒಂದು ದಿನ ಮಹಾ ಅನ್ನದಾನ ಸೇವೆಯನ್ನು ಆರಂಭಿಸಲಾಗುವುದು.ಒಂದು ದಿನದ ಪರಮಾನ್ನ ಸೇವಾ ಶುಲ್ಕವಾಗಿ ರೂ.10 ಸಾವಿರ ಮತ್ತು ಒಂದು ದಿನದ ಮಹಾ ಅನ್ನದಾನ ಸೇವೆಗೆ ರೂ.25 ಸಾವಿರ ನಿಗದಿಪಡಿಸಲಾಗಿದೆ.ಭಕ್ತರು ದೇವಳದ ಸೇವಾ ಕೌಂಟರ್ ಅಥವಾ ಆಡಳಿತ ಕಚೇರಿ ಮೂಲಕ ಸೇವಾ ರಶೀದಿ ಪಡೆಯಬಹುದು.ಸಮಿತಿ ಸದಸ್ಯರೆಲ್ಲರೂ ಸೇವಾ ರಶೀದಿಯನ್ನು ಪಡೆದು ತಲಾ ರೂ. 1 ಲಕ್ಷವನ್ನು ಸೇವಾ ರಶೀದಿಯ ಮೂಲಕ ದೇವಳಕ್ಕೆ ಅರ್ಪಣೆ ಮಾಡಲಿದ್ದಾರೆ ಎಂದರು.ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ರೂ.25 ಸಾವಿರ ಪಾವತಿಸಿ ದೇವಳದ ಪ್ರಧಾನ ಅರ್ಚಕರ ಮೂಲಕ ಪ್ರಥಮ ಸೇವಾ ರಶೀದಿಯನ್ನು ಪಡೆದರು.ಸದಸ್ಯ ವಿನಯ ಸುವರ್ಣ ಅವರು ರೂ.10 ಸಾವಿರ ಪಾವತಿಸಿ ಪರಮಾನ್ನ ಸೇವಾ ರಶೀದಿ ಪಡೆದುಕೊಂಡರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ನಳಿನಿ ಪಿ ಶೆಟ್ಟಿ, ಸುಭಾಷ್ ರೈ ಬೆಳ್ಳಿಪ್ಪಾಡಿ, ದಿನೇಶ್ ಪಿ.ವಿ., ಈಶ್ವರ ಬೆಡೇಕರ್, ವಿನಯ ಸುವರ್ಣ, ಕೃಷ್ಣವೇಣಿ, ಪ್ರಧಾನ ಅರ್ಚಕರೂ ಆಗಿರುವ ವೇ.ಮೂ ವಸಂತ ಕೆದಿಲಾಯ ಸಭೆಯಲ್ಲಿ ಉಪಸ್ಥಿತರಿದ್ದರು.ಕಾರ್ಯನಿರ್ವಹಣಾಧಿಕಾರಿ ಕೆ.ವಿ ಶ್ರೀನಿವಾಸ್ ಸಭಾ ನಡಾವಳಿ ನಡೆಸಿದರು. ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.

ಸೇವೆ ಮಾಡಿಸಿದವರಿಗೆ ಸತ್ಯಧರ್ಮ ನಡೆಯಲ್ಲಿ ಪ್ರಾರ್ಥನೆ
ಪರಮಾನ್ನ ಮತ್ತು ಅನ್ನದಾನ ಸೇವೆ ಮಾಡಿಸಿದವರಿಗೆ ಶ್ರೀ ದೇವರ ಸತ್ಯಧರ್ಮ ನಡೆಯಲ್ಲಿ ವಿಶೇಷ ಪ್ರಾರ್ಥನೆ ಮಾಡಿ ಅವರಿಗೆ ಪ್ರಸಾದ ವಿತರಣೆ ಮಾಡಲಾಗುವುದು.ಹುಟ್ಟಿದ ಹಬ್ಬ, ವಿವಾಹ, ಹಿರಿಯರ ಆತ್ಮಕ್ಕೆ ಸದ್ಗತಿ ಸಹಿತ ಶುಭ ಕಾರ್ಯಗಳಿಗೆ ಅನ್ನದಾನ ಸೇವೆ ಮಾಡಿಸುವುದು ಸೂಕ್ತ-
ವೇ.ಮೂ ವಸಂತ ಕುಮಾರ ಕೆದಿಲಾಯ,
ಪ್ರಧಾನ ಅರ್ಚಕರು, ಸದಸ್ಯರು

ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿ ಸೋಮವಾರ ಅನ್ನಪ್ರಸಾದದ ಜೊತೆ ಪಾಯಸ ಪ್ರಸಾದ ವಿತರಣೆ ನಡೆಯುತ್ತಿದ್ದು, ಅದನ್ನು ಉಳಿದ ದಿನಗಳಿಗೂ ವಿಸ್ತರಿಸುವ ಕುರಿತು ಸಮಿತಿ ಸಭೆಯಲ್ಲಿ ನಿರ್ಣಯಿಸಲಾಗಿದೆ.ಭಕ್ತರ ಆಶಯದಂತೆ ಈ ಯೋಜನೆ ಜ.1ರಿಂದಲೇ ಆರಂಭಗೊಳ್ಳಲಿದೆ.ಭಕ್ತರು ಸೇವಾ ರೂಪದಲ್ಲಿ ಸಾಹಿತ್ಯಗಳನ್ನು ಒದಗಿಸಿದಲ್ಲಿ ಕೃತಜ್ಞತಾ ಪೂರ್ವವಾಗಿ ಸ್ವೀಕರಿಸಲಾಗುವುದು.ಅಕ್ಕಿ, ತೆಂಗಿನ ಕಾಯಿ, ಬೆಲ್ಲ, ಸಕ್ಕರೆ, ಕಡ್ಲೆಬೇಳೆ, ಗೋಧಿಕಡಿ, ಹೆಸ್ರುಬೇಳೆ, ಸಾಬಕ್ಕಿ, ತೊಗರಿಬೇಳೆ ಸಹಿತ ದಿನಸಿ ಸಾಮಾಗ್ರಿ ಹಾಗು ಬಾಳೆಕಾಯಿ, ತರಕಾರಿಗಳನ್ನು ಭಕ್ತರು ನೀಡಿ ಸಹಕರಿಸುವಂತೆ ವಿನಂತಿ-
ಈಶ್ವರ ಭಟ್ ಪಂಜಿಗುಡ್ಡೆ,
ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು

LEAVE A REPLY

Please enter your comment!
Please enter your name here