ಪುತ್ತೂರು: ಅಂತೂ ಇಂತೂ ಈ ಭಾಗದ ಜನರಿಗೆ ಈ ಒಂಟಿ ಸಲಗದ ಉಪದ್ರ ಮಾತ್ರ ತಪ್ಪಿದ್ದಲ್ಲ. ಕಳೆದ ಹಲವು ದಿನಗಳಿಂದ ಕೆಯ್ಯೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಈ ಗಜರಾಜ ವಾಕಿಂಗ್ ಮಾಡುತ್ತಲೇ ಇದ್ದಾನೆ. ಕಾಸರಗೋಡು ಆ ಭಾಗದಿಂದ ಬಂದಿದ್ದಾನೆ ಎನ್ನಲಾದ ಈ ಆನೆ ಒಂದೊಮ್ಮೆ ಕೊಳ್ತಿಗೆ ಭಾಗದಿಂದ ಹಿಡಿದು ಉಪ್ಪಿನಂಗಡಿ ತನಕ ಪ್ರಯಾಣ ಬೆಳೆಸಿತ್ತು. ಉಪ್ಪಿನಂಗಡಿಯ ಬೆಳ್ಳಿಪ್ಪಾಡಿ ಪ್ರದೇಶದಿಂದ ತನ್ನೊಂದಿಗೆ ಜೊತೆಗಾತಿ ಆನೆಯನ್ನು ಕರೆದುಕೊಂಡು ಬಂದ ದಾರಿಯಲ್ಲೇ ಮತ್ತೆ ಸಾಗಿತ್ತು. ಆ ಬಳಿಕ ಒಂದಷ್ಟು ಸಮಯ ಆನೆಯ ಸುದ್ದಿಯೇ ಇರಲಿಲ್ಲ. ಇದೀಗ ಕಳೆದ ಒಂದು ತಿಂಗಳಿನಿಂದ ಮತ್ತೆ ಅಲ್ಲಲ್ಲಿ ಸದ್ದು ಮಾಡುತ್ತಿದೆ. ಮೊನ್ನೆ ತಾನೆ ಪೆರ್ಲಂಪಾಡಿ ಭಾಗದಲ್ಲಿ ಕಂಡು ಬಂದ ಒಂಟಿ ಸಲಗ ಇಳಂತಾಜೆ, ದೇರ್ಲ, ಕೌಡಿಚ್ಚಾರು ಮತ್ತೆ ಮಣಿಕ್ಕರ, ಉಪ್ಪಳಿಗೆ, ಅರಿಯಡ್ಕ ಗ್ರಾಪಂ ವ್ಯಾಪ್ತಿಯ ಮಾಡ್ನೂರು ಇತ್ಯಾದಿ ಭಾಗಗಳಲ್ಲಿ ಹೆಜ್ಜೆ ಹಾಕಿತ್ತು. ಇದೀಗ ಮತ್ತೆ ಕೆಯ್ಯೂರು ಭಾಗಕ್ಕೆ ಬಂದಿದೆ.
ಜ.1 ರಂದು ಬೆಳಿಗ್ಗೆ ಕೆಯ್ಯೂರು ದೇವಸ್ಥಾನದ ಬಳಿ ಆನೆ ಇರುವುದನ್ನು ಸ್ಥಳೀಯರು ನೋಡಿದ್ದಾರೆ. ಇಳಂತಾಜೆ,ಎಟ್ಯಡ್ಕ,ಕೆಯ್ಯೂರು ಕೊರಗರ ಮಜಲು ಇತ್ಯಾದಿ ಪ್ರದೇಶಗಳಲ್ಲಿ ಆನೆ ಹೆಜ್ಜೆ ಹಾಕಿದೆ. ಮೋಹನ್ ರೈ, ವಿಠಲ ರೈ, ಗುಲಾಬಿ ಪೊಯ್ಯೊಳೆ, ಶ್ರೀನಿವಾಸ ಭಟ್ ಮತ್ತಿತರರ ಕೃಷಿ ತೋಟಗಳಿಗೆ ಹಾನಿ ಮಾಡಿದೆ.ಕೆಲವು ಕಡೆಗಳಲ್ಲಿ ಕೌಂಪೌಂಡ್ ಅನ್ನು ಬೀಳಿಸಿದೆ.
ಭಯದಲ್ಲಿ ಗ್ರಾಮಸ್ಥರು..!
ಕೆಯ್ಯೂರು ಗ್ರಾಪಂ ವ್ಯಾಪ್ತಿಯ ಕಣಿಯಾರು ಮಲೆ ಅರಣ್ಯ ಪ್ರದೇಶದ ಭಾಗದಲ್ಲಿರುವ ಇಳಂತಾಜೆ, ದೇರ್ಲ ಇತ್ಯಾದಿ ಭಾಗದ ಜನರಿಗೆ ಈಗ ಆನೆಯ ಭಯ ಆರಂಭವಾಗಿದೆ.ಬಹಳಷ್ಟು ನಿರ್ಜನ ಪ್ರದೇಶವಾಗಿರುವ ಈ ಭಾಗದಲ್ಲಿ ವಾಹನ ಸೌಕರ್ಯ ಕೂಡ ಸರಿಯಾಗಿ ಇಲ್ಲದೇ ಇರುವುದರಿಂದ ಜನರು ನಡೆದುಕೊಂಡೇ ಮನೆ ಸೇರಬೇಕಾಗಿದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳು ಕಣಿಯಾರು ಮಲೆ ಅರಣ್ಯ ಪ್ರದೇಶದಲ್ಲಿ ನಡೆದುಕೊಂಡೇ ಹೋಗಬೇಕಾಗಿರುವುದರಿಂದ ಹೆತ್ತವರಿಗೆ ಭಯ ಆರಂಭವಾಗಿದೆ. ಇದಲ್ಲದೆ ವಾಹನ ಸವಾರರೂ ಕೂಡ ರಾತ್ರಿ ಸಮಯದಲ್ಲಿ ಸಂಚರಿಸಲು ಭಯಪಡುತ್ತಿದ್ದಾರೆ.
ಅರಣ್ಯ ಇಲಾಖೆಯಿಂದ ಸ್ಪಂದನೆ
ಆನೆ ಇರುವ ಬಗ್ಗೆ ಅರಣ್ಯ ಇಲಾಖೆಯುವರಿಗೂ ಗ್ರಾಮಸ್ಥರು ಮಾಹಿತಿ ಕೊಟ್ಟಿದ್ದು ಈಗಾಗಲೇ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಇದಲ್ಲದೆ ಆನೆ ಇರುವ ಬಗ್ಗೆ ಮೈಕ್‌ನಲ್ಲಿ ಸೈರನ್ ಮಾಡಿಕೊಂಡು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದ್ದಾರೆ. ಯಾರೂ ಕೂಡ ಭಯ ಪಡುವ ಅಗತ್ಯವಿಲ್ಲ ಎಂದು ಗ್ರಾಮಸ್ಥರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ.
ಸೌಮ್ಯ ಸ್ವಭಾವದವನೇ ಈ ಗಜರಾಜ…!?
ಹೀಗೊಂದು ಮಾತು ಜನರಿಂದ ಕೇಳಿ ಬರುತ್ತಿದೆ. ಈ ಒಂಟಿ ಸಲಗ ಊರಿಗೆ ಕಾಲಿಟ್ಟ ದಿನದಿಂದ ಇಂದಿನ ತನಕವೂ ಎಲ್ಲಿಯೂ ಯಾರಿಗೂ ಒಂದಿಷ್ಟು ಹಾನಿಯಾಗಲಿ, ಭಯವನ್ನಾಗಲಿ ಮಾಡಲಿಲ್ಲ. ತನ್ನ ಹಸಿವು ನೀಗಿಸಲು ಒಂದಿಷ್ಟು ಕೃಷಿ ಹಾನಿ ಮಾಡಿದ್ದು ಬಿಟ್ಟರೆ ಮನುಷ್ಯನಿಗೆ ಯಾವುದೇ ತೊಂದರೆ ಮಾಡಿಲ್ಲ ಆದ್ದರಿಂದ ಇದೊಂದು ಸೌಮ್ಯ ಸ್ವಭಾವದ ಆನೆಯಾಗಿರುಬಹುದೇ ಎಂದು ಜನರಾಡಿಕೊಳ್ಳುತ್ತಿದ್ದಾರೆ. ಒಂದೊಮ್ಮೆ ಬಂದ ದಾರಿಯಲ್ಲೇ ಮತ್ತೆ ತನ್ನ ಸ್ವಸ್ಥಾನಕ್ಕೆ ಸೇರಿದ್ದು ಕೂಡ ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಹಾಗಾದರೆ ಈ ಆನೆ ಎಲ್ಲಿಂದ ಬಂದಿದೆ ಎಂಬುದೇ ಯಕ್ಷಪ್ರಶ್ನೆಯಾಗಿದೆ. ಹಸಿವಿಗಾಗಿ ಊರಿಂದ ಊರಿಗೆ ಅಲೆದಾಡುತ್ತಿರುವ ಈ ಪಾಪದ ಆನೆಯನ್ನು ಸರಕಾರ ಈ ಕೂಡಲೆ ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡಬೇಕಾಗಿದೆ. ಆನೆ ಎಷ್ಟೇ ಪಾಪವಿದ್ದರೂ ತನ್ನ ದೊಡ್ಡ ಹೊಟ್ಟೆಯನ್ನು ತುಂಬಿಸಿಕೊಳ್ಳಲು ಸಾಧ್ಯವಾಗದೆ ಇರುವ ಸಮಯದಲ್ಲಿ ಕೋಪಗೊಂಡರೆ ಆಶ್ಚರ್ಯವೇನಲ್ಲ? ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.