ವಿಟ್ಲ: ಸಂತೆ ರಸ್ತೆಯ ಎಲ್ಲೆಂದರಲ್ಲಿ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಿರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಯವರ ನೇತೃತ್ವದ ತಂಡ ತೆರಳಿ ಪರಿಶೀಲನೆ ನಡೆಸಿ ಎಚ್ಚರಿಕೆ ನೀಡಿದ ಘಟನೆ ನಡೆದಿದೆ.
ವಿಟ್ಲದ ಪುರಭವನ ರಸ್ತೆಯಲ್ಲಿ ಪ್ರತಿ ಮಂಗಳವಾರ ವಾರದ ಸಂತೆ ನಡೆಯುತ್ತಿದೆ. ಈ ರಸ್ತೆಯಲ್ಲಿ ಕೆಪಿಟಿಸಿಯಲ್ ಕೇಂದ್ರ, ಪೊಲೀಸ್ ವಸತಿಗೃಹ, ಬಿಲ್ಲವ ಸಮುದಾಯ ಭವನ, ವಿಟ್ಲ ವ್ಯವಸಾಯ ಸೇವಾ ಸಹಕರಿ ಸಂಘ ಹಾಗೂ ಜನ ವಸತಿ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ. ಸಂತೆದಿನ ವ್ಯಾಪಾರಿಗಳು ರಸ್ತೆಯಲ್ಲಿ ಸಾಮಾಗ್ರಿಗಳನ್ನು ಇಟ್ಟು ವ್ಯಾಪಾರ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಭಾರೀ ತೊಂದರೆ ಅನುಭವಿಸುತ್ತಿದ್ದರು.
ಈ ಬಗ್ಗೆ ಸ್ಥಳೀಯರಾದ ಸುರೇಶ್ ಬನಾರಿ, ಮಹಮ್ಮದ್ ಗಮಿ, ಪ್ರಭಾಕರ್, ಶಿವರಾಮ ಮೊದಲಾದವರು ಪಟ್ಟಣ ಪಂಚಾಯತ್ ಗೆ ತೆರಳಿ ಮನವಿ ಸಲ್ಲಿಸಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿದರು. ಕೂಡಲೇ ಕಾರ್ಯಪ್ರವೃತ್ತರಾದ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ನಾಯ್ತೋಟ್ಟು, ಮುಖ್ಯಾಧಿಕಾರಿ ಕರುಣಾಕರ ವಿ., ಸದಸ್ಯರಾದ ಜಯಂತ ಸಿ.ಎಚ್ ರವರ ನೇತೃತ್ವದ ತಂಡ ತೆರಳಿ ಪರಿಶೀಲನೆ ನಡೆಸಿ ರಸ್ತೆಯಲ್ಲಿದ್ದ ವಸ್ತುಗಳನ್ನು ತೆರವುಗೊಳಿಸುವಂತೆ ತಿಳಿಸಿ ಮುಂದೆ ಇದು ಮರುಕಳಿಸದಂತೆ ಎಚ್ಚರಿಕೆ ನೀಡಿದರು.
ಮುಂದಿನ ವಾರದಿಂದ ರಸ್ತೆಯ ಒಂದೇ ಭಾಗದಲ್ಲಿ ವ್ಯಾಪಾರಕ್ಕೆ ಅವಕಾಶ
ಮುಂದಿನ ವಾರದಿಂದ ರಸ್ತೆ ಒಂದು ಭಾಗದಲ್ಲಿ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲಾಗುವುದು. ಪುರಭವನ ಹಿಂಬದಿಯಲ್ಲಿ ಇರುವ ವಿಶಾಲವಾದ ಜಾಗವನ್ನು ತಕ್ಷಣವೇ ಸ್ವಚ್ಛಗೊಳಿಸಿ, ಮುಂದಿನ ವಾರದಿಂದ ಆ ಜಾಗದಲ್ಲಿ ವ್ಯಾಪಾರ ನಡೆಸುವಂತೆ ಕ್ರಮ ವಹಿಸಲಾಗುವುದು.
ಕರುಣಾಕರ ವಿ., ಮುಖ್ಯಾಧಿಕಾರಿ, ವಿಟ್ಲ ಪಟ್ಟಣ ಪಂಚಾಯತ್