ಉಪ್ಪಿನಂಗಡಿ: 34 ನೆಕ್ಕಿಲಾಡಿ- ಬೊಳುವಾರು ರಾಜ್ಯ ಹೆದ್ದಾರಿಯಲ್ಲಿ 34 ನೆಕ್ಕಿಲಾಡಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚತುಷ್ಪಥ ಹೆದ್ದಾರಿ ಕಾಮಗಾರಿಯು ನಿಧಾನ ಗತಿಯಲ್ಲಿ ಸಾಗುತ್ತಿದ್ದು, ಇದನ್ನು ಖಂಡಿಸಿ 34 ನೆಕ್ಕಿಲಾಡಿ ಬಿಜೆಪಿ ಶಕ್ತಿ ಕೇಂದ್ರವು ಜ.8ರಂದು ಆದರ್ಶನಗರದಲ್ಲಿ ರಸ್ತೆ ತಡೆ ನಡೆಸಿ ಉಗ್ರ ಪ್ರತಿಭಟನೆಗೆ ಮುಂದಾಗಿದೆ.
ಹೆದ್ದಾರಿ ಕಾಮಗಾರಿಯ ವಿಳಂಬವನ್ನು ಖಂಡಿಸಿ ಕಳೆದ ಡಿ.2ರಂದು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಆದರ್ಶನಗರದಲ್ಲಿ ರಸ್ತೆ ತಡೆ ನಡೆಸಿ ಸಾಂಕೇತಿಕ ಪ್ರತಿಭಟನೆ ನಡೆಸಲಾಗಿತ್ತು. ಆಗ ಸ್ಥಳಕ್ಕಾಗಮಿಸಿದ ಪಿಡಬ್ಲೂಡಿ ಇಲಾಖೆಯ ಎಂಜಿನಿಯರ್ 15 ದಿನದ ಗಡುವು ಕೇಳಿದ್ದರು. ಅದಕ್ಕೆ ಒಪ್ಪಿಕೊಂಡ ಪ್ರತಿಭಟನಕಾರರು ಪ್ರತಿಭಟನೆ ಹಿಂಪಡೆದಿದ್ದರು. ಆದರೆ ಬಳಿಕ ಮಳೆ ಬಂದ ಕಾರಣ ಅಂತಿಮ ಗಡುವು ಕಳೆದರೂ ನಾವು ಸುಮ್ಮನಿದ್ದೆವು. ಆದರೆ ಈಗ ಒಂದು ತಿಂಗಳು ಕಳೆದರೂ ಹೆದ್ದಾರಿಗೆ ಡಾಮರು ಹಾಕುವ ಪ್ರಕ್ರಿಯೆಯನ್ನು ನಡೆಸಿಲ್ಲ. ಆದ್ದರಿಂದ ಹೆದ್ದಾರಿ ಕಾಮಗಾರಿಯ ವಿಳಂಬ ಖಂಡಿಸಿ ಜ.8ರಂದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು 34 ನೆಕ್ಕಿಲಾಡಿ ಬಿಜೆಪಿ ಶಕ್ತಿ ಕೇಂದ್ರವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.