ಪುತ್ತೂರು:ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಕೊಕ್ಕಡದಲ್ಲಿ ಒಂದೂವರೆ ತಿಂಗಳ ಹಿಂದೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಮಹಮ್ಮದ್ ಇಕ್ಬಾಲ್ ಮತ್ತು ಮಹಮ್ಮದ್ ಶಹಬಾದ ಬಂಧಿತ ಆರೋಪಿಗಳು.
ಕೊಕ್ಕಡ ಪೇಟೆಯಲ್ಲಿ ಬಾಳೆಕಾಯಿ,ತೆಂಗಿನ ಕಾಯಿ ಮತ್ತು ಅಡಿಕೆ ಖರೀದಿ ಅಂಗಡಿ ಹೊಂದಿರುವ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಕುಂಡಡ್ಕ ನಿವಾಸಿ ಇಸುಬು ಎಂಬವರು ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದ್ದರು.ನ.15ರಂದು ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ಮಸೀದಿಗೆ ಹೋಗಲೆಂದು ತಾನು ಅಂಗಡಿ ಸಾಮಾನುಗಳನ್ನು ಒಳಗಡೆ ಇರಿಸಿದಾಗ ಬಂದ ಅಪರಿಚಿತ ವ್ಯಕ್ತಿಯೋರ್ವ ಅಂಗಡಿಗೆ ಬಂದು 450 ಬಾಳೆಹಣ್ಣು ಬೇಕೆಂದು ಕೇಳಿದ್ದ. ತಾನು ಅಂಗಡಿಯ ಒಳಗೆ ಹೋಗಿ ಬಾಳೆ ಹಣ್ಣು ತೂಕ ಮಾಡುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿ ಅಂಗಡಿಯಿಂದ ಹೊರ ಹೋಗಿ ವಾಹನ ತರುವುದಾಗಿ ತೆರಳಿದ್ದ.ಈ ಸಮಯ ತಾನು ಅಂಗಡಿಯ ಕ್ಯಾಶ್ ಕೌಂಟರ್ ನೋಡಿದಾಗ ಬ್ಯಾಗ್‌ನಲ್ಲಿದ್ದ 2 ಲಕ್ಷ ರೂ.ನಗದನ್ನು ಬ್ಯಾಗ್ ಸಮೇತ ಕಳವು ಮಾಡಿರುವುದು ಕಂಡು ಬಂದಿತ್ತು.ಪಕ್ಕದಲ್ಲಿ ಸೆಲೂನ್ ಅಂಗಡಿ ನಡೆಸುತ್ತಿದ್ದ ರಂಜಿತ್ ಅವರ ಬಳಿ ಹೋಗಿ ಕೇಳಿದಾಗ, ಅಪರಿಚಿತ ವ್ಯಕ್ತಿ ಜೊತೆ ಇನ್ನೊಬ್ಬ ವ್ಯಕ್ತಿ ಇದ್ದ ಬಗ್ಗೆ ತಿಳಿಸಿದ್ದರು.ಸದ್ರಿ ಆರೋಪಿಯು ಇದೇ ಪರಿಸರದ ಕೋಆಪರೇಟಿವ್ ಸೊಸೈಟಿ ಹಿಂಭಾಗದಲ್ಲಿ ರೂಮ್ ಮಾಡಿಕೊಂಡಿದ್ದ ಬಗ್ಗೆ ಮಾತನಾಡುತ್ತಿರುವುದಾಗಿ ತಿಳಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಅವರು ನೀಡಿದ್ದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸರು ಬಿಎನ್‌ಎಸ್ ಕಲಂ 305ರಡಿ ಪ್ರಕರಣ(ಅ.ಕ್ರ.72/2024)ದಾಖಲಿಸಿಕೊಂಡಿದ್ದರು.
ಬೆಳ್ತಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ನೇತೃತ್ವದಲ್ಲಿ ಧರ್ಮಸ್ಥಳ ಪೊಲೀಸ್ ಠಾಣಾ ಅಽಕಾರಿ ಮತ್ತು ಸಿಬ್ಬಂದಿಗಳ ತನಿಖಾ ತಂಡ ಕಾರ್ಯಾಚರಣೆ ನಡೆಸಿ, ಬೇರೆ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳಾದ ಮಹಮ್ಮದ್ ಇಕ್ಬಾಲ್ ಮತ್ತು ಮಹಮ್ಮದ್ ಶಹಬಾದ ಎಂಬವರನ್ನು ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದಾರೆ.ಆರೋಪಿಗಳಿಂದ ರೂ 20,000 ಹಣವನ್ನು ಸ್ವಾಧಿನಪಡಿಸಿಕೊಳ್ಳಲಾಗಿದೆ.ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.