ʼಮಾಜಿ ಶಾಸಕರಿಗೆ ನಿಮ್ಮ ಸರ್ಟಿಫಿಕೇಟ್ ಅಗತ್ಯವಿಲ್ಲʼ- ಮಾಜಿ ಶಾಸಕರ ಮೇಲಿನ ಹೇಳಿಕೆಗೆ ಹಾಲಿ ಶಾಸಕರಿಗೆ ಶೌಕತ್ ಆಲಿ ತಿರುಗೇಟು

0
  • ಮಾಜಿ ಶಾಸಕರ ವಿರುದ್ಧ ಸುಳ್ಳು ಆರೋಪ ರಾಜಕೀಯ ಪ್ರೇರಿತವಾದುದು
  • ಮಾಜಿ ಶಾಸಕರಿಗೆ ನಿಮ್ಮ ಸರ್ಟಿಫಿಕೇಟ್ ಅಗತ್ಯವಿಲ್ಲ-ಶಾಸಕರಿಂದ ಅನುದಾನ ತರಲಾಗದೇ ಬೂಟಾಟಿಕ ರಾಜಕಾರಣ
  • ಹಿರೇಬಂಡಾಡಿಯಲ್ಲಿ ಮಾಜಿ ಶಾಸಕರ ಮೇಲಿನ ಹೇಳಿಕೆಗೆ ಹಾಲಿ ಶಾಸಕರಿಗೆ ಶೌಕತ್ ಆಲಿ ತಿರುಗೇಟು

ಪುತ್ತೂರು: ಹಿರೇಬಂಡಾಡಿಯಲ್ಲಿ ನಡೆದ ಅಕ್ರಮ-ಸಕ್ರಮ ಬೈಠಕ್‌ನಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರು ಮಾಜಿ ಶಾಸಕರ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಅವರು ಮಾಜಿ ಶಾಸಕರ ಬಗ್ಗೆ ರಾಜಕೀಯ ಪ್ರೇರಿತ ಹೇಳಿಕೆಯಾಗಿದೆ. ಮಾಜಿ ಶಾಸಕರಿಗೆ ನಿಮ್ಮ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದು ಶಾಸಕರ ಹೇಳಿಕೆಗೆ ಹಿರೇಬಂಡಾಗಿ ಗ್ರಾ.ಪಂ ಮಾಜಿ ಅಧ್ಯಕ್ಷ ಶೌಕತ್ ಆಲಿ ತಿರುಗೇಟು ನೀಡಿದ್ದಾರೆ.


ಜ.2ರಂದು ಪುತ್ತೂರಿನಲ್ಲಿ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕರ ಮೇಲೆ ಟ್ಯಾಕ್ಸ್ ಕಲೆಕ್ಷನ್ ಎಂಬ ಶಬ್ದ ಬಳಸಿ ಸುಳ್ಳು ಆರೋಪ ಮಾಡಿದ್ದಾರೆ. ಇದರ ಬಗ್ಗೆ ನೀವು ಕೊಡುವ ಸರ್ಟಿಫಿಕೇಟ್ ಅಗತ್ಯವಿಲ್ಲ. ಮಾಜಿ ಶಾಸಕರ ರಾಜಕೀಯ ಜೀವನದ 35 ವರ್ಷಗಳ ಬಗ್ಗೆ ಹಿರೇಬಂಡಾಡಿ ಜನರಿಗೆ ತಿಳಿದಿದೆ. ಈಗಿನ ಶಾಸಕರಿಗೆ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ತರಲು ಸಾಧ್ಯವಾಗದೆ, ಒಂದೂವರೆ ವರ್ಷಗಳಿಂದ ಕೇವಲ ಘೋಷಣೆ ಮಾತ್ರ ಮಾಡುತ್ತಾ ಬೂಟಾಟಿಕೆ ರಾಜಕಾರಣ ಮಾಡುತ್ತಿದ್ದಾರೆ. ಇದರ ಬಗ್ಗೆ ಅವರ ಪಕ್ಷದ ಕಾರ್ಯಕರ್ತರೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಇದೆಲ್ಲವನ್ನು ಮರೆ ಮಾಚಲು ಈ ರೀತಿ ಆರೋಪ ಮಾಡಿದರೆ ಜನ ಅದನ್ನು ನಂಬುವುದಿಲ್ಲ. 2023ರ ಮಾರ್ಚ್31ಕ್ಕೆ ಅಕ್ರಮ-ಸಕ್ರಮದಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸ್ಥಗಿತಗೊಂಡಿದೆ. 2023ರ ಮಾರ್ಚ್ 26ಕ್ಕೆ ಮಾಜಿ ಶಾಸಕರ ಅಧ್ಯಕ್ಷತೆಯಲ್ಲಿ ಕೊನೆ ಅಕ್ರಮ-ಸಕ್ರಮ ಬೈಠಕ್ ನಡೆದಿದೆ. ಅದರ ಬಳಿಕ ಯಾರು ಶಾಸಕರಾಗಿದ್ದಾರೆ ಎನ್ನುವುದನ್ನು ಅವರು ತಿಳಿದುಕೊಳ್ಳಲಿ. ಅಕ್ರಮ-ಸಕ್ರಮದ ಕುರಿತು ಶಾಸಕರು ಅಧ್ಯಯನ ಮಾಡುವುದು ಉತ್ತಮ. 1992ರ ನಂತರ ಬೈಠಕ್‌ಗಳನ್ನು ನಡೆಯುತ್ತಲೇ ಇದೆ. ಡಿ.ವಿ ಸದಾನಂದ ಗೌಡ, ಮಲ್ಲಿಕಾ ಪ್ರಸಾದ್, ಶಕುಂತಳಾ ಟಿ ಶೆಟ್ಟಿ, ಸಂಜೀವ ಮಠಂದೂರು ಶಾಸಕರಾಗಿರುವ ಸಂದರ್ಭದಲ್ಲಿ ಬೈಠಕ್‌ಗಳನ್ನು ಮಾಡಿ ಕಡತಗಳನ್ನು ವಿಲೇವಾರಿ ಮಾಡಿರುವುದು ದಾಖಲೆಗಳಲ್ಲಿದ್ದರೂ ವೃಥಾ ಆರೋಪಗಳನ್ನು ಮಾಡುತ್ತಾ ಕಾಲ ಕಳೆಯುವ ಬದಲು ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿಲಿ ಎಂದು ಹೇಳಿದರು.

ನಮ್ಮ ಶಾಸಕರು ನಿರಂತರವಾಗಿ ಅಕ್ರಮ ಸಕ್ರಮದ ಬೈಠಕ್ ಮಾಡಿ ಆ ಭಾಗದ ಜನರ ಆಶೋಕ್ತರಗಳಿಗೆ ಸ್ಪಂದಿಸಿದ್ದಾರೆ. ಅಕ್ರಮ-ಸಕ್ರಮಕ್ಕೆ ಟ್ಯಾಕ್ಸ್ ಕಲೆಕ್ಷನ್ ಮಾಡಿದ್ದಾರೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ ಎನ್ನುವುದನ್ನು ಹೇಳಿದ್ದೀರಿ. ಇದರ ಬಗ್ಗೆ ಜನ ಸಾಮಾನ್ಯರು ಅರ್ಥಮಾಡಿಕೊಂಡಿದ್ದಾರೆ. ಶಾಸಕರು ಕೇವಲ ಮಾಧ್ಯಮಗಳಲ್ಲಿ ಆರೋಪ ಮಾಡುವುದಲ್ಲ. ದಾಖಲೆ ಸಹಿತ ಆರೋಪ ಮಾಡಲಿ. ನಾವು ಅದಕ್ಕೆ ಸೂಕ್ತ ದಾಖಲೆ ಸಹಿತ ಉತ್ತರ ನೀಡುತ್ತೇವೆ. ಮಾಜಿ ಶಾಸಕರು ಭ್ರಷ್ಟಾಚಾರ ಮಾಡಿದ್ದರೆ ಅದನ್ನು ಸಾಬೀತು ಪಡಿಸಲಿ. ಬಾಯಲ್ಲಿ ಪಟಾಕಿ ಬಿಟ್ಟರೆ ಸಾಲದು. ಮೈಕ್ ಮುಂದೆ ಎಲ್ಲ ಹೇಳಲು ಅಗುವುದಿಲ್ಲ ಎಂದಿರುವುದು ಯಾಕೆ? ಅದನ್ನೂ ತಿಳಿಸಲಿ. ಅಕ್ರಮ-ಸಕ್ರಮಕ್ಕೆ ಹಿರೇಬಂಡಾಡಿಯವರು 400-500ಜನರು ಬರುತ್ತಿದ್ದಾರೆ ಎಂದು ಶಾಸಕರು ಹೇಳಿದ್ದಾರೆ. ಆದರೆ ಅಲ್ಲಿ ಬೈಠಕ್ ನಡೆಸಿದ ಸಭಾಂಗಣದಲ್ಲಿ ಕೇವಲ ಇನ್ನೂರು ಆಸನಗಳಿಗೆ ಮಾತ್ರ ಅವಕಾಶವಿದೆ. ಅವರು ಗ್ರಾಮಕ್ಕೆ ಹೋದರೂ ಇನ್ನೂರು ಜನ ಜನ ಸೇರಿಸಲು ಸಾಧ್ಯವಾಗಿಲ್ಲ. ಇನ್ನು ಕಚೇರಿಗೆ ಬರಲು ಸಾಧ್ಯವಾ ಎಂದು ಪ್ರಶ್ನಿಸಿದರು.


ಭ್ರಷ್ಟಾಚಾರ ಫೋಷಣೆ ಮಾಡುತ್ತಿರುವವರು ಯಾರು?
ಕೆಲ ದಿನಗಳ ಹಿಂದೆ ಭ್ರಷ್ಟಾಚಾರದ ವಿಚಾರದಲ್ಲಿ ಶಾಸಕರು ದೂರವಾಣಿ ಕರೆ ಮಾಡಿ ವಿಚಾರಿಸುತ್ತಿದ್ದ ಸಂದರ್ಭದಲ್ಲಿ ಕಂದಾಯ ಇಲಾಖೆಯ ಸಿಬಂದಿ ನಾನು ನಿಮ್ಮ ಅಭಿಮಾನಿ ಅಂದಾಗ ಶಾಸಕರು ಸುಮ್ಮನಾದದ್ದು ಯಾಕೆ? ಹಾಗಾದರೆ ಭ್ರಷ್ಠಾಚಾರ ಪೋಷಣೆ ಮಾಡುತ್ತಿರುವವರು ಯಾರು? ಕಲೆಕ್ಷನ್ ಮಾಡುತ್ತಿರುವವರು ಯಾರು ಎನ್ನುವುದಕ್ಕೆ ಶಾಸಕರು ಉತ್ತರ ನೀಡಲಿ. ಅಕ್ರಮ ಸಕ್ರಮ ಸಭೆಯಲ್ಲಿ ಅವರದ್ದೇ ಊರಿನ ಗ್ರಾ.ಪಂ ಉಪಾಧ್ಯಕ್ಷರು ಮಾಡಿದ ಆರೋಪಗಳಿಗೆ ಸ್ಪಷ್ಟಣೆ ನೀಡಲಿ. ಅದನ್ನೆಲ್ಲಾ ಸರಿ ಮಾಡುವುದು ಬಿಟ್ಟು ಮಾಜಿ ಶಾಸಕರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುವುದಲ್ಲ ಎಂದರು


ಫಲಾನುಭವಿಗಳು ಶಾಸಕರ ಕಚೇರಿಗೆ ಬರಬೇಕಾಗಿರುವುದು ಯಾಕೆ?
ಅಕ್ರಮ-ಸಕ್ರಮಕ್ಕೆ ಸಂಬಂಧಿಸಿದ ಅರ್ಜಿಗಳು ಸಿದ್ದವಾದ ಕೂಡಲೇ ಫಲಾನುಭವಿಗಳು ಮುಂಚಿನ ದಿನ ಶಾಸಕರ ಕಚೇರಿಗೆ ಹೋಗಬೇಕು. ಸರಕಾರಿ ಅಧಿಕಾರಿಗಳ ಮೂಲಕ ಫಲಾನುಭವಿಗಳನ್ನು ಶಾಸಕರ ಕಚೇರಿಗೆ ಕರೆಸಿಕೊಳ್ಳುತ್ತಾರೆ. ಫಲಾನಿಭವಿಗಳು ಶಾಸಕರ ಕಚೇರಿಗೇ ಯಾಕೆ ಕರೆಸಿಕೊಳ್ಳುತ್ತಾರೆ. ಅದರ ಉದ್ದೇಶವನ್ನು ಹಾಲಿ ಶಾಸಕರು ಬಿಡಿಸಿ ಹೇಳಲಿ. ಅದನ್ನು ಮುಚ್ಚಿಡುವುದು ಯಾಕೆ ಎಂದು ಶೌಕತ್ ಆಲಿ ಪ್ರಶ್ನಿಸಿದರು.


ಉಪ್ಪಿನಂಗಡಿಯಲ್ಲಿ ಉದ್ಘಾಟನೆಯಾದದ್ದು ಶಾಸಕರಿಗೆ ಗೊತ್ತೇ ಇಲ್ಲ:
ಶಾಸಕರ ಕಾರ್ಯವೈಖರಿ ಬಗ್ಗೆ ನಮ್ಮ ಗ್ರಾಮದಲ್ಲಿ ಪಾಠ ಮಾಡಬೇಕಾದ ಅವಶ್ಯಕತೆ ಇಲ್ಲ. ಅದನ್ನು ಅವರ ಕಾರ್ಯಕರ್ತರೇ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಅವರದ್ದೇ ಸರಕಾರದ ಸಚಿವರು ಉಪ್ಪಿನಂಗಡಿಯಲ್ಲಿ ವಸತಿ ಗೃಹ ಉದ್ಘಾಟನೆ ಮಾಡಿ ಹೋದದ್ದು ಶಾಸಕರಿಗೆ ಗೊತ್ತೆ ಇಲ್ಲ. ಹಾಗಾದರೆ ಅವರ ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರು ಅಲ್ಲವಾ ಎಂದು ಪ್ರಶ್ನಿಸಿದರು. ನಂತರ ಹದಿನೈದು ದಿನಗಳಲ್ಲಿ ಉದ್ಘಾಟನೆ ಮಾಡುವಂತೆ ಅಧಿಕಾರಿಗಳು ಸೂಚಿಸುತ್ತಾರೆ. ಹಾಗಾದರೆ ಉಸ್ತುವಾರಿ ಸಚಿವರಿಗೆ ಅಶೋಕ್ ರೈ ಅಥವಾ ಅಶೋಕ್ ರೈ ಗಳಿಗೆ ಸಚಿವರು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಬೂಟಾಟಿಕೆ ರಾಜಕಾರಣದ ಬದಲು ಶಾಸಕರು ಈ ದ್ವಂದ್ವ ಸರಿಪಡಿಸಿಕೊಳ್ಳಲಿ. ಅವರೊಳಗಿನ ಗೊಂದಲಗಳನ್ನು ಸರಿಪಡಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಿ.


ಸರಕಾರಿ ಕಾರ್ಯಕ್ರಮದಲ್ಲಿ ಓಟು ಕೇಳುತ್ತಿದ್ದಾರೆ:
ಕಾರ್ಯಕ್ರಮದಲ್ಲಿ ಫಲಾನುಭವಿಗಳು ನೀಡಿದ ಹೇಳಿಕೆಗಳು ಅವರ ಸ್ವ ಹೇಳಿಕೆಗಳಲ್ಲಿ. ಫಲಾನುಭವಿಗಳು ಈ ರೀತಿಯಾಗಿಯೇ ಮಾತನಾಡಬೇಕು ಎಂದು ತಿಳಿಸಿ ನಂತರ ಹೇಳಿಕೆ ಕೊಡಿಸುವ ಕೆಲಸ ಮಾಡುತ್ತಿದ್ದಾರೆ.
ಅಕ್ರಮ-ಸಕ್ರಮ ಮಂಜೂರಾದ ಕೂಡಲೇ ಫಲಾನಿಭವಿಗಳಲ್ಲಿ ಶಾಸಕರು ನನಗೆ ಓಟು ನೀಡುವಂತೆ ಕೇಳುತ್ತಿದ್ದಾರೆ. ಅವರು ಸರಕಾರಿ ಸಾರ್ವಜನಿಕ ಸಭೆಯಲ್ಲಿ ಮತಯಾಚಿಸುತ್ತಿದ್ದಾರೆ. ಮತಯಾಚಿಸಲು ಈಗ ಚುನಾವಣೆ ಘೋಷಣೆ ಆಗಿದೆಯಾ. ಈಗ ಕೆಲಸ ಮಾಡಲಿ. ಚುನಾವಣೆ ಘೋಷಣೆಯಾದ ಬಳಿಕ ಪ್ರಚಾರ ಸಭೆಗಳಲ್ಲಿ ಮತಯಾಚಿಸಬೇಕೇ ಹೊರತು ಸರಕಾರಿ ಕಾರ್ಯಕ್ರಮದಲ್ಲಿ ಅಲ್ಲ ಎಂದು ಹೇಳಿದರು.


ಹಿರೇಬಂಡಾಡಿ ಗ್ರಾ. ಪಂ ಅಧ್ಯಕ್ಷ ಸದಾನಂದ ಶೆಟ್ಟಿ, ಸದಸ್ಯ ನಿತಿನ್, ದಯಾನಂದ ಸರೋಳಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here