ಇಚ್ಲಂಪಾಡಿಯ ವಿ.ಎನ್.ಚೆರಿಯನ್ ಎಸ್.ಐ.ಹುದ್ದೆಗೆ ಆಯ್ಕೆ

0

ನೆಲ್ಯಾಡಿ: ಮೂಲತ: ಕಡಬ ತಾಲೂಕಿನ ಇಚ್ಲಂಪಾಡಿ ನಿವಾಸಿ, ಪ್ರಸ್ತುತ ಬಂಟ್ವಾಳ ನಗರ ಠಾಣೆಯಲ್ಲಿ ಪೊಲೀಸ್ ಕಾನ್ಸ್‌ಸ್ಟೇಬಲ್ ಆಗಿರುವ ನಿವೃತ್ತ ಯೋಧ ವಿ.ಎನ್.ಚೆರಿಯನ್ ಅವರು ಎಸ್.ಐ.ಹುದ್ದೆಗೆ ಆಯ್ಕೆಗೊಂಡಿದ್ದಾರೆ.

2024ರ ಅಕ್ಟೋಬರ್ ತಿಂಗಳಿನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 402 ಸಿವಿಲ್ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗೆ ನಡೆದ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಚೆರಿಯನ್ ಅವರು ಇದೀಗ ಸಿವಿಲ್ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಆಗಿ ಆಯ್ಕೆಯಾಗಿದ್ದಾರೆ.


ಇಚ್ಲಂಪಾಡಿ ಗ್ರಾಮದ ನೇರ್ಲ ದಿ.ವರ್ಗೀಸ್ ಕೆ.ಸಿ.,ಹಾಗೂ ದಿ.ಲೀಲಮ್ಮ ದಂಪತಿ ಪುತ್ರರಾಗಿರುವ ಚೆರಿಯನ್ ಅವರು ನೇರ್ಲ ಸರಕಾರಿ ಹಿ.ಪ್ರಾ.ಶಾಲೆ, ನೂಜಿಬಾಳ್ತಿಲ ಬೆಥನಿ ಹಾಗೂ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. 1993ರಲ್ಲಿ ಭಾರತೀಯ ಭೂ ಸೇನೆಗೆ ಸೇರ್ಪಡೆಗೊಂಡ ಅವರು ಶ್ರೀನಗರ, ಲಡಾಕ್, ಪಂಜಾಬ್, ಹರಿಯಾಣ, ಸಿಮ್ಲಾ, ಹಿಮಾಚಲ ಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ, ದೆಹಲಿ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆಯೇ ವಿದ್ಯಾಭ್ಯಾಸ ಮುಂದುವರಿಸಿದ ಚೆರಿಯನ್ ಅವರು ಪದವಿ ಪೂರೈಸಿದ್ದರು.


ಭಾರತೀಯ ಭೂಸೇನೆಯಲ್ಲಿ 20ವರ್ಷ ಸೇವೆ ಸಲ್ಲಿಸಿ ನಿವೃತ್ತಿಯ ಬಳಿಕ 2014ರಲ್ಲಿ ಸಿವಿಲ್ ಪೊಲೀಸ್ ಕಾನ್ಸ್‌ಸ್ಟೇಬಲ್ ಆಗಿ ನೇಮಕಗೊಂಡು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯಕ್ಕೆ ಸೇರ್ಪಡೆಯಾಗಿದ್ದರು. ಪ್ರಸ್ತುತ ಇವರು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ನಡೆದ ಸಿವಿಲ್ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹುದ್ದೆಯ ಲಿಖಿತ ಪರೀಕ್ಷೆ ಬರೆದ ವಿ.ಎನ್.ಚೆರಿಯನ್ ಅವರು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಇದೀಗ ಸಿವಿಲ್ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಆಗಿ ಆಯ್ಕೆಗೊಂಡಿದ್ದಾರೆ.


ಪ್ರಸ್ತುತ ಮಂಗಳೂರಿನ ಕಾವೂರಿನಲ್ಲಿ ನೆಲೆಸಿರುವ ವಿ.ಎನ್.ಚೆರಿಯನ್ ಅವರ ಪತ್ನಿ ಚಿನ್ನಮ್ಮ ಅವರು ಮಂಗಳೂರು ಎ.ಜೆ.ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ರರಾದ ಆಶಿಶ್ ಹಾಗೂ ಆಶಿತ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here