ಲೋಕೇಶ್ ಕಾಯರ್ಗ,ಕೆ.ಎಚ್.ದೇವಿಪ್ರಸಾದ್ ರೈಯವರಿಗೆ ಬೆಂಗಳೂರು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ-ವಿಜಯಲಕ್ಷ್ಮೀ ಶಿಬರೂರುಗೆ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ

0

ಬೆಂಗಳೂರು:ಪುತ್ತೂರು ಮೂಲದ ಮೂವರು ಪತ್ರಕರ್ತರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದಾರೆ.ಬೆಂಗಳೂರು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಲೋಕೇಶ್ ಕಾಯರ್ಗ, ಕೆ.ಎಚ್.ದೇವಿಪ್ರಸಾದ್ ರೈ ಆಯ್ಕೆಯಾಗಿದ್ದಾರೆ.ಕರ್ನಾಟಕ ಸರಕಾರದಿಂದ ನೀಡಲಾಗುವ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ ವಿಜಯಲಕ್ಷ್ಮೀ ಶಿಬರೂರು ಅವರು ಆಯ್ಕೆಯಾಗಿದ್ದಾರೆ.


ಲೋಕೇಶ್ ಕಾಯರ್ಗರಿಗೆ ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ:
ಪ್ರಸ್ತುತ ಮೈಸೂರು ನಿವಾಸಿಯಾಗಿರುವ ಲೋಕೇಶ್ ಕಾಯರ್ಗ ಇವರು ಸವಣೂರಿನ ದಿ|ವೀರಪ್ಪ ಗೌಡ ಮತ್ತು ಸೀತಮ್ಮ ದಂಪತಿ ಪುತ್ರ.ಸವಣೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ,ನವೋದಯ ಹೈಸ್ಕೂಲ್ ಬೆಟ್ಟಂಪಾಡಿ ಮತ್ತು ಪುತ್ತೂರು ಜೂನಿಯರ್ ಕಾಲೇಜಿನಲ್ಲಿ ಹೈಸ್ಕೂಲ್ ಮತ್ತು ಪದವಿಪೂರ್ವ ಶಿಕ್ಷಣ, ಪುತ್ತೂರು ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪಡೆದಿರುತ್ತಾರೆ.


ಮಂಗಳೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ 1994ರಲ್ಲಿ ಕೆನರಾ ಟೈಮ್ಸ್ ಪತ್ರಿಕಾ ಬಳಗ ಸೇರಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದ ಇವರು 3 ದಶಕಗಳ ಅವಧಿಯಲ್ಲಿ ಸಂಯುಕ್ತ ಕರ್ನಾಟಕ, ಜನವಾಹಿನಿ, ವಿಜಯ ಕರ್ನಾಟಕ, ಪ್ರಜಾನುಡಿ, ಆಂದೋಲನ ಸೇರಿದಂತೆ ನಾಡಿನ ಹಲವು ಪತ್ರಿಕೆಗಳಲ್ಲಿ, ಬೆಂಗಳೂರು, ಹುಬ್ಬಳ್ಳಿ, ಮೈಸೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಲಂಡನ್‌ನ ಬಿಬಿಸಿ ಮಾಧ್ಯಮ ಸಂಸ್ಥೆಯ ಅಡ್ವಾನ್ಸ್‌ಡ್ ಜರ್ನಲಿಸಂ ಕೋರ್ಸ್ ಪೂರೈಸಿರುವ ಇವರು ಕನ್ನಡ ಜನಾಂತರಂಗ, ಜನವಾಹಿನಿ ಮತ್ತು ವಿಜಯ ಕರ್ನಾಟಕ ಪತ್ರಿಕೆಗಳ ಆರಂಭಿಕ ತಂಡದಲ್ಲಿದ್ದರು.ವಿಜಯ ಕರ್ನಾಟಕ ಪತ್ರಿಕೆಯಲ್ಲಿ 20 ವರ್ಷಗಳ ಕಾಲ ನಾನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು.2005ರಲ್ಲಿ ಕೆಪಿಎಸ್‌ಸಿ ಪರೀಕ್ಷಾ ಹಗರಣವನ್ನು ಬಯಲಿಗೆಳೆದ ಕಾರಣಕ್ಕೆ ಆಯೋಗದಿಂದ ಮಾನನಷ್ಟ ಖಟ್ಲೆ ಎದುರಿಸಿದ್ದ ಇವರು, ಈ ಕೇಸನ್ನು ಗೆದ್ದು ವೃತ್ತಿಧರ್ಮವನ್ನು ಎತ್ತಿ ಹಿಡಿದಿದ್ದರು.2013ರಲ್ಲಿಯೇ ಸೈಬರ್ ವಂಚನೆಗೆ ಸಂಬಂಧಿಸಿ ಕುಟುಕು ಕಾರ್ಯಾಚರಣೆ ನಡೆಸಿ, ಆಫ್ರಿಕಾ ಮೂಲದ ಇಬ್ಬರು ಆರೋಪಿಗಳ ಬಂಧನಕ್ಕೆ ಕಾರಣರಾಗಿದ್ದರು.3 ದಶಕಗಳ ಸೇವಾವಧಿಯಲ್ಲಿ, ಸುದ್ದಿ ಸಂಪಾದಕ, ಸ್ಥಾನಿಕ ಸಂಪಾದಕ, ಸಂಪಾದಕರಾಗಿ ನಾನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಇವರು ನೂರಾರು ಕಿರಿಯ ಪತ್ರಕರ್ತರಿಗೆ ಮಾರ್ಗದರ್ಶನ ಮಾಡಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ.ಬೆಂಗಳೂರು ಪ್ರೆಸ್‌ಕ್ಲಬ್, ಕರ್ನಾಟಕ ರಾಜ್ಯ ಪತ್ರಕರ್ತರ ಸಹಕಾರ ಸಂಘ ಸೇರಿದಂತೆ ನಾನಾ ಸಂಘಟನೆಗಳ ಪದಾಧಿಕಾರಿಯಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ.ಪ್ರಸ್ತುತ ವಿಶ್ವವಾಣಿ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕರಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ಕೆ.ಎಚ್.ದೇವಿಪ್ರಸಾದ್ ರೈ:
ಬೆಂಗಳೂರು ಪ್ರೆಸ್ ಕ್ಲಬ್ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ಹಿರಿಯ ಪತ್ರಕರ್ತರಾಗಿರುವ ಪುತ್ತೂರು ಮೂಲದ ಕೆ.ಎಚ್.ದೇವಿಪ್ರಸಾದ್ ರೈ ಆಯ್ಕೆಯಾಗಿದ್ದಾರೆ.ಪತ್ರಿಕೋದ್ಯಮದ ಜೀವಮಾನ ಸಾಧನೆಗಾಗಿ ಇವರಿಗೆ ಈ ಪ್ರಶಸ್ತಿ ಲಭಿಸಿದೆ.ಜ.12ರಂದು ಬೆಂಗಳೂರು ಪ್ರೆಸ್ ಕ್ಲಬ್ ಆವರಣದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.


ಪುತ್ತೂರಿನ ಬಪ್ಪಳಿಗೆ ನಿವಾಸಿಯಾಗಿರುವ ಹಿರಿಯ ಯಕ್ಷಗಾನ ಕಲಾವಿದ ಕೆ.ಎಚ್.ದಾಸಪ್ಪ ರೈ ಹಾಗೂ ದಿ.ಚಿತ್ರಾವತಿ ರೈಯವರ ಪುತ್ರರಾಗಿರುವ ದೇವಿಪ್ರಸಾದ್ ರೈ ಪುತ್ತೂರಿನ ಫಿಲೋಮಿನಾ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿ ಉದಯ ಟಿವಿಯಲ್ಲಿ ವಾರ್ತಾವಾಚಕರಾಗಿ ವೃತ್ತಿ ಜೀವನ ಆರಂಭಿಸಿದ್ದರು.ನಂತರ ಉಪಸಂಪಾದಕರಾಗಿ, ಹಿರಿಯ ವರದಿಗಾರರಾಗಿ ಸುದೀರ್ಘ ಸೇವೆ ಸಲ್ಲಿಸಿ ಇದೀಗ ಅರ್ನಬ್ ಗೋ ಸ್ವಾಮಿ ಮಾಲೀಕತ್ವದ ರಿಪಬ್ಲಿಕ್ ಕನ್ನಡದಲ್ಲಿ ಕೋ ಆರ್ಡಿನೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಹತ್ತು ಹಲವು ಪ್ರಶಸ್ತಿಗೆ ಭಾಜನರಾಗಿರುವ ದೇವಿಪ್ರಸಾದ್ ರೈಯವರು ಪತ್ನಿ ಸುಧಿಕ್ಷಾ,ಮಕ್ಕಳಾದ ನಿಷ್ಕರ್ಶ್ ಹಾಗೂ ಮಿಥಾಂಶ್ ಅವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.


ವಿಜಯಲಕ್ಷ್ಮೀ ಶಿಬರೂರುರವರಿಗೆ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ:
ಕರ್ನಾಟಕ ಸರ್ಕಾರವು ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಪತ್ರಕರ್ತರಿಗೆ ನೀಡುವ, 2017ರಿಂದ 2023ರವರೆಗಿನ ಅಭಿವೃದ್ದಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಪ್ರಕಟಿಸಿದ್ದು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ ವಿಜಯಲಕ್ಷ್ಮೀ ಶಿಬರೂರು ಅವರು ಆಯ್ಕೆಯಾಗಿದ್ದಾರೆ.


ಸರ್ಕಾರವು 2001ನೇ ಸಾಲಿನಿಂದ ಈ ಪ್ರಶಸ್ತಿಗಳನ್ನು ನೀಡಲು ಪ್ರಾರಂಭಿಸಿತ್ತು.2016ರವರೆಗೆ ನಾಡಿನ 32 ಜನ ಹಿರಿಯ ಪತ್ರಕರ್ತರು ಈ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ.ಕೋವಿಡ್ ಹಾಗೂ ಇತರೆ ಕಾರಣಗಳಿಂದ ವಿಳಂಬವಾಗಿದ್ದ 2017ರಿಂದ 2023ರ ವರೆಗಿನ ಏಳು ವರ್ಷಗಳ ಅವಧಿಯ ಪ್ರಶಸ್ತಿಗಳಿಗೆ ಅರ್ಹ ಪತ್ರಕರ್ತರನ್ನು ಹಿರಿಯ ಪತ್ರಕರ್ತರಾದ ಸನತ್ ಕುಮಾರ್ ಬೆಳಗಲಿ ಹಾಗೂ ಕೆ.ಶಿವಕುಮಾರ್ ಅವರಿದ್ದ ಸಮಿತಿಯು ಆಯ್ಕೆ ಮಾಡಿದೆ.ಪ್ರಶಸ್ತಿಯು ತಲಾ ಒಂದು ಲಕ್ಷ ರೂಪಾಯಿ ನಗದು, ಸ್ಮರಣಿಕೆ, ಅಭಿನಂದನಾ ಪತ್ರ ಒಳಗೊಂಡಿರುತ್ತದೆ.


ವಿಜಯಲಕ್ಷ್ಮೀ ಶಿಬರೂರು ಅವರಿಗೆ 2017ರ ಸಾಲಿನ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪ್ರಕಟಿಸಲಾಗಿದೆ.ಬಜತ್ತೂರು ಸಮೀಪದ ಶಿಬರೂರು ಮೂಲದವರಾಗಿರುವ ವಿಜಯಲಕ್ಷ್ಮಿ ಅವರು, ಎರಡು ವರ್ಷ ಮುದ್ರಣ ಮಾಧ್ಯಮ ಮತ್ತು 17 ವರ್ಷ ಎಲೆಕ್ಟ್ರಾನಿಕ್ ಮಾಧ್ಯಮ ಸೇರಿ 19 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಸುವರ್ಣ ನ್ಯೂಸ್ ಕನ್ನಡ, ಟಿವಿ 9 ಕನ್ನಡ, ಈಟಿವಿ ಕನ್ನಡ ಚಾನೆಲ್, ಸಂಯುಕ್ತ ಕರ್ನಾಟಕ, ಜನವಾಹಿನಿ ಕನ್ನಡ ಪತ್ರಿಕೆಯಲ್ಲಿ, ಮಂಗಳೂರು ಆಕಾಶವಾಣಿಯಲ್ಲಿ ಇವರು ಕಾರ್ಯಕ್ರಮ ನಿರ್ಮಾಪಕರಾಗಿಯೂ ಕಾರ್ಯನಿರ್ವಹಿಸಿದ್ದರು.ಅರಣ್ಯ ಸಂರಕ್ಷಣೆ, ಅಪಾಯಕಾರಿ ಆಹಾರ ಪದಾರ್ಥಗಳು, ಪ್ಲಾಸ್ಟಿಕ್ ಅಪಾಯಗಳು ಮತ್ತಿತರ ಜಾಗೃತಿ ಮೂಡಿಸುವ ವರದಿಗಳನ್ನು ಎಲೆಕ್ಟ್ರಾನಿಕ್ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಪರಿಣಾಮಕಾರಿಯಾಗಿ ಬಿತ್ತರಿಸಿದ್ದಾರೆ.ಕಳೆದ ಸುಮಾರು 7 ತಿಂಗಳುಗಳಿಂದ ಇವರು ನ್ಯೂಸ್ 18 ಕನ್ನಡ ಚಾನೆಲ್‌ನಲ್ಲಿ ಬೆಂಗಳೂರು ಮತ್ತು ವಿಶೇಷ ತನಿಖಾ ವರದಿಗಳ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಪರಿಸರ ಜಾಗೃತಿಯ ವರದಿಗಳನ್ನು ಪ್ರಕಟಿಸಿದ್ದಾರೆ.ಕರ್ನಾಟಕ ಮಾಧ್ಯಮ ಅಕಾಡೆಮಿ ಅವಾರ್ಡ್, ನಮ್ಮ ಬೆಂಗಳೂರು ಅವಾರ್ಡ್, ಮಾಧ್ಯಮ ರತ್ನ ಸೇರಿದಂತೆ ಇವರಿಗೆ ಹಲವು ಪ್ರಶಸ್ತಿ,ಸನ್ಮಾನಗಳು ಲಭಿಸಿವೆ.

LEAVE A REPLY

Please enter your comment!
Please enter your name here