ಪುತ್ತೂರು; ನರಿಮೊಗರಿನ ಸರಸ್ವತಿ ವಿದ್ಯಾ ಮಂದಿರದ ಶಿಶು ಮಂದಿರ, ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳ ವರ್ಧಂತ್ಯುತ್ಸವವು ಸರಸ್ವತಿ ವಂದನಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜ.2ರಂದು ಶಾಲಾ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ದ್ವಾರಕಾ ಕಾರ್ಪೋರೇಶನ್‌ನ ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್ ಮಾತನಾಡಿ, ವಿದ್ಯೆ ಎಂದರೆ ಸಂಸ್ಕಾರ. ಒಬ್ಬ ವ್ಯಕ್ತಿ ಎಷ್ಟು ಕಲಿತಿದ್ದಾನೆ ಎನ್ನುವುದನ್ನು ಅವರಲ್ಲಿನ ಸಂಸ್ಕಾರದಲ್ಲಿ ಅರಿವಾಗುತ್ತದೆ. ಸಂಸ್ಕಾರ ಇಲ್ಲದ ವ್ಯಕ್ತಿ ಎಷ್ಟೇ ದೊಡ್ಡವನಾದರೂ ಅದು ನಿಷ್ಪಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಶಿಕ್ಷಣ ಅಂದರೆ ಏನು ಎಂದು ಯೋಚಿಬೇಕಾದ ಕಾಲದಲ್ಲಿದ್ದೇವೆ. ಪುಸ್ತಕದಲ್ಲಿನ ವಿಷಯಗಳನ್ನು ಬಾಯಿಪಾಟ ಮಾಡಿ ಬರೆದು ಪಡೆಯುವ ಅಂಕವೇ ವಿದ್ಯೆಯಲ್ಲ ಎಂದರು. ಸರಸ್ವತಿ ವಿದ್ಯಾ ಮಂದಿರವನ್ನು ಏಕಾಂಗಿಯಾಗಿ ಕಟ್ಟಿ ಭಗೀರಥ ಪ್ರಯತ್ನದಿಂದ ಬೆಳೆಸಿ ಮುನ್ನಡೆಸುತ್ತಿದ್ದಾರೆ. ಈಗ 400ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದು ಸಂಚಾಲಕರ ಸಾಧನೆ ಅದ್ಬುತವಾಗಿದೆ. ಇದಕ್ಕೆ ಪೋಷಕರು ಸಹಕಾರ ನೀಡಿದ್ದು ಸಂಸ್ಥೆಯ ಬೆಳೆಯಲು ಸಹಕಾರಿಯಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಶಿವಳ್ಳಿ ಸಂಪದ ಪುತ್ತೂರು ವಲಯದ ಅಧ್ಯಕ್ಷ ಸುಧೀಂದ್ರ ಕುದ್ದಣ್ಣಾಯ ಮಾತನಾಡಿ, ಮೂರು ಮಕ್ಕಳಿಂದ ಪ್ರಾರಂಭವಾದ ಸರಸ್ವತಿ ವಿದ್ಯಾಮಂದಿರದಲ್ಲಿ ಪ್ರಸ್ತುತ 400 ಅಧಿಕ ವಿದ್ಯಾರ್ಥಿಗಳಿದ್ದು ಸಂಸ್ಥಾಪಕರ ಸಾಧನೆ ಶ್ಲಾಘನೀಯ. ತಾಲೂಕಿನ ಶಾಲೆಗಳ ಪೈಕಿ ಎರಡನೇ ಸ್ಥಾನ ಪಡೆದಿರುವುದು ಬಹುದೊಡ್ಡ ಸಾಧನೆಯಾಗಿದೆ. ಮಕ್ಕಳಿಗೆ ಜೀವನಕ್ಕೆ ಆವಶ್ಯಕವಾದ ಸಂಸ್ಕಾರಯುತ ಶಿಕ್ಷಣ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶಲ್ಲಿ ಕಠಿಣ ಪರಿಶ್ರಮದಿಂದ ಮುನ್ನಡೆಸುತ್ತಿರುವ ಶಿಕ್ಷಣ ಸಂಸ್ಥೆಗೆ ಪೋಷಕರ ಹಾಗೂ ಹಿರಿಯ ವಿದ್ಯಾರ್ಥಿಗಳ ಸಹಕಾರ ಅಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸರಸ್ವತಿ ವಿದ್ಯಾ ಮಂದಿರದ ಅಧ್ಯಕ್ಷ ಅವಿನಾಶ್ ಕೊಡಂಕಿರಿ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತೀಯ ಸಂಸ್ಕೃತಿಯ ಅಡಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ಮೈಗೂಡಿಸಿಕೊಂಡಿದ್ದು ಇಲ್ಲಿ ಕಲಿತ ವಿದ್ಯಾರ್ಥಿಗಳೇ ನಮಗೆ ಬ್ರಾಂಡ್ ಅಂಬಾಸಿಡರ್‌ಗಳಾಗಿದ್ದಾರೆ. 2011ರಲ್ಲಿ ಪ್ರಾರಂಭಗೊಂಡ ನಮ್ಮ ಶಾಲೆಯಲ್ಲಿ ಈ ವರ್ಷ 10ನೇ ತರಗತಿಯ 3ನೇ ಬ್ಯಾಚ್‌ನಲ್ಲಿದೆ. ಫಲಿತಾಂಶವೇ ನಮ್ಮ ಧ್ಯೋತಕವಾಗಿದೆ. ಶಿಕ್ಷಣದ ಗುಣಮಟ್ಟದಲ್ಲಿ ನಮ್ಮ ಶಾಲೆಯು ತಾಲೂಕಿನಲ್ಲಿ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ 12ನೇ ಸ್ಥಾನದಲ್ಲಿದೆ. ಪಠ್ಯ ಶಿಕ್ಷಣದ ಜೊತೆಗೆ ಭರತನಾಟ್ಯ, ಕರಾಟೆ, ಯೋಗ, ಕ್ರೀಡಾ ಚಟುವಟಿಕೆ ವಿಶಾಲ ಶ್ರೇಣಿ ಸ್ಪರ್ಧೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಾಲಕರ ಹಾಸ್ಟೆಲ್ ಪ್ರಾರಂಭಿಸಲಾಗಿದೆ. ಹೊಸ ನಿವೇಶನ 200 ಮೀ ಟ್ರಾಕ್ ನಿರ್ಮಾಣಮಾಡಲಾಗಿದೆ. ಅತ್ಯುತ್ತಮ ದೇಸಿ ಶಿಕ್ಷಣ ನೀಡುವುದೆ ನಮ್ಮ ಗುರಿಯಾಗಿದೆ ಎಂದರು.
ವರದ ಕುಮಾರಿ, ಶಾಲಾ ಆಡಳಿತಾಧಿಕಾರಿ ಶುಭಾ ಅವಿನಾಶ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ವಿಶ್ವನಾಥ ಬಲ್ಯಾಯ, ಶಾಲಾ ಸುರಕ್ಷತಾ ಸಮಿತಿ ಅಧ್ಯಕ್ಷ ಸುರೇಶ್ ಭಟ್ ಸೂರ್ಡೇಲು, ವಿದ್ಯಾರ್ಥಿ ನಾಯಕ ಯಶ್ವಿನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌರವಾರ್ಪಣೆ
2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ನಡೆಸಲಾದ ಕ್ರೀಡಾ ಕೂಟ ಹಾಗೂ ಇತರ ಸ್ಪರ್ಧೆಗಳಲ್ಲಿ ವಿಜೇತರಾದವರು ಬಹುಮಾನ ವಿತರಿಸಲಾಯಿತು.
ಸರಸ್ವತಿ ವಿದ್ಯಾ ಮಂದಿರದ ಅಧ್ಯಕ್ಷ ಅವಿನಾಶ್ ಕೊಡಂಕಿರಿ ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯಗುರು ದಿವ್ಯಾ ವರದಿ ವಾಚಿಸಿದರು. ಸಂಸ್ಕೃತ ಶಿಕ್ಷಕ ಪರೀಕ್ಷಿತ್ ತೋಳ್ಪಾಡಿ ವಂದಿಸಿದರು. ಪ್ರಾಥಮಿಕ ಶಾಲಾ ಮುಖ್ಯಗುರು ಶ್ರೀಲಕ್ಷ್ಮೀ ಮೊಳೆಯಾರ, ದೈಹಿಕ ಶಿಕ್ಷಣ ಶಿಕ್ಷಕ ರಾಧಾಕೃಷ್ಣ, ಸಹಶಿಕ್ಷಕಿ ಹರ್ಷಿಲಿ, ವಿದ್ಯಾರ್ಥಿಗಳಾದ ಲಿಖಿತಾ ಪ್ರಾರ್ಥಿಸಿದರು. ಹಿಮಾ, ನಿತ್ಯಾ ಎಸ್.ಶೆಟ್ಟಿ, ಸಮೀಕ್ಷಾ, ಕಾರ್ತಿಕ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಬಾಲಕೃಷ್ಣ ಉಡ್ಡಂಗಳ ನಿರ್ದೇಶನದಲ್ಲಿ ’ಗುರು ದಕ್ಷಿಣೆ’ ಎಂಬ ಯಕ್ಷಗಾನ, ನಂತರ ಶಿಶು ಮಂದಿರದ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ವೈವಿಧ್ಯ, ಸಭಾ ಕಾರ್ಯಕ್ರಮದ ಬಳಿಕ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮ ವೈವಿದ್ಯಗಳು ಮೇಲೈಸಿದವು.